ಗುರುವಾರ , ನವೆಂಬರ್ 14, 2019
23 °C

ಮಹದೇಶ್ವರ ಬೆಟ್ಟ: ಭಾರಿ ಮಳೆಗೆ ಕುಸಿದ ರಸ್ತೆ

Published:
Updated:
Prajavani

ಮಹದೇಶ್ವರ ಬೆಟ್ಟ: ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಮಹದೇಶ್ವರ ಬೆಟ್ಟದಿಂದ ಪಾಲಾರ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ರಸ್ತೆ ಕುಸಿದಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ಮತ್ತೊಂದು ಕಡೆ ಬೆಟ್ಟದ ಮೇಲಿನಿಂದ ಕಲ್ಲು ಬಂಡೆಗಳು ರಸ್ತೆಗೆ ಬಿದ್ದುದರಿಂದ ವಾಹನಗಳ ಸಂಚಾರ ಸೋಮವಾರ ಬೆಳಗಿನ ಜಾವದವರೆಗೂ ಸ್ಥಗಿತಗೊಂಡಿತು. 

ಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಸೋಮವಾರ ರಾತ್ರಿಯೂ ಭಾರಿ ಮಳೆಯಾಗಿದೆ. ಬೆಟ್ಟದಿಂದ ಪಾಲಾರ್‌ ಮೂಲಕ ತಮಿಳುನಾಡು ಕಡೆಗೆ ಹೋಗುವ ಮಾರ್ಗದಲ್ಲಿ ಕಾವೇರಿ ಕಚ್ಚಾನೀರಿನ ಕೇಂದ್ರದ ಮುಂಭಾಗದ ತಿರುವಿನಲ್ಲಿ ರಸ್ತೆ ತಡೆಗೋಡೆ ಸಂಪೂರ್ಣ ಕುಸಿದಿದೆ.  

ಇದರ ಮುಂದಿನ ತಿರುವಿನಲ್ಲಿ ಬೆಟ್ಟದ ಮೇಲಿನಿಂದ ಕಲ್ಲು ಮಣ್ಣು ಕುಸಿದು ರಸ್ತೆ ಬಂದ್‌ ಆಗಿತ್ತು. ಹಾಗಾಗಿ ಬೆಳಿಗ್ಗೆವರೆಗೂ ವಾಹನಗಳು ಸಂಚರಿಸಲಿಲ್ಲ. ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ, ಪೊಲೀಸ್‌ ಇನ್‌ಸ್ಪೆಕ್ಟರ್‌ ಬಿ.ಮಹೇಶ್‌, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಮಹೇಶ್‌ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ನಂತರ ಜೆಸಿಬಿ ತರಿಸಿ ರಸ್ತೆಯಲ್ಲಿ ಬಿದ್ದಿದ್ದ ಕಲ್ಲು, ಮಣ್ಣುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಭಾರಿ ತೇವಾಂಶದಿಂದಾಗಿ ರಸ್ತೆ ಬಹುಪಾಲು ಕುಸಿದಿದ್ದು, ಸವಾರರು ಆತಂಕದಲ್ಲೇ ವಾಹನಗಳಲ್ಲಿ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆಲವೇ ದಿನಗಳಲ್ಲಿ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ನಡೆಯಲಿದ್ದು, ತಮಿಳುನಾಡು ಭಾಗದಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಭಾರಿ ಪ್ರಮಾಣದಲ್ಲಿ ವಾಹನಗಳು ಸಂಚರಿಸಿದರೆ ರಸ್ತೆ ಮತ್ತೆ ಕುಸಿಯುವ ಬೀತಿ ಎದುರಾಗಿದೆ. 

ಪ್ರತಿಕ್ರಿಯಿಸಿ (+)