ಜಿಲ್ಲಾಸ್ಪತ್ರೆಗೆ ತಕ್ಷಣ ನಾಲ್ಕು ಆಂಬುಲೆನ್ಸ್‌: ಪುಟ್ಟರಾಜು

7
ಮಿಮ್ಸ್‌: ಪರಿಶೀಲನಾ ಸಭೆ, ಎಎನ್‌ಎಂ ತರಬೇತಿ ಕೇಂದ್ರದ ಪುನಾರಂಭ ಭರವಸೆ

ಜಿಲ್ಲಾಸ್ಪತ್ರೆಗೆ ತಕ್ಷಣ ನಾಲ್ಕು ಆಂಬುಲೆನ್ಸ್‌: ಪುಟ್ಟರಾಜು

Published:
Updated:
Deccan Herald

ಮಂಡ್ಯ: ‘ಜಿಲ್ಲಾಸ್ಪತ್ರೆಯಲ್ಲಿ ಆಂಬುಲೆನ್ಸ್‌ ಕೊರತೆ ಹೆಚ್ಚಾಗಿದ್ದು ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ತಕ್ಷಣವೇ ಸರ್ಕಾರದಿಂದ 4 ಆಂಬುಲೆನ್ಸ್‌ಗಳನ್ನು ಜಿಲ್ಲಾಸ್ಪತ್ರೆಗೆ ಕೊಡಲು ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ನಗರದ ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಸೋಮವಾರ ನಡೆದ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮಿಮ್ಸ್‌ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರ ಜೊತೆ ಮಾತನಾಡಿದ್ದೇನೆ. ಆಂಬುಲೆನ್ಸ್‌ ಇಲ್ಲದಿರುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಈ ಕುರಿತು ಅತೀ ಶೀಘ್ರದಲ್ಲಿ ಕ್ರಮ ವಹಿಸುತ್ತೇನೆ. ಕಾರ್ಪೊರೇಷನ್‌ ಮತ್ತು ಭಾರತೀಯ ಸ್ಟೇಟ್‌ ಬ್ಯಾಂಕ್‌ಗಳು ಆಂಬುಲೆನ್ಸ್‌ ಕೊಡುಗೆ ನೀಡಲು ಮುಂದೆ ಬಂದಿವೆ. ಅಲ್ಲಿಂದಲೂ ಆಂಬುಲೆನ್ಸ್‌ ತರಿಸುವ ವ್ಯವಸ್ಥೆ ಮಾಡಲಾಗುವುದು. ಇದರ ಜೊತೆಗೆ ಮಿಮ್ಸ್‌ ಆಸ್ಪತ್ರೆಯಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದ್ದು ಅವುಗಳೆಲ್ಲವನ್ನು ಆದ್ಯತೆಯ ಮೇಲೆ ಪರಿಹರಿಸಲಾಗುವುದು’ ಎಂದರು.

‘ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಹೊಸ ನೇಮಕಾತಿ ಬಗ್ಗೆ ಸದನದಲ್ಲಿ ಬೇಡಿಕೆ ಇಡುತ್ತೇನೆ. ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ಆರೋಗ್ಯ ಸಹಾಯಕಿಯರ (ಎಎನ್‌ಎಂ) ತರಬೇತಿ ಸಂಸ್ಥೆ ಮೂರು ವರ್ಷಗಳಿಂದ ಮುಚ್ಚಿದೆ. ತರಬೇತಿ ಕೇಂದ್ರವನ್ನು ಪುನಾರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಕಳೆದ ಸಾಲಿನಲ್ಲಿ 100 ವೈದ್ಯಕೀಯ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದರು. ಈ ವರ್ಷ 150 ವೈದ್ಯಕೀಯ ಸೀಟು ಹಂಚಿಕೆ ಮಾಡಲಾಗಿದೆ. ಹೀಗಾಗಿ ಹಚ್ಚಿನ ಮೂಲ ಸೌಕರ್ಯ ಒದಗಿಸಲಾಗುತ್ತದೆ. ಇಲ್ಲಿನ ಎಲ್ಲಾ ಸಮಸ್ಯೆಗಳ ಬಗ್ಗೆ ವೈದ್ಯಕೀಯ, ಆರೋಗ್ಯ ಸಚಿವರಿಗೆ ಮಾಹಿತಿ ನೀಡಿ ಸೂಕ್ತ ಸೌಲಭ್ಯ ಒದಗಿಸಲು ಒತ್ತಡ ಹಾಕುತ್ತೇನೆ’ ಎಂದು ಹೇಳಿದರು.

‘ರೋಗಿಗಳು ವಿಶ್ರಾಂತಿ ಪಡೆಯಲು ಇದ್ದ ತಂಗುದಾಣ ತೆರವಿನ ಕುರಿತು ತನಿಖೆ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ತಾತ್ಕಾಲಿಕ ಪರಿಹಾರವಾಗಿ ನೆಲಹಾಸು, ಶಾಮಿಯಾನ, ಕುಳಿತುಕೊಳ್ಳಲು ಕುರ್ಚಿ ಹಾಗೂ ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಕ್ಯಾಂಟೀನ್‌ ನಿರ್ಮಾಣಕ್ಕೆ ಅನುಮತಿ ಕೊಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕ್ಯಾಂಟೀನ್ ತೆರವುಗೊಳಿಸಿ ರೋಗಿಗಳೊಂದಿಗೆ ಬಂದ ಸಾರ್ವಜನಿಕರ ತಂಗುದಾಣ ನಿರ್ಮಿಸಲಾಗುವುದು’ ಎಂದರು.

‘ಡಯಾಲಿಸಿಸ್ ಕೇಂದ್ರದಲ್ಲಿ ಪ್ರತಿ ರೋಗಿಯಿಂದ ₹ 200 ಪಡೆಯಲಾಗುತ್ತಿತ್ತು. ಆದರೆ ಈ ತಕ್ಷಣದಿಂದ ಉಚಿತವಾಗಿ ಡಯಾಲಿಸಿಸ್‌ ಮಾಡುವ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ವೈದ್ಯಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಸರಿಯಾಗಿ ಕೆಲಸ ಮಾಡದಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬಯೋಮೆಟ್ರಿಕ್‌ ವ್ಯವಸ್ಥೆ ಮಾಡಲಾಗಿದ್ದು ಯಾವ ಅಧಿಕಾರಿಯೂ ಕೆಲಸದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅನವಶ್ಯಕವಾಗಿ ದೀರ್ಘಕಾಲದ ರಜೆ ತೆಗೆದುಕೊಳ್ಳದೆ ಕೆಲಸ ಮಾಡಬೇಕು. ಜಯದೇವ ಆಸ್ಪತ್ರೆ ಮಾದರಿಯಲ್ಲಿ ಮಿಮ್ಸ್ ಆಸ್ಪತ್ರೆ ಅಭಿವೃದ್ಧಿಗೊಳಿಸಲಾಗುವುದು’ ಎಂದರು.

‘ಮಿಮ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಭದ್ರತಾ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಗುತ್ತಿಗೆದಾರರು ಸಿಬ್ಬಂದಿಗೆ ಸಂಬಳ ನೀಡುವಲ್ಲಿ ವಂಚನೆ ಮಾಡುತ್ತಿದ್ದಾರೆ. ನೇಮಕದಲ್ಲೂ ಅವ್ಯವಹಾರ ನಡೆಸಲಾಗಿದೆ ಎಂಬ ದೂರುಗಳು ಬಂದಿವೆ. ಅವ್ಯವಹಾರದ ಬಗ್ಗೆ ತನಿಖೆ ಮಾಡಿ ಕ್ರಮ ಜರುಗಿಸಲಾಗುವುದು. ಇಲ್ಲಿ ಕಾರ್ಯನಿರ್ವಹಿಸುವ ಈಗಿನ ಕಾರ್ಮಿಕರನ್ನೇ ಹೊಸದಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು’ ಎಂದರು.

ಶಾಸಕ ಎಂ.ಶ್ರೀನಿವಾಸ್‌, ವಿಧಾನ ಪರಿಷತ್‌ ಸದಸ್ಯ ಸಿ.ಎಸ್‌.ಪುಟ್ಟರಾಜು ಹಾಜರಿದ್ದರು.

ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ ಪ್ರಸ್ತಾಪ

‘ಪ್ರಸಕ್ತ ಸಾಲಿನಲ್ಲಿ ಬೆಳೆದು ನಿಂತಿರುವ ಕಬ್ಬನ್ನು ಮೈಷುಗರ್‌ ಕಾರ್ಖಾನೆಯಿಂದ ನುರಿಸಲಾಗುತ್ತದೆ. ಮುಂದಿನ ವರ್ಷಕ್ಕೆ ಈಗಿರುವ ಸಕ್ಕರೆ ಕಾರ್ಖಾನೆಗೆ ಬದಲಿಯಾಗಿ ಆಧುನಿಕ ತಂತ್ರಜ್ಞಾನದ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸಿ.ಎಸ್‌.ಪುಟ್ಟರಾಜು ಹೇಳಿದರು. ‘ಈಗಿರುವ ಕಾರ್ಖಾನೆ ಹಲವು ಸಮಸ್ಯೆ ಎದುರಿಸುತ್ತಿದೆ. ಆಗಾಗ ಯಂತ್ರಗಳು ಹಾಳಾಗುತ್ತಿವೆ. ಹೀಗಾಗಿ ಆಧುನಿಕ ತಂತ್ರಜ್ಞಾನದ ಕಾರ್ಖಾನೆ ಸ್ಥಾಪನೆ ಕುರಿತು ಚಿಂತಿಸಲಾಗುತ್ತಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !