ಗುರುವಾರ , ನವೆಂಬರ್ 14, 2019
19 °C
ಮಹದೇಶ್ವರ ಬೆಟ್ಟ: ತಿಂಗಳಿನಿಂದ ದುರಸ್ತಿಯಾಗದ ಪಂಪ್‌, 2ನೇ ಹಂತದವರೆಗೆ ಮಾತ್ರ ಪೂರೈಕೆ

ಮಾದಪ್ಪನ ಭಕ್ತರಿಗೆ ಟ್ಯಾಂಕರ್‌ ನೀರೇ ಗತಿ

Published:
Updated:
Prajavani

‌ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟಕ್ಕೆ ಕಾವೇರಿ ನೀರನ್ನು ಸರಬರಾಜು ಮಾಡುವ ಮೋಟಾರ್‌ ಪಂಪ್‌ ಕೆಟ್ಟು ತಿಂಗಳು ಕಳೆದರೂ ಇನ್ನೂ ದುರಸ್ತಿಯಾಗಿಲ್ಲ.

ಹಾಗಾಗಿ, ಬೆಟ್ಟದ ವಾಸಿಗಳು ಹಾಗೂ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವವರು ಟ್ಯಾಂಕರ್‌ ನೀರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ಮಾಡಲು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹರಸಾಹಸ ಪಡುತ್ತಿದೆ. ಒಂದು ಲಾರಿ ಟ್ಯಾಂಕರ್‌ ಹಾಗೂ ಎರಡು ಟ್ರ್ಯಾಕ್ಟರ್‌ಗಳ ಮೂಲಕ ನಿರಂತರವಾಗಿ ನೀರು ಪೂರೈಸುವ ಕೆಲಸ ಮಾಡುತ್ತಿದೆ. ಆದರೆ, ಸ್ಥಳೀಯ ನಿವಾಸಿಗಳಿಗೆ ನೀರಿನ ಕೊರತೆ ಎದುರಾಗುತ್ತಿದೆ. 

ಬೆಟ್ಟಕ್ಕೆ ಪಾಲಾರ್‌ನಿಂದ ಕಾವೇರಿ ನದಿ ನೀರನ್ನು ಪಂಪ್‌ ಮಾಡಲಾಗುತ್ತದೆ. ದಾರಿ ಮಧ್ಯೆ ಎರಡು ಜಲ ಸಂಗ್ರಹಾಗಾರಗಳನ್ನು ಸ್ಥಾಪಿಸಲಾಗಿದೆ. ನದಿ ಬಳಿಯಿಂದ ಎರಡನೇ ಜಲಗಾರದವರೆಗೆ ನೀರು ಪಂಪ್‌ ಆಗುತ್ತಿದೆ. ಅಲ್ಲಿಂದ ಬೆಟ್ಟಕ್ಕೆ ನೀರನ್ನು ಪಂಪ್‌ ಮಾಡಬೇಕು. ಆದರೆ, ಇಲ್ಲಿ ಅಳವಡಿಸಿರುವ ಮೋಟಾರ್‌ ಪಂಪ್‌ ತಿಂಗಳ ಹಿಂದೆ ಕೆಟ್ಟಿದೆ. ಸಾಮೂಹಿಕ ವಿವಾಹ ಸಮಾರಂಭದ ಸಂದರ್ಭದಲ್ಲಿ ಅದನ್ನು ದುರಸ್ತಿ ಮಾಡಲಾಗಿತ್ತಾದರೂ, ಮತ್ತೆ ಹಾಳಾಗಿದೆ. ಹಾಗಾಗಿ ಬೆಟ್ಟಕ್ಕೆ ನೀರು ಪೂರೈಕೆಯಾಗುತ್ತಿಲ್ಲ. 

ಬೆಟ್ಟದಿಂದ ಎರಡನೇ ಹಂತದ ಜಲಗಾರ ಇರುವ ಸ್ಥಳಕ್ಕೆ ಏಳು ಕಿ.ಮೀ ದೂರ ಇದೆ. ಬೆಟ್ಟದಿಂದ ಪಾಲಾರ್‌ ಕಡೆ ಹೋಗುವಾಗ 7, 8ನೇ ತಿರುವಿನ ಬಳಿ ಈ ಜಲಸಂಗ್ರಹಾಗಾರ ಇದೆ. ಪ್ರಾಧಿಕಾರವು ಇಲ್ಲಿಂದ ಟ್ಯಾಂಕರ್‌ ಮೂಲಕ ಅತಿಥಿಗೃಹ, ಶೌಚಾಲಯಗಳು ಹಾಗೂ ದೇವಾಲಯಕ್ಕೆ ನೀರು ಪೂರೈಸುತ್ತಿದೆ. ಈ ಪ್ರದೇಶದಲ್ಲಿ ಆನೆಗಳ ಹಾವಳಿ ಹೆಚ್ಚಿದ್ದು, ಟ್ಯಾಂಕರ್‌ ವಾಹನಗಳ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದುಕೊಂಡೇ ಕರ್ತವ್ಯ ನಿರ್ವಹಿಸಬೇಕಿದೆ.

ಸ್ಥಳೀಯರ ಆಕ್ರೋಶ: ಸರ್ಕಾರಕ್ಕೆ ಹೆಚ್ಚು ಆದಾಯ ಇರುವ ದೇವಾಲಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನಕ್ಕೆ ನೀರು ಸರಬರಾಜು ಮಾಡುವ ಪಂಪ್‌ ಅನ್ನು ತಿಂಗಳಾದರೂ ದುರಸ್ತಿ ಮಾಡಲು ಸಾಧ್ಯವಾಗದಿರುವುದಕ್ಕೆ ಸ್ಥಳೀಯರು ಹಾಗೂ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹುಂಡಿಗಳಲ್ಲಿ ತಿಂಗಳಿಗೆ ₹1 ಕೋಟಿಯಿಂದ ₹1.5 ಕೋಟಿ ಸಂಗ್ರಹವಾಗುವ ಈ ಸ್ಥಳದಲ್ಲಿ ಪಂಪ್‌ ದುರಸ್ತಿ ಮಾಡುವುದಕ್ಕೆ ಪ್ರಾಧಿಕಾರದ ಅಧಿಕಾರಿಗಳು ವಿಳಂಬ ಮಾಡುತ್ತಿರುವುದು ಏಕೆ ಎಂಬುದು ಅವರ ಪ್ರಶ್ನೆ. 

‘ಈವರೆಗೆ ಬೆಟ್ಟದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಪಂಪ್‌ ಹಾಳಾಗಿ ತಿಂಗಳ ಮೇಲಾಗಿದೆ. ಕುಡಿಯುವ ನೀರಿಗಾಗಿ ನಾವು ಅಲ್ಲಿ ಇಲ್ಲಿ ಗಂಟೆಗಟ್ಟೆಲೆ ಕಾಯಬೇಕಾದ ಪರಿಸ್ಥಿತಿ ಇದೆ. ದೇವಾಲಯಕ್ಕೆ ಬರುವ ಭಕ್ತರು ಶೌಚಾಲಯಕ್ಕೆ ತೆರಳಲು ಹರಸಾಹಸ ಪಡುತ್ತಿದ್ದಾರೆ’ ಎಂದು ಸ್ಥಳೀಯರಾದ ನಾಗೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಹೊಸ ಯಂತ್ರ ಅಳವಡಿಸಲು ಕ್ರಮ’

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಪ್ರಾಧಿಕಾರದ ಕಾರ್ಯದರ್ಶಿ ಸಿ.ಎಲ್‌.ಆನಂದ್‌ ಅವರು, ‘2ನೇ ಹಂತದ ಜಲಗಾರದಿಂದ ನೀರನ್‌ ಪಂಪ್‌ ಮಾಡುತ್ತಿದ್ದ ಯಂತ್ರ ಏಳೆಂಟು ವರ್ಷಗಳಷ್ಟು ತುಂಬಾ ಹಳೆಯದು. ಒಮ್ಮೆ ದುರಸ್ತಿ ಮಾಡಿದ್ದರೂ ಮತ್ತೆ ಹಾಳಾಗಿದೆ. ಹೊಸ ಯಂತ್ರ ಅಳವಡಿಸಲು ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.

‘ಖರೀದಿಸಲಾಗುವ ಹೊಸ ಯಂತ್ರದ ಸಾಮರ್ಥ್ಯ ಸೇರಿದಂತೆ ಅದಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ನೀಡುವಂತೆ ಕರ್ನಾಟಕ ನಗರ ನೀರು ಪೂರೈಕೆ ಮತ್ತು ಚರಂಡಿ ಮಂಡಳಿಗೆ (ಕೆಯುಡಬ್ಲ್ಯುಎಸ್‌ಎಸ್‌ಬಿ) ಸೂಚಿಸಲಾಗಿದೆ. ಅದು ವರದಿ ನೀಡಿದ ನಂತರ ಟೆಂಡರ್‌ ಕರೆಯುತ್ತೇವೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)