ಭಾನುವಾರ, ನವೆಂಬರ್ 17, 2019
29 °C
ತೇರು ಸಾಗುವಾಗ ಕಲಾವಿದರಿಗೆ, ಭಕ್ತರಿಗೆ, ಜಾನಪದ ಕಲಾ ತಂಡಗಳಿಗೆ ಪ್ರದರ್ಶನ ನೀಡಲು ಅವಕಾಶ

ಮಹದೇಶ್ವರ ಬೆಟ್ಟ: ಚಿನ್ನದ ತೇರಿನ ನಡುವೆ ಮಂಗಳವಾದ್ಯದ ಸದ್ದು

Published:
Updated:
Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಸುಪ್ರಸಿದ್ಧ ತೀರ್ಥ ಕ್ಷೇತ್ರ ಮಲೆಮಹದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಈಗ ಪ್ರತಿ ದಿನ ಸಂಜೆ ನಡೆಯುವ ಚಿನ್ನದ ತೇರಿನ ಉತ್ಸವದ ಜೊತೆ ಜಾನಪದ ಕಲಾತಂಡಗಳ ಪ್ರದರ್ಶನ, ಕಲಾವಿದರ ಹಾಡುಗಳು, ಮಂಗಳವಾದ್ಯಗಳ ಸಮೇತ ನೃತ್ಯಗಳನ್ನೂ ಕಣ್ತುಂಬಿಕೊಳ್ಳಬಹದು.

ದೇವಾಲಯದಲ್ಲಿ ಪ್ರತಿ ದಿನ ರಾತ್ರಿ ಏಳು ಗಂಟೆಗೆ ಚಿನ್ನದ ತೇರಿನ ಉತ್ಸವ ನಡೆಯುತ್ತದೆ. ಹರಕೆ ಹೊತ್ತ ಭಕ್ತರು ಈ ಕೈಂಕರ್ಯವನ್ನು ನೆರವೇರಿಸುತ್ತಾರೆ. ಈ ಉತ್ಸವದಲ್ಲಿ, ಮಹದೇಶ್ವರ ಉತ್ಸವ ಮೂರ್ತಿಯನ್ನು ಚಿನ್ನದ ರಥದಲ್ಲಿ ಇಟ್ಟು ದೇವಾಲಯಕ್ಕೆ ಒಂದು ಸುತ್ತು ತರಲಾಗುತ್ತದೆ. ಇದುವರೆಗೂ ಕೇವಲ ಹತ್ತು ನಿಮಿಷಗಳಲ್ಲಿ ಈ ಉತ್ಸವ ಮುಗಿಯುತ್ತಿತ್ತು. ರಥ ಸಾಗುವಾಗ ಭಕ್ತರಿಗೆ ಹಾಡನ್ನು ಹಾಡಲು ಅಥವಾ ಕಲಾವಿದರಿಗೆ ಮಂಗಳವಾದ್ಯಗಳನ್ನು ನುಡಿಸುವುದಕ್ಕೆ ಅವಕಾಶ ಇರಲಿಲ್ಲ.  

ಆದರೆ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಅವರು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಈ ಪದ್ಧತಿಯನ್ನು ಕೈ ಬಿಡುವ ನಿರ್ಧಾರ ಕೈಗೊಂಡಿದ್ದಾರೆ.

ತೇರು ಸಾಗುತ್ತಿರುವಾಗ ಜಾನಪದ ಕಲಾ ತಂಡಗಳಿ ಪ್ರದರ್ಶನ ನೀಡಲು, ಹಾಡುವವರಿಗೆ ಹಾಡಲು, ಮಂಗಳವಾದ್ಯ ನುಡಿಸಲು ಅವಕಾಶ ನೀಡಲಾಗಿದೆ. ವಾರದಿಂದ ಹೊಸ ಪದ್ಧತಿ ಜಾರಿಯಲ್ಲಿದೆ. ಪ್ರಾಧಿಕಾರದ ನಿರ್ಧಾರಕ್ಕೆ ಭಕ್ತರು ಹರುಷ ವ್ಯಕ್ತಪಡಿಸಿದ್ದಾರೆ. ಈಗ ತೇರಿನ ಉತ್ಸವ ಒಂದು ಗಂಟೆ ಕಾಲ ನಡೆಯುತ್ತಿದೆ. ಸಾಕಷ್ಟು ಜನರು ಉತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಹಿಂದಿನ ಪದ್ಧತಿ: ಸಾಂಸ್ಕೃತಿಕವಾಗಿ, ಜಾನಪದೀಯವಾಗಿ ಸಿರಿವಂತವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಈಗಲೂ ಹಲವು ಜಾನಪದ ಕಲೆಗಳು ಜೀವಂತವಾಗಿವೆ. ಮಹದೇಶ್ವರ ಬೆಟ್ಟದ ಸುತ್ತಮುತ್ತಲೂ ವಿವಿಧ ಕಲೆಗಳನ್ನು ಉಳಿಸಿ, ಬೆಳೆತ್ತಿರುವವರು ಹಲವರಿದ್ದಾರೆ. ಮಾದಪ್ಪನ ಎದುರು ತಮ್ಮಲ್ಲಿರುವ ಕಲೆಯನ್ನು ಹರಕೆ ರೂಪದಲ್ಲಿ ಪ್ರದರ್ಶಿಸಬೇಕು ಎಂದು ಕ್ಷೇತ್ರಕ್ಕೆ ಬರುವ ಭಕ್ತರೂ ಹಲವರಿದ್ದಾರೆ.

ತಮಟೆ, ಡೋಲು ಬಾರಿಸುವುದು, ಹಾಡು, ನೃತ್ಯ ಹೀಗೆ ತಮ್ಮಲ್ಲಿರುವ ಕಲೆಯನ್ನು ದೇವರಿಗೆ ಅರ್ಪಿಸುವ ಪದ್ಧತಿ ತಲೆ ತಲಾಂತರದಿಂದ ನಡೆದುಕೊಂಡು ಬಂದಿತ್ತು. ಉಳಿದ ಭಕ್ತರಲ್ಲೂ ಇದು ಭಕ್ತಿ ಭಾವವನ್ನು ತುಂಬುತ್ತಿತ್ತು. ನೂರಾರು ಕಿ.ಮೀ ದೂರದಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಆಯಾಸವನ್ನು ಇದು ನೀಗಿಸುತ್ತಿತ್ತು.

ಏಳೆಂಟು ವರ್ಷಗಳ ಹಿಂದೆ ಈ ಪದ್ಧತಿ ನಿಂತು ಹೋಗಿತ್ತು. ದೇವಾಲಯದ ಆವರಣದ ಸುತ್ತ ವಾದ್ಯ ನುಡಿಸುವುದು, ಕುಣಿಯುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ.

‘ಈಗ ಮತ್ತೆ ಹಾಡಲು, ಮಂಗಳವಾದ್ಯಗಳನ್ನು ನುಡಿಸಲು ಅವಕಾಶ ಕೊಟ್ಟಿರುವುದು ಸಂತೋಷ ತಂದಿದೆ. ಹಿಂದೆ ಚಿನ್ನದ ತೇರಿನ ಉತ್ಸವ ಹತ್ತು ನಿಮಿಷದಲ್ಲಿ ಮುಗಿಯುತ್ತಿತ್ತು. ಈಗ ಕಲಾತಂಡಗಳ ಪ್ರದರ್ಶನಗಳನ್ನು ನೋಡುವುದರ ಜೊತೆಗೆ ಸ್ವಾಮಿಯ ಚಿನ್ನದ ತೇರಿನ ಉತ್ಸವವನ್ನು ಹೆಚ್ಚು ಸಮಯದವರೆಗೆ ಕಣ್ತುಂಬಿಕೊಳ್ಳಬಹುದು. ಈ ಪದ್ಧತಿಯನ್ನು ಹೀಗೆ ಮುಂದುವರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರನ್ನು ನೇಮಿಸಿದರೆ ಉತ್ತಮ’ ಎಂದು ಚಾಮರಾಜನಗರದಿಂದ ಬಂದ ಭಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಲೆ, ಸಂಸ್ಕೃತಿ ಪರಿಚಯಿಸುವ ಉದ್ದೇಶ’

ಈ ಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿ ಸಿ.ಎಲ್‌.ಆನಂದ್ ಅವರು, ‘ಚಿನ್ನದ ತೇರು ಎಳೆಯುವ ಪ್ರಕ್ರಿಯೆ ಬೇಗನೆ ಮುಗಿಯುತ್ತಿತ್ತು. ದೇವರ ದರ್ಶನ ಪಡೆಯಲು ದೂರದ ಊರುಗಳಿಂದ ಭಕ್ತರು ಬರುತ್ತಾರೆ. ಎಷ್ಟೋ ಜನ ಚಿನ್ನದ ತೇರಿನ ಉತ್ಸವ ನೋಡುವುದಕ್ಕೇ ಬರುತ್ತಾರೆ. ತೇರನ್ನು ನೋಡಿ, ದೇವರ ದರ್ಶನ ಮಾಡಿದ ಬಳಿಕ ಹಿಂದಿರುಗುತ್ತಾರೆ. ಭಕ್ತರು ದೇವಸ್ಥಾನದ ಆವರಣದಲ್ಲಿ ಹೆಚ್ಚಿನ ಸಮಯ ಇರಬೇಕು. ಅವರಿಗೆ ಇಲ್ಲಿನ ಕಲೆ, ಸಂಸ್ಕೃತಿಯ ಪರಿಚಯವಾಗಬೇಕು. ದೇವರ ದರ್ಶನದೊಂದಿಗೆ ಮನೋರಂಜನೆಯೂ ಸಿಗಲಿ ಎಂಬ ಉದ್ದೇಶದಿಂದ ಮಂಗಳವಾದ್ಯ ನುಡಿಸಲು, ಜಾನಪದ ಕಲಾತಂಡಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ’ ಎಂದರು. 

ಪ್ರತಿಕ್ರಿಯಿಸಿ (+)