ಮಂಗಳವಾರ, ಮಾರ್ಚ್ 2, 2021
28 °C
ಆರಂಭಗೊಳ್ಳದ ಅಂಗನವಾಡಿ ಕಟ್ಟಡ ಕಾಮಗಾರಿ

ಭೂಮಿಪೂಜೆ: ಶಾಸಕರಿಗೆ ಕಾಯುವುದು ಬೇಡ- ಜಿ.ಪಂ. ಸಿಇಒ ಕೆ.ಯಾಲಕ್ಕಿಗೌಡ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಂಡ್ಯ: ‘ಜಿಲ್ಲೆಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಭೂಮಿಪೂಜೆ ನಡೆಸಲು ಶಾಸಕರಿಗೆ ಕಾಯುತ್ತಾ ಕುಳಿತರೆ ಅನವಶ್ಯಕವಾಗಿ ತಡವಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಕಾಮಗಾರಿಗೆ ಚಾಲನೆ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲದೆ ಮಕ್ಕಳಿಗೆ ಸಮಸ್ಯೆಯಾಗಿದೆ. ಕೆಆರ್‌ಐಡಿಎಲ್‌ ಅಧಿಕಾರಿಗಳು ಕೇವಲ 8 ಕಟ್ಟಡಗಳನ್ನು ಮಾತ್ರ ಪೂರ್ಣಗೊಳಿಸಿದ್ದಾರೆ. ಹಣಕಾಸಿನ ತೊಂದರೆ ಇದ್ದರೆ ಸಂಸದರ ಅನುದಾನ ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಹೊಸ ಕಟ್ಟಡಗಳನ್ನು ಸೇರಿಸಿಕೊಂಡು ತಕ್ಷಣ ಕಾಮಗಾರಿ ಆರಂಭಿಸಬೇಕು. ಸ್ಥಳೀಯವಾಗಿ ಸಿಗುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರನ್ನೇ ಆಹ್ವಾನಿಸಿ ಕಾಮಗಾರಿಗೆ ಭೂಮಿಪೂಜೆ ನಡೆಸಬೇಕು’ ಎಂದು ಹೇಳಿದರು.

ಕೆಆರ್‌ಐಡಿಎಲ್‌ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಪ್ಪ ಉತ್ತರಿಸಿ ‘ಈಗಾಗಲೇ 8 ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿದ್ದು ಡಿಸೆಂಬರ್‌ ಅಂತ್ಯಕ್ಕೆ ಹಸ್ತಾಂತರ ಮಾಡಲಾಗುವುದು. ಮಳವಳ್ಳಿ ತಾಲ್ಲೂಕಿನಲ್ಲಿ 4, ಶ್ರೀರಂಗಪಟ್ಟಣ 3, ಪಾಂಡವಪುರ 2, ನಾಗಮಂಗಲ 1, ಮದ್ದೂರು 2 ಅಂಗನವಾಡಿ ಕಟ್ಟಡಗಳ ಕಾಮಗಾರಿ ಆರಂಭವಾಗಬೇಕಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು’ ಎಂದು ಹೇಳಿದರು.

ಒಣಗುತ್ತಿದೆ ರಾಗಿ, ಹುರುಳಿ
ಕೃಷಿ ಇಲಾಖೆ ಉಪ ನಿರ್ದೇಶಕಿ ಎಚ್‌.ಎನ್‌.ಮಮತಾ ಮಾತನಾಡಿ ‘ನವೆಂಬರ್ ತಿಂಗಳಾಂತ್ಯಕ್ಕೆ ವಾಡಿಕೆ ಮಳೆ ಬೀಳದ ಕಾರಣ ಮಳೆಯಾಶ್ರಿತ ಪ್ರದೇಶದಲ್ಲಿ ಹುರುಳಿ, ರಾಗಿ ಬೆಳೆ ಒಣಗುತ್ತಿವೆ. 51 ಮಿ.ಮೀ ವಾಡಿಕೆ ಮಳೆ ಸುರಿಯಬೇಕಾಗಿತ್ತು. ಆದರೆ 12.9 ಮಿ.ಮೀ ಮಳೆ ಸುರಿದಿದೆ. ನೀರಾವರಿ ಪ್ರದೇಶದಲ್ಲಿ ಭತ್ತದ ಕಟಾವು ನಡೆಯುತ್ತಿದ್ದು ಮಾರಾಟಕ್ಕಾಗಿ ಖರೀದಿ ಕೇಂದ್ರ ತೆರೆಯಲಾಗಿದೆ. ಹೋಬಳಿ ಕೇಂದ್ರಗಳಲ್ಲಿ ಕೇಂದ್ರ ತೆರೆಯಲಾಗಿದ್ದು ರೈತರು ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಮಾರ್ಚ್‌ ಕೊನೆಯವರೆಗೂ ಖರೀದಿ ನಡೆಯಲಿದೆ. ಸರ್ಕಾರ ₹ 1,750 ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ’ ಎಂದು ಹೇಳಿದರು.

ಇದಕ್ಕೆ ಅಧ್ಯಕ್ಷೆ ನಾಗರತ್ನಾ ಸ್ವಾಮಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದಿಂದ ₹ 1,750ರ ಜೊತೆಗೆ ₹ 100 ಹೆಚ್ಚುವರಿ ಹಣ ಘೋಷಣೆ ಮಾಡಿದ್ದಾರೆ ಎಂದರು. ಈ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಮಮತಾ ತಿಳಿಸಿದರು.

ವಾಪಸ್‌ ಹೋಗುತ್ತಿದೆ ಪಾಲಿಹೌಸ್‌ ಹಣ:
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ರಾಜು ಮಾತನಾಡಿ ‘ರೈತರು ಪಾಲಿಹೌಸ್‌ ನಿರ್ಮಿಸಿಕೊಳ್ಳಲು ಸರ್ಕಾರ ಶೇ 50 ಸಹಾಯಧನ ನೀಡುತ್ತದೆ. ಆದರೆ ರೈತರು ಆಧುನಿಕ ಕೃಷಿ ಮಾಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ವಾಪಸ್‌ ಹೋಗುವ ಸಾಧ್ಯತೆ ಇದೆ. ಸರ್ಕಾರದ ಸಹಾಯ ಪಡೆದು ಪಾಲಿಹೌಸ್‌ ಕೃಷಿ ಮಾಡಬಹುದು. ವ್ಯಾಪಾರಿಗಳು ಸ್ಥಳಕ್ಕೆ ಬಂದು ಉತ್ಪನ್ನ ಕೊಳ್ಳುತ್ತಾರೆ. ಆದರೆ ರೈತರಿಗೆ ಆಸಕ್ತಿ ಕಡಿಮೆಯಾಗಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲೂ ರೈತರು ಮುಂದೆ ಬರುತ್ತಿಲ್ಲ. ಈ ಬಗ್ಗೆ ಎಷ್ಟೇ ಪ್ರಚಾರ ಕೈಗೊಂಡರೂ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ರೈತರಿಗೆ ಈ ಬಗ್ಗೆ ಹೆಚ್ಚೆಚ್ಚು ಅರಿವು ಮೂಡಿಸುವಂತೆ ಸಿಇಒ ಸಲಹೆ ನೀಡಿದರು.

ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಟಿ.ಮಂಜು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಪ್ರಕಾಶ್‌ ಹಾಜರಿದ್ದರು.

ಎಸ್ಸೆಸ್ಸೆಲ್ಸಿ: ಅವಮಾನ ತಪ್ಪಿಸಿ

‘ಕಳೆದ ವರ್ಷ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ 28ನೇ ಸ್ಥಾನಕ್ಕೆ ಕುಸಿದಿರುವುದು ಅವಮಾನಕರ ವಿಷಯ. ಫಲಿತಾಂಶ ಸುಧಾರಿಸಲು ಯಾವ ಕ್ರಮ ಕೈಗೊಂಡಿದ್ದೀರಿ’ ಎಂದು ಸಿಇಒ ಯಾಲಕ್ಕಿಗೌಡ ಡಿಡಿಪಿಐ ಸೂರ್ಯಪ್ರಕಾಶ್‌ ಮೂರ್ತಿ ಅವರನ್ನು ಪ್ರಶ್ನಿಸಿದರು.

‘ಕಳೆದ ಬಾರಿ ಶೂನ್ಯ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್‌ ಜಾರಿಗೊಳಿಸಲಾಗಿತ್ತು. ಫಲಿತಾಂಶ ಸುಧಾರಣೆಗೆ ಐದು ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಶಿಕ್ಷಣ ಇಲಾಖೆಯಿಂದ 5, ಶಾಲಾ ವ್ಯಾಪ್ತಿಯಲ್ಲಿ 2 ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಒಂದೆರಡು ಅಂಕಗಳಿಂದ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುವುದು. 40 ಅಂಕ ಪಡೆದು ಉತ್ತೀರ್ಣಗೊಳ್ಳುವಂತೆ ಅವರಿಗೆ ಕೆಲವು ಅಭ್ಯಾಸಗಳನ್ನು ತಯಾರಿಸಲಾಗಿದೆ. ವಿಷಯವಾರು ಶಿಕ್ಷಕರಿಗೆ ಈಗಾಗಲೇ ತರಬೇತಿ ನಡೆಸಲಾಗಿದ್ದು ವಿಶೇಷ ತರಗತಿ ನಡೆಸಲು ಸೂಚನೆ ನೀಡಲಾಗಿದೆ. ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಡಿಡಿಪಿಐ ಉತ್ತರಿಸಿದರು.

ಹಣ ಪಡೆಯುವ ವೈದ್ಯರು

‘ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಣ ಪಡೆಯುತ್ತಿರುವ ದೂರುಗಳು ಬಂದಿವೆ. ಆಸ್ಪತ್ರೆಗಳಲ್ಲಿ ಔಷಧಾಲಯ ಇದ್ದರೂ ಖಾಸಗಿ ಅಂಗಡಿಗಳಿಗೆ ಚೀಟಿ ಬರೆದುಕೊಡುತ್ತಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗೆ ವೈದ್ಯಾಧಿಕಾರಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಡಿಎಚ್‌ಒ ಡಾ.ನಾಗರಾಜ್‌ ‘ಆಸ್ಪತ್ರೆಗಳಲ್ಲಿ ಔಷಧಾಲಯಗಳು ಇರುವ ಬಗ್ಗೆ ಫಲಕ ಹಾಕಲಾಗಿದೆ. ವೈದ್ಯರು ಹಣ ಪಡೆದಯುತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು