ರಾಜಕೀಯ, ಸಾಮಾಜಿಕ ಸ್ಥಿತಿಯ ಸ್ವಚ್ಛತೆ ಅವಶ್ಯ

7
‘ಕಾರಾಗೃಹವಾಸಿಗಳ ಹಕ್ಕು’ ಕಾರ್ಯಾಗಾರ, ಅರಳಿ ನಾಗರಾಜ್‌ ಅಭಿಮತ

ರಾಜಕೀಯ, ಸಾಮಾಜಿಕ ಸ್ಥಿತಿಯ ಸ್ವಚ್ಛತೆ ಅವಶ್ಯ

Published:
Updated:
Deccan Herald

ಮಂಡ್ಯ: ‘ಸ್ವಚ್ಛತೆ ಎಂದರೆ ಕೇವಲ ಪರಿಸರ ಸ್ವಚ್ಛಗೊಳಿಸುವುದಲ್ಲ, ದೇಶದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಯನ್ನು ಸ್ವಚ್ಛಗೊಳಿಸುವುದಾಗಿದೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನೆಹರೂ ಯುವ ಕೇಂದ್ರ, ಅನನ್ಯ ಹಾರ್ಟ್ ಸಂಸ್ಥೆ, ಸಾಯಿ ಸಂಗೀತ ಟ್ರಸ್ಟ್ ಸಹಯೋಗದಲ್ಲಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ನಡೆದ ‘ಕಾರಾಗೃಹ ವಾಸಿಗಳ ಹಕ್ಕು’ಗಳನ್ನು ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಐದು ಆದರ್ಶಗಳಿವೆ. ನಡೆ–ನುಡಿ ಒಂದೇ ಆಗಿರಬೇಕು, ದುರಾಸೆ–ದುರ್ವ್ಯಸನದಿಂದ ದೂರವಿರಬೇಕು, ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಹೊಂದಿರಬೇಕು, ಸರಳವಾದ ಬದುಕು ಸಾಗಿಸಬೇಕು ಹಾಗೂ ರಾಷ್ಟ್ರಾಭಿಮಾನ ಹೊಂದಿರಬೇಕು. ಈ ಐದು ಆದರ್ಶ ಗುಣ ಪಾಲಿಸಿದಾಗ ಮಾತ್ರ ನಮ್ಮ ಸಮಾಜ ಸ್ವಚ್ಛವಾಗುತ್ತದೆ. ಸರ್ಕಾರಕ್ಕೆ ತೆರಿಗೆ ಕಟ್ಟುವ ಹಾಗೂ ಸ್ವದೇಶಿ ಉತ್ಪನ್ನ ಬಳಕೆ ಮೂಲಕ ಆರ್ಥಿಕ ಸ್ಥಿತಿಯನ್ನು ಸ್ವಚ್ಛಗೊಳಿಸಬೇಕು. ಉತ್ತಮ ನಾಯಕರ ಆಯ್ಕೆಯೊಂದಿಗೆ ರಾಜಕೀಯ ಸ್ವಚ್ಛತೆ ಹಾಗೂ ಸಮಾಜದಲ್ಲಿ ಅಪರಾಧ ಕೃತ್ಯಗಳು ನಡೆಯದಂತೆ ಸಾಮಾಜಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.

‘ಮಾನವ ಸಹಜವಾಗಿ ತಿಳಿದು ತಿಳಿದೋ, ತಿಳಿಯದೆಯೋ ತಪ್ಪು ಮಾಡುತ್ತಾನೆ. ತಿಳಿಯದೇ ತಪ್ಪು ಮಾಡಿದರೆ ಅದು ಮೊದಲನೇ ತಪ್ಪಾಗಿರುತ್ತದೆ. ಎರಡನೇ ಬಾರಿಗೆ ನಾನು ಮಾಡುತ್ತಿರುವುದು ತಪ್ಪು ಎಂಬ ಅರಿವಿದ್ದರೂ, ಯಾವುದೋ ಕಟ್ಟಳೆಗೆ ಬಿದ್ದು ತಪ್ಪು ಮಾಡುತ್ತಾರೆ. ಆದರೆ ಮೂರಕ್ಕಿಂತ ಹೆಚ್ಚು ಬಾರಿ ಅದೇ ತಪ್ಪು ಮಾಡಿದರೆ ಅದು ಪ್ರೇರಣೆಯಿಂದ ಮಾಡಿದ್ದಾಗಿರುತ್ತದೆ. ಆಕರ್ಷಣೆಗೆ ಒಳಗಾಗಿ ಧೂಮಪಾನ ಮಾಡುತ್ತಾರೆ. ನಂತರ ಅದೇ ವ್ಯಸನವಾಗುತ್ತದೆ. ಹೀಗಾಗಿ ಕಾರಾಗೃಹದಲ್ಲಿ ಇರುವವರೆಲ್ಲರೂ ಅಪರಾಧಿಗಳಲ್ಲ. ವಿಚಾರಣಾಧೀನ ಕೈದಿಗಳು ಆರೋಪಿಗಳಷ್ಟೇ. ತಪ್ಪುಗಳನ್ನು ತಿದ್ದಿಕೊಂಡು ಸಮಾಜದಲ್ಲಿ ಮನುಷ್ಯರಾಗಿ ಬಾಳಬೇಕು’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಮನ್ಸೂರ್ ಅಹಮದ್ ಜಮಾನ್ ಮಾತನಾಡಿ ‘ಪೊಲೀಸರು ಯಾವುದೇ ವ್ಯಕ್ತಿಯನ್ನು ಬಂಧಿಸುವ ಮೊದಲು ಅದಕ್ಕೆ ಸೂಕ್ತ ಕಾರಣ ನೀಡಬೇಕು. ಬಂಧಿತ ವ್ಯಕ್ತಿಗೆ ಗೌರವ ನೀಡಬೇಕು. ಆರೋಪಿಯನ್ನು 24 ಗಂಟೆಯೊಳಗಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಹೀಗೆ ಮಾಡದಿದ್ದರೆ, ಪೊಲೀಸರು ಮಾನವ ಹಕ್ಕು ಉಲ್ಲಂಘನೆ ಮಾಡಿದಂತಾಗುತ್ತದೆ. ಹೆಣ್ಣು ಮಕ್ಕಳನ್ನು ಸಂಜೆ 6 ರಿಂದ ಬೆಳಿಗ್ಗೆ 7 ಗಂಟೆಯ ಅವಧಿಯಲ್ಲಿ ಬಂಧಿಸುವಂತಿಲ್ಲ. ಒಂದು ವೇಳೆ ಬಂಧಿಸುವ ಪರಿಸ್ಥಿತಿ ಎದುರಾದರೆ ಮಹಿಳಾ ಸಿಬ್ಬಂದಿ ಬಂಧಿಸಬೇಕು. ಬಂಧಿತ ವ್ಯಕ್ತಿ ವಕೀಲರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರನ್ನು ನೇಮಿಸುವಂತೆ ಪೊಲೀಸರಲ್ಲಿ ಮನವಿ ಮಾಡಬಹುದು’ ಎಂದು ಹೇಳಿದರು.

ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕೆ.ಅಮರನಾರಾಯಣ, ಕಾರಾಗೃಹ ಅಧೀಕ್ಷಕ ಪಿ.ಎಸ್.ಅಂಬೇಕರ್, ರಾಜ್ಯ ಮುಕ್ತ ವಿಶ್ವವಿದ್ಯಾಲಯ ದಾವಣಗೆರೆ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸುಧಾಕರ್, ವಕೀಲ ಎಂ.ಗುರುಪ್ರಸಾದ್, ಬಿ.ಎಸ್.ಅನುಪಮಾ, ಜಿ.ಕೆ.ನಿಂಗೇಗೌಡ, ಪೋತೇರ ಮಹದೇವು, ಶೈಲಜಾ ಶಿವಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !