ಮೊಳಗಿದ ‘ನಾವೆಲ್ಲರೂ ಒಂದೇ’ ಸಂದೇಶ

7
ಪ್ರಜಾವಾಣಿ ವರದಿ ಪ್ರಸ್ತಾಪ

ಮೊಳಗಿದ ‘ನಾವೆಲ್ಲರೂ ಒಂದೇ’ ಸಂದೇಶ

Published:
Updated:
Deccan Herald

ಮಂಡ್ಯ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ‘ನಾವೆಲ್ಲರೂ ಒಂದೇ’ ಎಂಬ ಸಂದೇಶ ಮೊಳಗಿತು. ಸಾವಿರಾರು ಶಾಲಾ ಮಕ್ಕಳು ಪಾಲ್ಗೊಂಡಿದ್ದ ಸ್ವಾತಂತ್ರ್ಯ ಸಂಭ್ರಮದಲ್ಲಿ ‘ವಂದೇ ಮಾತರಂ’ ಶಬ್ದ ಕಿವಿಗಡಚಿತು.

ಕ್ರೀಡಾಂಗಣದ ಸುತ್ತಲೂ ಮೆಟ್ಟಿಲುಗಳ ಮೇಲೆ ನಗರದ ವಿವಿಧ ಶಾಲೆಗಳ ಮಕ್ಕಳು ಕುಳಿತಿದ್ದರು. ಮೋಡ ಮುಚ್ಚಿದ ವಾತಾವರಣ ಮಕ್ಕಳ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಧ್ವಜಾರೋಹಣ ನೆರವೇರಿಸಿದರು. 46 ತಂಡಗಳ ಸದಸ್ಯರು ಆಕರ್ಷಕ ಪಥ ಸಂಚಲನದ ಮೂಲಕ ಧ್ವಜವಂದನೆ ಸಲ್ಲಿಸಿದರು. ಪೊಲೀಸರು, ವಿವಿಧ ಶಾಲೆಗಳ ಮಕ್ಕಳು, ಎನ್‌ಸಿಸಿ ಸ್ವಯಂ ಸೇವಕರು, ಸ್ಕೌಟ್ಸ್‌ ಮತ್ತು ಗೈಡ್ಸ್‌ ತಂಡದ ಮಕ್ಕಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

ಸಚಿವರು ಹಾಗೂ ಗಣ್ಯರ ಸಮ್ಮುಖದಲ್ಲಿ ವಿವಿಧ ಇಲಾಖೆಗಳ ಸ್ತಬ್ಧಚಿತ್ರ ಪ್ರದರ್ಶಿಸಲಾಯಿತು. ನಗರಸಭೆಯ ವತಿಯಿಂದ ಕಸ ನಿರ್ವಹಣೆ ಕುರಿತ ಸ್ತಬ್ಧಚಿತ್ರ ಗಮನ ಸೆಳೆಯಿತು. ನಂತರ ಆರೋಗ್ಯ ಇಲಾಖೆಯ ವತಿಯಿಂದ ಸ್ತನ್ಯಪಾನದ ಮಹತ್ವ ಸಾರುವ ಸ್ತಬ್ಧಚಿತ್ರ ಸಾಗಿತು. ಶಿಕ್ಷಣ ಇಲಾಖೆ ಸಿದ್ಧಪಡಿಸಿದ್ದ ಸ್ತಬ್ಧಚಿತ್ರದಲ್ಲಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಶಿಕ್ಷಣ ಯೋಜನೆಗಳನ್ನು ಪ್ರದರ್ಶನ ಮಾಡಲಾಯಿತು. ಅಂಬೇಡ್ಕರ್‌ ಅಭಿವೃದ್ಧಿ ನಿಗಮ ತಯಾರಿಸಿದ್ದ ಚಿತ್ರದಲ್ಲಿ ಗಂಗಾಕಲ್ಯಾಣ ಯೋಜನೆಯಲ್ಲಿ ರೈತರು ಪಡೆಯುವ ಸೌಲಭ್ಯಗಳ ಮಾಹಿತಿ ನೀಡಲಾಗಿತ್ತು. ಕಾರ್ಮಿಕ ಇಲಾಖೆಯಿಂದ ಸಿದ್ಧಪಡಿಸಿದ್ದ ಚಿತ್ರ ಕಾರ್ಮಿಕರ ಹಕ್ಕುಗಳ ಮೇಲೆ ಬೆಳಕು ಚೆಲ್ಲಿತು.

1,200 ಮಕ್ಕಳ ನೃತ್ಯ:
ಕಾರ್ಯಕ್ರಮದಲ್ಲಿ ಸೇಂಟ್‌ಜಾನ್‌ ಶಾಲೆಯ 1,200 ಮಕ್ಕಳು ನೃತ್ಯ ಪ್ರದರ್ಶನ ನೀಡಿದರು. ದೇಶದ ವಿವಿಧ ಸಂಪ್ರದಾಯ, ಭಾಷೆ, ಉಡುಗೆ–ತೊಡುಗೆ, ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಮನಸೂರೆಗೊಂಡಿತು. ‘ನಾವೆಲ್ಲರೂ ಒಂದೇ’ ಎಂಬ ಗೀತೆಗೆ ಹೆಜ್ಜೆ ಹಾಕಿದ ಮಿಕ್ಕಳು 15 ನಿಮಿಷಯದಲ್ಲಿ ದೇಶದಲ್ಲಿರುವ ಎಲ್ಲಾ ಸಂಸ್ಕೃತಿಯನ್ನು ಭೂಮಿಕೆಗೆ ತಂದರು. ಸೇಂಟ್‌ ಜೋಸೆಫ್‌ ಶಾಲೆಯ 900 ಮಕ್ಕಳು ‘ವಂದೇ ಮಾತರಂ’ ಗೀತೆಗೆ ಹೆಜ್ಜೆ ಹಾಕಿದರು. ಅಖಂಡತ್ವವನ್ನು ಸಾರಿದ ಈ ಗೀತೆ ಕರತಾಡನಕ್ಕೆ ಸಾಕ್ಷಿಯಾಯಿತು. ಆಯ್ದ ಪ್ರೌಢಶಾಲೆ ವಿದ್ಯಾರ್ಥಿಗಳು ಸಾಮೂಹಿಕ ಸಹಜ ವ್ಯಾಯಾಮ ಪ್ರದರ್ಶಿಸಿದರು. ನಂತರ ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿದರು.

ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮ ತಯಾರಿಸಿದ್ದ ಚಿತ್ರ ಮೊದಲ ಬಹುಮಾನ ಪಡೆಯಿತು. ನಗರಸಭೆ ತಯಾರಿಸಿದ್ದ ಸಬ್ಧಚಿತ್ರ ದ್ವಿತೀಯ ಬಹುಮಾನ, ಅರಣ್ಯ ಇಲಾಖೆಯ ಸ್ತುಬ್ಧಚಿತ್ರ ತೃತೀಯ ಬಹುಮಾನ ಪಡೆದವು.

ಈ ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್‌.ಅಪ್ಪಾಜಿಗೌಡ, ಶಾಸಕ ಎಂ.ಶ್ರೀನಿವಾಸ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಸ್ವಾಮಿ, ನಗರಸಭೆ ಅಧ್ಯಕ್ಷೆ ಷಹಜಹಾನ್‌, ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಹಾಜರಿದ್ದರು.

***

‘ಪ್ರಜಾವಾಣಿ’ ವರದಿ ಪ್ರಸ್ತಾಪ

ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ‘ಪ್ರಜಾವಾಣಿ’ಯಲ್ಲಿ ಬುಧವಾರ ಪ್ರಕಟವಾಗಿದ್ದ ‘ಶಿವಪುರ ಧ್ವಜ ಸತ್ಯಾಗ್ರಹ ಸೌಧ ಅನಾಥ’ ವರದಿ ಪ್ರಸ್ತಾಪಿಸಿದರು. ‘ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಸ್ಥಿತಿಯ ಬಗ್ಗೆ ಪ್ರಜಾವಾಣಿ ಪತ್ರಿಕೆ ವರದಿ ಪ್ರಕಟಿಸಿದೆ. ಐತಿಹಾಸಿಕ ಸ್ಮಾರಕಕ್ಕೆ ಕಾಯಕಲ್ಪ ನೀಡುವ ಅವಶ್ಯಕತೆ ಇದೆ. ನಮ್ಮ ಜವಾಬ್ದಾರಿಯನ್ನು ಪತ್ರಿಕೆ ನೆನಪು ಮಾಡಿದೆ. ಶೀಘ್ರ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳ ಸಭೆ ಕರೆದು ಶಿವಪುರ ಸೌಧಕ್ಕೆ ಕಾಯಕಲ್ಪ ನೀಡಲಾಗುವುದು. ಸ್ಮಾರಕ ಸೌಧವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮದ್ದೂರಿನ ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹವನ್ನು ಮರೆಯಲು ಸಾಧ್ಯವಿಲ್ಲ. ನೂರಾರು ಜನರು ಈ ಹೋರಾಟದಲ್ಲಿ ಪಾಲ್ಗೊಂಡು ಮಂಡ್ಯ ಜಿಲ್ಲೆಯ ಹೆಸರನ್ನು ಎತ್ತರಕ್ಕೆ ಏರಿಸಿದ್ದಾರೆ. ಯಾವುದೇ ರಕ್ತಪಾತವಿಲ್ಲದೆ ಶಾಂತಿ ಹೋರಾಟದ ಮೂಲಕ ಬ್ರಿಟಿಷರು ತಾವಾಗಿಯೇ ದೇಶ ಬಿಟ್ಟು ಹೋಗುವಂತೆ ಮಾಡಿದ ಕೀರ್ತಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಸಲ್ಲುತ್ತದೆ’ ಎಂದು ಹೇಳಿದರು.

‘ಸಕ್ಕರೆ ನಾಡು ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌.ಎಂ.ವಿಶ್ವೇಶ್ವರಯ್ಯ, ಸರ್‌ ಮಿರ್ಜಾ ಇಸ್ಮಾಯಿಲ್‌, ಲೆಸ್ಲಿ ಸಿ.ಕೋಲ್ಮನ್‌ ಅವರು ಮಂಡ್ಯ ಜಿಲ್ಲೆಗೆ ಕೊಟ್ಟ ಕೊಡುಗೆಗಳು ಸದಾ ಹಸಿರಾಗಿವೆ. ಜಿಲ್ಲೆಯ ರೈತರ ಹಿತ ಕಾಯಲು ಸರ್ಕಾರ ಸರ್ವ ವಿಧದಲ್ಲೂ ಸಿದ್ಧವಾಗಿದೆ. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕೆಲಸಕ್ಕೆ ಕೈ ಹಾಕಬಾರದು’ ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !