ವಿಷಯುಕ್ತ ಬಣ್ಣಗಳಿಂದ ದೂರ, ಪರಿಸರಸ್ನೇಹಿ ಗಣೇಶನಿಗೆ ವಿಜೇಶಚಾರ್‌ ರೂಪ

7
ಜೇಡಿಮಣ್ಣಿನಿಂದ ಸಾವಿರಾರು ಮೂರ್ತಿ ತಯಾರಿಕೆ

ವಿಷಯುಕ್ತ ಬಣ್ಣಗಳಿಂದ ದೂರ, ಪರಿಸರಸ್ನೇಹಿ ಗಣೇಶನಿಗೆ ವಿಜೇಶಚಾರ್‌ ರೂಪ

Published:
Updated:
Deccan Herald

ಕೊಪ್ಪ: ಬೆಸಗರಹಳ್ಳಿ ಗ್ರಾಮದ ವಿಜೇಶ್‌ಚಾರ್‌ ಕಳೆದ 25 ವರ್ಷಗಳಿಂದ ಪರಿಸರ ಸ್ನೇಹಿ ಗೌರಿ– ಗಣೇಶ ಮೂರ್ತಿ ತಯಾರಿಸುತ್ತಿದ್ದು ನೈಸರ್ಗಿಕ ಹಬ್ಬ ಆಚರಣೆಯ ಸಂದೇಶ ನೀಡುತ್ತಿದ್ದಾರೆ.

ಪುಟ್ಟರಾಜುಚಾರ್‌ ಮತ್ತು ಜಯಲಕ್ಷ್ಮಮ್ಮ ಅವರ ಪುತ್ರರಾಗಿರುವ ವಿಜೇಶ್‌ಚಾರ್‌ ವಿಘ್ನ ವಿನಾಯಕನಿಗೆ ಮಣ್ಣಿನಿಂದ ಸುಂದರ ರೂಪ ಕೊಟ್ಟಿದ್ದಾರೆ. ಅವರು ರಾಸಾಯನಿಕ, ವಿಷಯುಕ್ತ ಬಣ್ಣಗಳಿಂದ ದೂರವೇ ಉಳಿದಿದ್ದಾರೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಬಳಸದೇ ಜೇಡಿ ಮಣ್ಣಿನಿಂದ ಮೂರುತಿಗಳಿಗೆ ರೂಪ ತುಂಬಿದ್ದಾರೆ. ಅವರ ಜೊತೆ ಪ್ರದೀಪ್‌ಕುಮಾರ್‌, ಲೋಕೇಶ, ಶ್ರೀನಿವಾಸ, ಶ್ರೀಧರ, ಮಹೇಶ, ಚಂದ್ರು ಮತ್ತು ಪ್ರಭಾಷ್‌ ಸಾಥ್‌ ನೀಡಿದ್ದಾರೆ.

ಈ ಗೌರಿ–ಗಣೇಶ ಹಬ್ಬಕ್ಕೆ ಅವರು ವೈವಿಧ್ಯಮಯ ರೂಪದ ಮೂರುತಿ ಸೃಷ್ಟಿಸಿದ್ದಾರೆ. ಈಶ್ವರ, ಪಾರ್ವತಿ, ಆಂಜನೇಯ, ನವಿಲು, ಕಮಲ, ಹುಲಿ, ಸಿಂಹ, ಹಂಸ, ಜಿಂಕೆ, ಆನೆ, ಲಿಂಗ, ಗಿಳಿ ಸೇರಿ ವಿವಿಧ ಆಕೃತಿಗಳ ಮೇಲೆ ಗಣೇಶ ಆಸೀನನಾಗಿರುವ ಮೂರ್ತಿ ತಯಾರಿಸಿದ್ದಾರೆ. ಈಗಾಗಲೇ ಅವರು ಸಾವಿರಾರು ಮೂರ್ತಿ ತಯಾರಿಸಿದ್ದಾರೆ. ಮುಕ್ಕಾಲು ಅಡಿಯಿಂದ 12 ಅಡಿವರೆಗೆ ಮಣ್ಣಿನ ಮತ್ತು ರಟ್ಟಿನ ಮೂರ್ತಿಗಳನ್ನು ತಯಾರಿಸಿದ್ದಾರೆ. ಜನರು ಮೂರ್ತಿಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಮೂರ್ತಿಗೆ ರೂಪ ಕೊಡಲು ಪರಿಸರ ಸ್ನೇಹಿ ಬಣ್ಣವನ್ನಷ್ಟೇ ಬಳಸಿದ್ದಾರೆ.

ಕಳೆದ ನಾಲ್ಕು ತಿಂಗಳುಗಳಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಅವರು ಈ ಭಾಗದ ಪ್ರಸಿದ್ಧ ಕಲಾವಿದರಾಗಿದ್ದಾರೆ. ಈ ವರ್ಷ ಅತಿ ಹೆಚ್ಚು ಮೂರ್ತಿಗಳನ್ನು ಜನರು ಕಾಯ್ದಿರಿಸಿರುವುದು ವಿಶೇಷವಾಗಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇರುವುದು ಇದರಿಂದ ಗೊತ್ತಾಗುತ್ತದೆ. ವಿಜಯ್‌ ಆರ್ಟ್ಸ್‌ ಸಂಸ್ಥೆಯಡಿ ಕೆಲಸ ಮಾಡುತ್ತಿರುವ ಅವರು ಈ ಭಾಗದ ಯುವಕರಿಗೆ ಮಾದರಿಯಾಗಿದ್ದಾರೆ.

‘ಬೆಸಗರಹಳ್ಳಿ ಭಾಗದಲ್ಲಿ ವಿಜೇಶಚಾರ್‌ ನೈಸರ್ಗಿಕ ಗಣೇಶ ಹಬ್ಬದ ಜಾಗೃತಿ ಮೂಡಿಸುತ್ತಿದ್ದಾರೆ. ರಾಸಾಯನಿಕ ಬಣ್ಣಗಳಿಂದ ಗಣೇಶ ಮೂರ್ತಿಗಳನ್ನು ಮುಕ್ತಗೊಳಿಸಿರುವುದು ಹೆಗ್ಗಳಿಕೆಯ ವಿಚಾರವಾಗಿದೆ’ ಎಂದು ನಿವೃತ ಪ್ರಚಾರ್ಯ ಯಧುಶೈಲಸಂಪತ್‌ ಹೇಳುತ್ತಾರೆ. ಕಲಾವಿದ ವಿಜೇಶಚಾರ್‌ ಅವರ ಜೊತೆ ಮಾತನಾಡಲು ಮೊ; 8880049595 ಸಂಪರ್ಕಿಸಬಹುದು.

* ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ತಯಾರಿಸುವುದೇ ನನ್ನ ಗುರಿ. ಕೆರೆ, ಕಟ್ಟೆ ನೀರಿಗೆ ಮತ್ತು ಜಲಚರಗಳಿಗೆ ಹಾನಿಯಾಗದ ನೈಸರ್ಗಿಕ ಬಣ್ಣಗಳನ್ನು ಗೌರಿ– ಗಣೇಶ ಮೂರ್ತಿಗಳಿಗೆ ಲೇಪಿಸಿದ್ದೇನೆ. ಈ ಭಾಗದ ಜನರು ನನ್ನ ಪಯತ್ನವನ್ನು ಮನಸಾರೆ ಪ್ರೋತ್ಸಾಹಿಸುತ್ತಿದ್ದಾರೆ.
–ವಿಜೇಶಚಾರ್, ಕಲಾವಿದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !