ವಿಪತ್ತು ನಿರ್ವಹಣೆ: ಜನರಿಗೂ ತರಬೇತಿ ಬೇಕು

7
ರೆಡ್‌ಕ್ರಾಸ್‌ ಸಂಸ್ಥೆಯಿಂದ ಶಿಬಿರ; ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ್‌ ಅಭಿಮತ

ವಿಪತ್ತು ನಿರ್ವಹಣೆ: ಜನರಿಗೂ ತರಬೇತಿ ಬೇಕು

Published:
Updated:
Deccan Herald

ಮಂಡ್ಯ: ‘ವಿಪತ್ತು ನಿರ್ವಹಣೆ ಕುರಿತು ಸಾರ್ವಜನಿಕರಿಗೂ ತರಬೇತಿ ನೀಡಬೇಕಾದ ಅವಶ್ಯಕತೆ ಇದೆ. ಜನರಿಗೂ ತರಬೇತಿ ಇದ್ದರೆ ಅಪಾಯದ ಸಂದರ್ಭದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ಸಹಾಯವಾಗುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ್‌ ಹೇಳಿದರು.

ಭಾನುವಾರ ನಗರದ ಎಸ್‌.ಸಿ ಸಮುದಾಯಭವನದಲ್ಲಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ವತಿಯಿಂದ ನಡೆದ ಮೂರು ದಿನಗಳ ವಿಪತ್ತು ನಿರ್ವಹಣಾ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಸಿಬ್ಬಂದಿ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ವಿಪತ್ತು ಸಂಭವಿಸಿರುವ ಸ್ಥಳಕ್ಕೆ ತೆರಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಹೀಗಾಗಿ ಜನರು ಕೂಡ ವಿಪತ್ತು ನಿರ್ವಹಣೆಯ ತರಬೇತಿ ಪಡೆದಿದ್ದರೆ ಜೀವಹಾನಿಯನ್ನು ತಡೆಗಟ್ಟಬಹುದು. ಕೊಡುಗು ಜಿಲ್ಲೆಯ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ. ಮಂಡ್ಯ ಜಿಲ್ಲೆಯಿಂದಲೂ ಪೊಲೀಸ್‌ ಸಿಬ್ಬಂದಿಯನ್ನು ಕೊಡುಗು ಜಿಲ್ಲೆಗೆ ಕಳುಹಿಸಿದ್ದೇವೆ. ಮುಂದೆ ಸಾರ್ವಜನಿಕರಿಗೂ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮ ನಡೆಯಬೇಕು’ ಎಂದು ಹೇಳಿದರು.

‘ಜನರು ಹಾಗೂ ಪೊಲೀಸರ ನಡುವೆ ಸಹಕಾರ ಮನೋಭಾವ ಬೆಳೆಯಬೇಕು. ಒಬ್ಬ ಪೊಲೀಸ್‌ ಸಿಬ್ಬಂಬಿ ಒಂದು ಲಕ್ಷ ಜನರನ್ನು ಪ್ರತಿನಿಧಿಸುತ್ತಾನೆ. ಪೊಲೀಸರ ಸೇವೆಗೆ ಸಾರ್ವಜನಿಕರ ಸಹಕಾರ ಬಹಳ ಅವಶ್ಯಕವಾಗುತ್ತದೆ. ಯಾವುದೇ ದುರ್ಘಟನೆ ನಡೆದಾಗ ಪೊಲೀಸರು ರಕ್ಷಣಾ ಕಾರ್ಯ ಕೈಗೊಳ್ಳಲು ಜನರು ಕೈಜೋಡಿಸಬೇಕು. ಜನರ ಸಹಕಾರವಿದ್ದರೆ ಪೊಲೀಸರು ದೈರ್ಯದಿಂದ ಮುನ್ನಡೆಯುತ್ತಾರೆ’ ಎಂದು ಹೇಳಿದರು.

‘ರೆಡ್‌ಕ್ರಾಸ್‌ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಬಹುದೊಡ್ಡ ಇತಿಹಾಸವೇ ಇದೆ. 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಸ್ವಿಜರ್ಲೆಂಡ್‌ ಮೇಲೆ ಯಾವ ದೇಶವೂ ದಾಳಿ ಮಾಡಲಿಲ್ಲ. ಯುದ್ಧಪೀಡಿತ ಫ್ರಾನ್ಸ್‌, ಜರ್ಮನಿ, ಇಟಲಿ ದೇಶಗಳಿಗೆ ಸ್ವಿವಜರ್ಲೆಂಡ್‌ ಸಮೀಪವೇ ಇತ್ತು. ಆದರೂ ಆ ದೇಶ ಸುರಕ್ಷಿತವಾಗಿತ್ತು. ಅಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯ ಚಟುವಟಿಕೆಗಳು ಬಹಳ ಚೆನ್ನಾಗಿ ನಡೆಯುತ್ತಿದ್ದ ಕಾರಣ ಸ್ವಿಜರ್ಲೆಂಡ್‌ ಯುದ್ಧದಿಂದ ಮುಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯ ಚಟುವಟಿಕೆಗಳು ದೇಶದ ಎಲ್ಲಾ ಭಾಗದಲ್ಲೂ ನಡೆಯಬೇಕು’ ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಕರ್ನಾಟಕ ಶಾಖೆ ಸಭಾಪತಿ ಬಸ್ರೂರು ರಾಜೀವ್‌ ಶೆಟ್ಟಿ ಮಾತನಾಡಿ ‘ಪ್ರಕೃತಿಯ ವಿರುದ್ಧ ನಾವು ನಡೆದುಕೊಂಡ ಪರಿಣಾಮವಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಪ್ರಕೃತಿ ವಿಕೋಪದ ಮುಂದೆ ಮನುಷ್ಯನ ಶಕ್ತಿ ಬಲು ಸಣ್ಣದು. ವಿಕೋಪವನ್ನು ನಿರ್ವಹಣೆ ಮಾಡಲು ತರಬೇತಿಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಯುವಜನರು ವಿಪತ್ತು ನಿರ್ವಹಣೆಯ ತರಬೇತಿ ಪಡೆದು ವಿಕೋಪ ಎದುರಾದಾಗ ಸಮಸ್ಯೆಯಲ್ಲಿ ಸಿಲುಕಿದ ಜನರ ರಕ್ಷಣೆಗೆ ಧಾವಿಸಬೇಕು. ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ನಿಭಾಯಿಸಲು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ತರಬೇತಿ ನೀಡುತ್ತಿದೆ. ತರಬೇತಿಗೆ ಬೇಕಾದ ಮಾನವ ಸಂಪನ್ಮೂಲ, ಅಗತ್ಯ ಸೌಲಭ್ಯ ಒದಗಿಸುತ್ತಿದೆ ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ಕೋಶಾಧ್ಯಕ್ಷ ಡಾ.ವಿ.ಎಲ್‌.ಎಸ್‌.ಕುಮಾರ್‌, ಮಂಡ್ಯ ಜಿಲ್ಲಾ ಶಾಲೆ ಗೌರವ ಕಾರ್ಯದರ್ಶಿ ಡಾ.ಕೆ.ಎಂ.ಶಿವಕುಮಾರ್‌ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !