‘ಶಾಂತಿ ಕೃಷಿ, ಶಿಕ್ಷಣ’ದ ಪ್ರತಿಪಾದಕ ಕೆ.ಟಿ.ಚಂದು

7
ಶಿವಪುರ ಧ್ವಜ ಸತ್ಯಾಗ್ರಹ, ಮೈಸೂರು ಚಲೊ ಚಳವಳಿಯಲ್ಲಿ ಭಾಗಿ, 25 ದಿನಗಳ ಸೆರೆವಾಸ

‘ಶಾಂತಿ ಕೃಷಿ, ಶಿಕ್ಷಣ’ದ ಪ್ರತಿಪಾದಕ ಕೆ.ಟಿ.ಚಂದು

Published:
Updated:
Deccan Herald

ಮಂಡ್ಯ: ಶಿವಪುರ ಧ್ವಜ ಸತ್ಯಾಗ್ರಹ, ಮೈಸೂರು ಚಲೊ ಚಳವಳಿಯಲ್ಲಿ ಭಾಗವಹಿಸಿ 25 ದಿನಗಳ ಸೆರೆವಾಸ ಅನುಭವಿಸಿದ ಕೆ.ಟಿ.ಚಂದು ಅವರು ಗಾಂಧೀಜಿಯ ‘ಶಾಂತಿ ಕೃಷಿ, ಶಾಂತಿ ಶಿಕ್ಷಣ’ದ ಪ್ರಬಲ ಪ್ರತಿಪಾದಕರು.

87 ವರ್ಷ ವಯಸ್ಸಿನ ಚಂದು ಅವರು ಗಾಂಧಿ ತತ್ವಗಳ ಆರಾಧಕ. ಚರಕದಲ್ಲಿ ತಯಾರಿಸಿದ ನೂಲು ಕೊಟ್ಟು ಖಾದಿ ವಸ್ತ್ರ ಪಡೆಯುತ್ತಿದ್ದ ಇವರು ಈಗಲೂ ಖಾದಿ ವಸ್ತ್ರವನ್ನೇ ಧರಿಸುತ್ತಾರೆ. ನೂಲು ತಯಾರಿಸುತ್ತಿದ್ದ ಚರಕವನ್ನು ಇಂದಿಗೂ ಕಾಪಿಟ್ಟುಕೊಂಡು ಬಂದಿದ್ದಾರೆ. ಗಾಂಧಿ ಕುರಿತಾದ ಸಾವಿರಕ್ಕೂ ಹೆಚ್ಚು ಪುಸ್ತಕ ಸಂಗ್ರಹಿಸಿರುವ ಇವರು ಮದ್ದೂರು ತಾಲ್ಲೂಕು, ಚನ್ನೇಗೌಡನದೊಡ್ಡಿ ಗ್ರಾಮದ ಹೊರವಲಯದ ಪ್ರಕೃತಿಯ ಮಡಿಲಲ್ಲಿ (ಶಾಂತಿ ಕೃಷಿ ಕ್ಷೇತ್ರ) ವಾಸಿಸುತ್ತಿದ್ದಾರೆ.

1938ರಲ್ಲಿ ಮದ್ದೂರು ಸಮೀಪದ ಶಿವಪುರದಲ್ಲಿ ಬ್ರಿಟಿಷರ ವಿರುದ್ಧ ನಡೆದ ಧ್ವಜ ಸತ್ಯಾಗ್ರಹದ ಸಂದರ್ಭದಲ್ಲಿ ಚಂದು ಅವರಿಗೆ 15 ವರ್ಷ ವಯಸ್ಸು. ಎಚ್‌.ಕೆ.ವೀರಣ್ಣಗೌಡರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದ ನೆನಪಿನ ಚಿತ್ರಗಳು ಈಗಲೂ ಚಂದು ಅವರ ನೆನಪಿನಲ್ಲಿ ಉಳಿದಿವೆ. ಮೂರು ದಿನಗಳ ಅಧಿವೇಶನ, ಹೋರಾಟಗಾರರ ಮಾತು ಚಂದು ಅವರ ಮನಸ್ಸಿನಲ್ಲಿವೆ. ಎಚ್‌.ಕೆ.ವೀರಣ್ಣಗೌಡರ ಸಂಬಂಧಿಯೂ ಆಗಿದ್ದ ಚಂದು ಸಣ್ಣ ವಯಸ್ಸಿನಲ್ಲೇ ಗಾಂಧಿ ಮಾರ್ಗವನ್ನು ಒಪ್ಪಿ, ಅಪ್ಪಿಕೊಂಡರು.

ಬ್ರಿಟಿಷರು ಸ್ವಾತಂತ್ರ್ಯ ನೀಡಲು ಒಪ್ಪಿದಾಗ ಮೈಸೂರು ಸಂಸ್ಥಾನವನ್ನು ಸ್ವತಂತ್ರ ಭಾರತದ ಒಕ್ಕೂಟಕ್ಕೆ ಸೇರಿಸಬೇಕು ಎಂಬ ಒತ್ತಾಯದೊಂದಿಗೆ ‘ಮೈಸೂರು ಚಲೋ’ ಚಳವಳಿ ಆರಂಭವಾಯಿತು. ಮದ್ದೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಚಳವಳಿಯಲ್ಲಿ ಚಂದು ಅವರನ್ನು ಪೊಲೀಸರು ಬಂಧಿಸಿದರು. 25 ದಿನಗಳ ಕಾಲ ಮಂಡ್ಯ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸಿದರು. ಜೈಲಿನಲ್ಲಿ ಗಾಂಧಿ ಕುರಿತ ಪುಸ್ತಕ ಓದುತ್ತಿದ್ದ ಅವರು ತಮ್ಮ ಇಡೀ ಜೀವನವನ್ನು ಗಾಂಧಿ ಮಾರ್ಗದಲ್ಲೇ ನಡೆಯುವುದಾಗಿ ಶಪಥ ಮಾಡಿದರು.

‘ಶಾಂತಿ ಕೃಷಿ ಕ್ಷೇತ್ರ’ ಸ್ಥಾಪನೆ: ಸ್ವಾತಂತ್ರ್ಯಾನಂತರ ಎಚ್‌.ಕೆ.ವೀರಣ್ಣಗೌಡರು ಕಾಂಗ್ರೆಸ್‌ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಆಗ ಚಂದು ಕೃಷಿಯಲ್ಲಿ ತೊಡಗಿಕೊಂಡರು. ಕೃಷಿಯಲ್ಲೂ ಗಾಂಧಿ ಮಾರ್ಗವನ್ನೇ ಅನುಸರಿಸಿದರು. ‘ಗಾಂಧೀಜಿಯ ಶಾಂತಿ ಮಾರ್ಗವೆಂದರೆ ಕೇವಲ ರಕ್ತರಹಿತ ಹೋರಾಟವಲ್ಲ. ಅದು ಜೀವನ ಕ್ರಮ, ಪರಿಸರ ಪ್ರೀತಿ, ರೈತ, ಕೃಷಿ, ಹಳ್ಳಿಗಳ ಉಳಿವು ಕೂಡ ಹೌದು. ಹೀಗಾಗಿ ನಾನು ಕೃಷಿಯಲ್ಲೂ ಗಾಂಧಿ ತತ್ವ ಅನುಸರಿಸಿದೆ. ತೋಟದ ಮನೆಯನ್ನೇ ನನ್ನ ಕಾರ್ಯಕ್ಷೇತ್ರ ಮಾಡಿಕೊಂಡೆ. ‘ಶಾಂತಿ ಕೃಷಿ ಕ್ಷೇತ್ರ’ ಸ್ಥಾಪಿಸಿ ಸಾವಯವ ಕೃಷಿ ಮಾಡಿದೆ, ಹೈನುಗಾರಿಕೆ, ರೇಷ್ಮೆ ಸಾಗಣೆ, ತೆಂಗಿನ ತಳಿ ಉತ್ಪಾದನೆ ಮುಂತಾದ ಕೆಲಸದಲ್ಲಿ ತೊಡಗಿಕೊಂಡೆ. ನನ್ನ ಪತ್ನಿ ಹೆಸರೂ ಶಾಂತಿ ಎಂಬುದು ಕಾಕತಾಳೀಯ’ ಎಂದು ಕೆ.ಟಿ.ಚಂದು ಹೇಳಿದರು.

ಶಾಂತಿ ಶಿಕ್ಷಣ: ಮದ್ದೂರಿನಲ್ಲಿ ಎಚ್‌.ಕೆ.ವೀರಣ್ಣಗೌಡ ಹೆಸರಿನ ಶಿಕ್ಷಣ ಸಂಸ್ಥೆ ಆರಂಭಿಸಿರುವ ಅವರು ಯುವಜನರ ಮನಸ್ಸಿನಲ್ಲಿ ಗಾಂಧಿ ಮಾರ್ಗದ ಅರಿವು ಮೂಡಿಸುತ್ತಿದ್ದಾರೆ. ‘ಯುವಜನರಲ್ಲಿ ಗಾಂಧಿ ತತ್ವ’ ಪುಸ್ತಕ ಪ್ರಕಟಿಸಿದ್ದಾರೆ. ನೂರಾರು ಲೇಖನಗಳನ್ನು ಬರೆದಿದ್ದಾರೆ. ಪ್ರತಿ ವರ್ಷ ಮೂರು ದಿನ ಗಾಂಧಿ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜನೆ ಮಾಡುತ್ತಿದ್ದಾರೆ. ಆ ಮೂಲಕ ಗಾಂಧೀಜಿಯ ಶಾಂತಿ ಮಾರ್ಗವನ್ನು ಶಿಕ್ಷಣದಲ್ಲೂ ಅಳವಡಿಸಿಕೊಂಡಿದ್ದಾರೆ.

*************
ಟ್ರ್ಯಾಕ್ಟರ್‌ನಲ್ಲಿ ಹೊಲ ಉಳುಮೆ ಮಾಡಬಹುದು. ಆದರೆ ಗದ್ದೆಯ ಮೂಲೆಯನ್ನು ಟ್ರ್ಯಾಕ್ಟರ್‌ ಉಳುತ್ತದೆಯೇ? ಅದಕ್ಕೆ ರೈತ, ಗುದ್ದಲಿ ಬೇಕೇ ಬೇಕು. ಅದೇ ಗಾಂಧಿ ತತ್ವ
ಕೆ.ಟಿ.ಚಂದು, ಗಾಂಧಿವಾದಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !