ಎನ್‌ಡಿಎ ಸರ್ಕಾರ ಕಿತ್ತೊಗೆಯಬೇಕಿದೆ; ಪ್ರಕಾಶ ರಾಠೋಡ

ಸೋಮವಾರ, ಏಪ್ರಿಲ್ 22, 2019
33 °C

ಎನ್‌ಡಿಎ ಸರ್ಕಾರ ಕಿತ್ತೊಗೆಯಬೇಕಿದೆ; ಪ್ರಕಾಶ ರಾಠೋಡ

Published:
Updated:

ವಿಜಯಪುರ: ‘ದೇಶದಲ್ಲಿ ದ್ವೇಷದ ವಾತಾವರಣ ಸೃಷ್ಟಿ ಮಾಡಿರುವ ಕೇಂದ್ರದ ಎನ್‌ಡಿಎ ಸರ್ಕಾರವನ್ನು ಕಿತ್ತೊಗೆಯಬೇಕಿದೆ. ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆಯೂ ಆಗಬೇಕಿದೆ’ ಎಂದು ಕೆಪಿಸಿಸಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಹೇಳಿದರು.

‘ಸಿಬಿಐ, ಇಡಿ ಮೊದಲಾದ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರಪಯೋಗಪಡಿಸಿಕೊಳ್ಳುತ್ತಿದೆ. ನಾವು ಐಟಿ ದಾಳಿಗೆ ಅಡ್ಡಿ ಬರುವುದಿಲ್ಲ, ಆದರೆ ಕೇವಲ ಕಾಂಗ್ರೆಸ್ ಪಕ್ಷದವರ ಮೇಲೆಯೇ ದಾಳಿ ಸೀಮಿತಗೊಳಿಸುತ್ತಿರುವುದು ದೊಡ್ಡ ಅಪರಾಧ’ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಪ್ರಸ್ತುತ ಕೇಂದ್ರ ಸರ್ಕಾರ ಉದ್ಯಮ ಪತಿಗಳ ಪರವಾಗಿ ಕೆಲಸ ಮಾಡುತ್ತಿದ್ದು, ಉದ್ಯಮ ಪತಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದೆ. ದೇಶದ ನಾಗರಿಕರು ಬೆವರು ಸುರಿಸಿ ಸರ್ಕಾರಕ್ಕೆ ಕಟ್ಟಿದ ತೆರಿಗೆ ಹಣವನ್ನು ಉದ್ಯಮ ಪತಿಗಳ ಸಾಲ ಮನ್ನಾ ಮಾಡಲು ವಿನಿಯೋಗಿಸಿದೆ’ ಎಂದು ಆರೋಪಿಸಿದರು.

‘ಜಿಎಸ್‌ಟಿ ದರ ಸಮತೋಲನವನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ವಿಫಲವಾಗಿದೆ. ಜಿಎಸ್‌ಟಿ ಹೆಸರಿನಲ್ಲಿ ಜನ ಸಾಮಾನ್ಯರಿಗೆ ಹೊರೆಯನ್ನು ಕೇಂದ್ರ ಹೊರಿಸಿದೆ. ಇದಕ್ಕೆ ಬದಲಾವಣೆ ತಂದು ಯಾರಿಗೂ ಹೊರೆಯಾಗದಂತೆ ವೈಜ್ಞಾನಿಕ ರೀತಿಯಲ್ಲಿ ಪುನರ್ ಜಾರಿಗೊಳಿಸಲಾಗುವುದು. ಇದು ಕಾಂಗ್ರೆಸ್ ಸರ್ಕಾರದ ಕಲ್ಪನೆ, ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದ ಸಂದರ್ಭದಲ್ಲಿ ವಿರೋಧಿಸಿದ್ದರು. ಇದೀಗ ಅದೇ ಜಿಎಸ್‌ಟಿಗೆ ತಮ್ಮ ಲೇಬಲ್ ಹಚ್ಚಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ’ ಪ್ರಕಾಶ ಲೇವಡಿ ಮಾಡಿದರು.

ಕ್ರಾಂತಿಕಾರಕ ಪ್ರಣಾಳಿಕೆ:

‘ಕಾಂಗ್ರೆಸ್ ಪಕ್ಷ ಕ್ರಾಂತಿಕಾರಕ ಪ್ರಣಾಳಿಕೆಯನ್ನು ಸಿದ್ಧಪಡಿಸಿ ಜನರ ಮುಂದೆ ಇರಿಸಿದೆ. ಈ ಹಿಂದೆ ಬಿಜೆಪಿ ನಾಯಕರು ಪ್ರಣಾಳಿಕೆ ಮೂಲಕ ನೀಡಿದ ವಾಗ್ದಾನವನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಪ್ರಣಾಳಿಕೆಯ ಯಾವೊಂದು ವಿಷಯವನ್ನು ಅನುಷ್ಠಾನಗೊಳಿಸಿಲ್ಲ. ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ’ ಎಂದು ಹೆಮ್ಮೆಯಿಂದ ರಾಠೋಡ ಹೇಳಿದರು.

‘ನರೇಗಾ ಮಾದರಿಯಲ್ಲಿ ಇನ್ನೊಂದು ಕ್ರಾಂತಿಕಾರಕ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ್ದೇವೆ. ಪ್ರತಿ ಬಡ ಕುಟುಂಬಕ್ಕೆ ವಾರ್ಷಿಕ ₹ 72,000 ನೀಡುವ ವಿಶೇಷ ಯೋಜನೆಯನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ, ಕುಟುಂಬವನ್ನು ಪೋಷಿಸುವ ಮಹಿಳೆಯ ಬ್ಯಾಂಕ್ ಖಾತೆಗೆ ಈ ಹಣ ಜಮಾವಣೆ ಮಾಡುವ ಭರವಸೆ ನೀಡಿದ್ದೇವೆ. ಇದರಿಂದ ಬಡತನ ಸಂಪೂರ್ಣವಾಗಿ ನಿರ್ಮೂಲನೆಯಾಗಲಿದೆ’ ಎಂದರು.

‘ಆರೋಗ್ಯ ಆಯೋಗದ ಮೂಲಕ ಉಚಿತ ಆರೋಗ್ಯ ಸೇವೆ, ರೈತರನ್ನು ಸಾಲಮುಕ್ತಿಯಾಗಿಸಲು ವಿಶೇಷ ಕಾರ್ಯ ಯೋಜನೆ... ಹೀಗೆ ಅನೇಕ ಜನಪರ ಘೋಷಣೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದ್ದೇವೆ’ ಎಂದು ರಾಠೋಡ ಹೇಳಿದರು.

‘ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ ಗೆಲುವು ಸಾಧಿಸುವುದು ನಿಶ್ಚಿತ. ನನ್ನ ಕೈಯಿಂದ ಗೆಲುವು ಸಾಧಿಸಲು ಸಾಧ್ಯವಾಗದಿರಬಹುದು, ಆದರೆ ಈ ಬಾರಿ ಸಹೋದರಿ ಲೋಕಸಭೆ ಪ್ರವೇಶಿಸುವುದು ಖಚಿತ’ ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ, ಮುಖಂಡ ಅಬ್ದುಲ್‌ ಹಮೀದ್ ಮುಶ್ರೀಫ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಬಕ್ಷಿ, ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಹಾಪುರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !