ಜೆಡಿಎಸ್‌ ಟಿಕೆಟ್‌: ಬುಗಿಲೆದ್ದ ಅಸಮಾಧಾನ

7
ನಗರಸಭೆ ಚುನಾವಣೆ; ಬಂಡಾಯ ಸ್ಪರ್ಧೆಗೆ ಮುಂದಾದ ಆಕಾಂಕ್ಷಿಗಳು, ಕೆಲವರು ಬಿಜೆಪಿಗೆ ಸೇರ್ಪಡೆ

ಜೆಡಿಎಸ್‌ ಟಿಕೆಟ್‌: ಬುಗಿಲೆದ್ದ ಅಸಮಾಧಾನ

Published:
Updated:
Deccan Herald

ಮಂಡ್ಯ: ನಗರಸಭೆ ಚುನಾವಣೆ ಜೆಡಿಎಸ್‌ ಟಿಕೆಟ್‌ ಹಂಚಿಕೆ ವಿಷಯದಲ್ಲಿ ಶಾಸಕ ಎಂ.ಶ್ರೀನಿವಾಸ್‌ ವಿರುದ್ಧ ಅಸಮಾಧಾನ ಬುಗಿಲೆದ್ದಿದೆ. ಬಹಿರಂಗವಾಗಿ ಆರೋಪ ಮಾಡುತ್ತಿರುವ ಟಿಕೆಟ್‌ ಆಕಾಂಕ್ಷಿಗಳು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಕೆಲವು ಬಿಜೆಪಿಯತ್ತ ಮುಖ ಮಾಡಿದ್ದಾರೆ.

ಟಿಕೆಟ್‌ ಹಂಚಿಕೆ ವಿಷಯದಲ್ಲಿ ಎಂ.ಶ್ರೀನಿವಾಸ್‌ ಸಂಪೂರ್ಣ ಪರಮಾಧಿಕಾರ ಹೊಂದಿದ್ದಾರೆ. ಈ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರ ಮಾತಿಗೂ ಕಿಮ್ಮತ್ತು ಸಿಕ್ಕಿಲ್ಲ. ದಶಕದಿಂದಲೂ ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಹಾಲಿ ಸದಸ್ಯರಿಗೂ ಟಿಕೆಟ್‌ ಕೊಟ್ಟಿಲ್ಲ. ಆಯಾ ವಾರ್ಡ್‌ ನಿವಾಸಿ, ಸ್ಥಳೀಯ ಮತದಾರರನ್ನು ಬಿಟ್ಟು ಅನ್ಯವಾರ್ಡ್‌ ನಿವಾಸಿಗಳಿಗೆ ಟಿಕೆಟ್‌ ನೀಡಲಾಗಿದೆ. ಯಾವುದೇ ಮಾನದಂಡ ಇಟ್ಟುಕೊಳ್ಳದೇ ಬೇಕಾಬಿಟ್ಟಿಯಾಗಿ ಟಿಕೆಟ್‌ ಹಂಚಿಕೆ ಮಾಡಲಾಗಿದೆ ಎಂದು ಆಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಲಿ ಸದಸ್ಯರಿಗೂ ಟಿಕೆಟ್‌ ಇಲ್ಲ:  ಹಾಲಿ ಸದಸ್ಯರಿಗೂ ಜೆಡಿಎಸ್‌ ಟಿಕೆಟ್‌ ನಿರಾಕರಣೆ ಮಾಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಗೆದ್ದು ಜೆಡಿಎಸ್‌ಗೆ ಬೆಂಬಲ ನೀಡಿದ್ದ ಅಭ್ಯರ್ಥಿಗಳಿಗೂ ಟಿಕೆಟ್‌ ಸಿಕ್ಕಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಕೆ.ಸಿ.ರವೀಂದ್ರ 6 ವಾರ್ಡ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್‌ ನಿರಾಕರಿಸಲಾಗಿದ್ದು ರವಿ ಎಂಬುವವರಿಗೆ ಮಣೆ ಹಾಕಲಾಗಿದೆ. 33ನೇ ವಾರ್ಡ್‌ನಿಂದ ಸದಸ್ಯೆ ಪದ್ಮಾವತಿ ಟಿಕೆಟ್‌ ಬಯಸಿದ್ದರು ಅವರಿಗೂ ಟಿಕೆಟ್‌ ಸಿಕ್ಕಿಲ್ಲ.

‘ಕಳೆದ 20 ವರ್ಷಗಳಿಂದ ಜೆಡಿಎಸ್‌ನಲ್ಲಿ ದುಡಿಯುತ್ತಿರುವ ಎಂ.ಪಿ.ಶಿವಕುಮಾರ್‌ 27ನೇ ವಾರ್ಡ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅವರಿಗೆ ಜೆಡಿಎಸ್‌ ಟಿಕೆಟ್‌ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಮುಖಂಡರ ಬೆಂಬಲವೂ ಅವರಿಗೆ ಇತ್ತು. ಆದರೆ ಶಾಸಕರು ಅನ್ಯ ವಾರ್ಡ್‌ ನಿವಾಸಿಗೆ ಟಿಕೆಟ್‌ ಕೊಟ್ಟಿದ್ದಾರೆ. ಹೀಗಾಗಿ ಶಿವಕುಮಾರ್‌ ಜೆಡಿಎಸ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ’ ಎಂದು ಜೆಡಿಎಸ್‌ ಯುವ ಮುಖಂಡ ಟಿ.ವರಪ್ರಸಾದ್‌ ಹೇಳಿದರು.

‘ಜಿಲ್ಲೆಯಲ್ಲಿ ಜೆಡಿಎಸ್‌ ಬಲಿಷ್ಠವಾಗಿದೆ. ನಗರಸಭೆಯಲ್ಲಿ ಜೆಡಿಎಸ್‌ ಆಡಳಿತ ಸ್ಥಾಪಿಸುವ ಸಾಕಷ್ಟು ಅವಕಾಶಗಳಿವೆ. ಆದರೆ ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡುತ್ತಿರುವ ಕಾರಣ ಸಮಸ್ಯೆಯಾಗಿದೆ. ಅನ್ಯವಾರ್ಡ್‌ ನಿವಾಸಿಗಳಿಗೆ ಟಿಕೆಟ್‌ ನೀಡುವುದನ್ನು ಚುನಾವಣೆ ಆಯೋಗ ನಿಷೇಧಿಸಿದರೆ ಸ್ಥಳೀಯರಿಗೆ ಅನ್ಯಾಯವಾಗುವುದನ್ನು ತಪ್ಪಿಸಬಹುದು’ ಎಂದು ನಗರಸಭೆ ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ ಹೇಳಿದರು.

ಉಸ್ತುವಾರಿ ಸಚಿವರ ಮಾತಿಗೂ ಕಿಮ್ಮತ್ತಿಲ್ಲ:  ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ತಮ್ಮ ಮೂವರು ಬೆಂಬಲಿಗರಿಗೆ ಟಿಕೆಟ್‌ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ ವರಿಷ್ಠರು ಅವರ ಕೈಗೆ ಮೂರು ಬಿ.ಫಾರಂ ಕೊಟ್ಟಿದ್ದರು. ಆದರೆ ಈ ವಿಷಯದಲ್ಲಿ ಶಾಸಕ ಎಂ.ಶ್ರೀನಿವಾಸ್‌ ತಗಾದೆ ತೆಗೆದರು. ಟಿಕೆಟ್‌ ಹಂಚಿಕೆ ವಿಷಯಯಲ್ಲಿ ಶಾಸಕರ ನಿರ್ಣಯವೇ ಅಂತಿಮ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರು ತಾವು ಪಡೆದಿದ್ದ ಮೂರು ಬಿ.ಫಾರಂಗಳನ್ನು ವಾಪಸ್‌ ಕೊಟ್ಟಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

‘ಅಸಮಾಧಾನ ವ್ಯಕ್ತಪಡಿಸಿರುವ ಆಕಾಂಕ್ಷಿಗಳು ಜೆಡಿಎಸ್‌ ಪಕ್ಷದಲ್ಲಿ ಇಲ್ಲ. ನಾಲ್ಕಾರು ಪಕ್ಷ ತಿರುಗಿ ಈಗ ಜೆಡಿಎಸ್‌ ಟಿಕೆಟ್‌ ಕೇಳುತ್ತಿದ್ದಾರೆ. ಅವರಿಗೆ ಟಿಕೆಟ್‌ ಕೊಡಲು ಸಾಧ್ಯವಿಲ್ಲ. ಪಕ್ಷದಲ್ಲಿ ದುಡಿದವರಿಗೆ ಅನ್ಯಾಯ ಮಾಡಲು ನಾನು ಸಿದ್ಧನಿಲ್ಲ. ಮುಖಂಡರ ಸಭೆ ನಡೆಸಿ ಅವರ ತೀರ್ಮಾನದಂತೆ ಟಿಕೆಟ್‌ ನೀಡಿದ್ದೇನೆ’ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.

ಅರುಣ್‌ಕುಮಾರ್‌ ಬಿಜೆಪಿಗೆ ಸೇರ್ಪಡೆ

ಜೆಡಿಎಸ್‌ ಟಿಕೆಟ್‌ ವಂಚಿತರಾಗಿರುವ ನಗರಸಭೆ ಮಾಜಿ ಅಧ್ಯಕ್ಷ, 11ನೇ ವಾರ್ಡ್‌ ಸದಸ್ಯ ಎಂ.ಪಿ.ಅರುಣ್‌ಕುಮಾರ್‌ ಶುಕ್ರವಾರ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು. ಕಳೆದ ಚುನಾವಣೆಯಲ್ಲಿ ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ್ದರು. ಜೆಡಿಎಸ್‌ನಿಂದ ಟಿಕೆಟ್‌ ನಿರೀಕ್ಷಿಸಿದ್ದ ಅವರಿಗೆ ಕಡೇ ಗಳಿಗೆಯಲ್ಲಿ ಟಿಕೆಟ್‌ ಕೈತಪ್ಪಿದೆ.

‘ಟಿಕೆಟ್‌ ಭರವಸೆ ನೀಡಿದ ಕಾರಣದಿಂದಲೇ ವಿಧಾನಸಭಾ ಚುನಾವಣೆಯಲ್ಲಿ ಎಂ.ಶ್ರೀನಿವಾಸ್‌ ಅವರ ಪರ ಕೆಲಸ ಮಾಡಿದ್ದೆ. ಆದರೆ ಈಗ ನನಗೆ ಅನ್ಯಾಯವಾಗಿದೆ. ಬೆಂಬಲಿಗರು ಹಾಗೂ ನನ್ನ ವಾರ್ಡ್‌ ಮತದಾರರ ಸಲಹೆಯಂತೆ ಬಿಜೆಪಿ ಸೇರುತ್ತಿದ್ದೇನೆ’ ಎಂದು ಅರುಣ್‌ಕುಮಾರ್‌ ಹೇಳಿದರು.

ಆಕಾಂಕ್ಷಿಗಳಿಗೆ ವರವಾದ ರಜೆ

ನಗರಸಭೆ ಚುನಾವಣೆ ನಾಮಪತ್ರ ಸಲ್ಲಿಕೆಗೆ ಆ.17 ಕಡೆಯ ದಿನಾಂಕವಾಗಿತ್ತು. ಹೀಗಾಗಿ ಆ.16 ರಾತ್ರಿಯೇ ಜೆಡಿಎಸ್‌ ಟಿಕೆಟ್‌ ಹಂಚಿಕೆ ಮಾಡಿತ್ತು. ಆದರೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿಧನರಾದ ಕಾರಣ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆಯನ್ನು ಒಂದು ದಿನ ಮುಂದಕ್ಕೆ ಹಾಕಿತು. ನಾಮಪತ್ರ ಸಲ್ಲಿಕೆಗೆ ಆ.18 ಕೊನೆಯ ದಿನವಾಗಿದ್ದು ಇದು ಟಿಕೆಟ್‌ ವಂಚಿತರಿಗೆ ವರವಾಗಿದೆ. ನಿರ್ಧಾರ ಕೈಗೊಳ್ಳಲು ಅವರಿಗೆ ಒಂದು ಹೆಚ್ಚುವರಿ ದಿನ ಸಿಕ್ಕಂತಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !