ಕಾಂಗ್ರೆಸ್‌ ಟಿಕೆಟ್‌ ಬೇಕು, ಎಂಎಲ್‌ಸಿ ಸ್ಥಾನ ಬೇಡ: ಸುಮಲತಾ

ಮಂಗಳವಾರ, ಮಾರ್ಚ್ 19, 2019
33 °C

ಕಾಂಗ್ರೆಸ್‌ ಟಿಕೆಟ್‌ ಬೇಕು, ಎಂಎಲ್‌ಸಿ ಸ್ಥಾನ ಬೇಡ: ಸುಮಲತಾ

Published:
Updated:
Prajavani

ಮಂಡ್ಯ: ‘ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ನನಗೆ ವಿಧಾನ ಪರಿಷತ್‌ ಸದಸ್ಯ ಹುದ್ದೆ ಅಥವಾ ಮತ್ತಾವುದೇ ಸ್ಥಾನ ಬೇಡ, ಕಾಂಗ್ರೆಸ್‌ ಟಿಕೆಟ್‌ ಬೇಕು’ ಎಂದು ಸುಮಲತಾ ಸೋಮವಾರ ಸ್ಪಷ್ಟವಾಗಿ ಹೇಳಿದರು.

‘ಎಂಟು ತಿಂಗಳ ಹಿಂದೆಯೇ ಎಂಎಲ್‌ಸಿ ಸ್ಥಾನದ ಅವಕಾಶ ಬಂದಿತ್ತು. ಆದರೆ ನಾನು ಅದನ್ನು ತಿರಸ್ಕಾರ ಮಾಡಿದೆ. ಈಗಲೂ ಕೆಲವರು ಸ್ಥಾನ ಕೊಡುವುದಾಗಿ ಹೇಳುತ್ತಿದ್ದಾರೆ, ನನಗೆ ಯಾವುದೇ ಸ್ಥಾನ ಬೇಕಾಗಿಲ್ಲ, ಕಾಂಗ್ರೆಸ್‌ ಟಿಕೆಟ್‌ ಬೇಕು. ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ ಟಿಕೆಟ್‌ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕುರಿತು ಜನಾಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಕಾಂಗ್ರೆಸ್‌ ಪಕ್ಷದಿಂದ ಉತ್ತರ ಸಿಕ್ಕಿದ ನಂತರ ನನ್ನ ನಿರ್ಧಾರ ಪ್ರಕಟಿಸುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಚುನಾವಣೆ ಎಂದರೆ ಯುದ್ಧವಲ್ಲ: ‘ಚುನಾವಣೆ ಎಂದರೆ ಯುದ್ಧವಲ್ಲ, ಒಂದು ಸ್ಪರ್ಧೆಯಷ್ಟೇ. ಸೋಲು–ಗೆಲುವು ಸಾಮಾನ್ಯ. ನನ್ನ ಎದುರು ಯಾರೇ ಸ್ಪರ್ಧಿಸಿದರೂ ನನಗೆ ಭಯವಿಲ್ಲ. ರಾಜಕಾರಣದಲ್ಲಿ ನನಗೆ ಯಾವ ಮಹತ್ವಾಕಾಂಕ್ಷೆಯೂ ಇಲ್ಲ. ಆದರೆ ಜನರ ಪ್ರೀತಿಗಾಗಿ ಸ್ಪರ್ಧೆ ಮಾಡುವ ತೀರ್ಮಾನ ಕೈಗೊಂಡಿದ್ದೇನೆ. ಈಗ ಅಂಬರೀಷ್‌ ಇಲ್ಲ, ಮತ್ತೆ ಯಾರಿದ್ದಾರೆ ನನ್ನ ಜೊತೆ ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಅಂಬರೀಷ್‌ ಅಭಿಮಾನಿಗಳು ನನ್ನ ಜೊತೆಗಿದ್ದಾರೆ, ನಾನೂ ಅವರ ಜೊತೆಗಿರುತ್ತೇನೆ’ ಎಂದು ಹೇಳಿದರು.

‘ಕುಟುಂಬ ಸದಸ್ಯರನ್ನು ರಾಜಕಾರಣಕ್ಕೆ ತರುವುದಿಲ್ಲ ಎಂದು ಅಂಬರೀಷ್‌ ಅವರು ಹೇಳಿದ್ದು ನಿಜ. ಬೇರೆಯವರ ಮಕ್ಕಳನ್ನು ಬೆಳೆಸಬೇಕು ಎಂದು ಅವರು ಸದಾ ಹೇಳುತ್ತಿದ್ದರು. ಅಂತಹ ರಾಜಕಾರಣಿ ಅಪರೂಪ. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ಅವರು ಮೃತಪಟ್ಟ ನಂತರ ಜನರ ಪ್ರೀತಿಗೆ ನಾನು ಸೋತು ಹೋಗಿದ್ದೇನೆ. ಆ ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಅಂಬರೀಷ್‌ ನೆರಳು ನನ್ನ ಹಿಂದೆ ಸದಾ ಇರುತ್ತದೆ’ ಎಂದರು.

ಮುಖ್ಯಮಂತ್ರಿಗೆ ತಿರುಗೇಟು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದೇ ಉತ್ತರಿಸಿದ ಅವರು ‘ಅಂಬರೀಷ್‌ ಏನು ಕೆಲಸ ಮಾಡಿದ್ದಾರೆ ಎಂದು ಜನರಿಗೆ ಗೊತ್ತಿದೆ. ಆರೋಗ್ಯ ಸರಿ ಇಲ್ಲದಿದ್ದಾಗಲೂ ಕೇವಲ ಫೋನ್‌ ಕರೆಗಳ ಮೂಲಕವೇ ಅಧಿಕಾರಿಗಳಿಂದ ಕೆಲಸ ಮಾಡಿಸುತ್ತಿದ್ದರು. ವಸತಿ ಸಚಿವರಾಗಿದ್ದಾಗ ಲಕ್ಷಾಂತರ ಬಡವರಿಗೆ ಮನೆ ಕೊಟ್ಟಿದ್ದಾರೆ. ತಾವು ಮಾಡಿರುವ ಕೆಲಸಗಳಿಗೆ ಅವರು ಪ್ರಚಾರ ಪಡೆಯಲಿಲ್ಲ. ಮುಖಪುಟ ಜಾಹೀರಾತು ನೀಡಲಿಲ್ಲ’ ಎಂದು ತಿರುಗೇಟು ನೀಡಿದರು.

ಕಲಾವತಿಗೆ ಹೆಸರಿನಲ್ಲಿ ದಾನಪತ್ರ
ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮದ್ದೂರು ತಾಲ್ಲೂಕು ಗುಡಿಗೆರೆ ಗ್ರಾಮದ ಹುತಾತ್ಮ ಯೋಧ ಎಚ್‌.ಗುರು ಕುಟುಂಬ ಸದಸ್ಯರಿಗೆ ಸುಮಲತಾ 20 ಗುಂಟೆ ಜಮೀನಿನ ದಾನಪತ್ರ ವಿತರಣೆ ಮಾಡಿದರು. ‘ಯೋಧ ಗುರು ಮೃತಪಟ್ಟಾಗ ನಾನು ಮಲೇಷ್ಯಾದಲ್ಲಿದ್ದೆ. ಯೋಧನ ಕುಟುಂಬ ಸದಸ್ಯರಿಗೆ ಜಮೀನು ಇಲ್ಲ ಎಂದು ತಿಳಿದಾಗ ಅಂಬರೀಷ್‌ ಅವರ ಜಮೀನನ್ನೇ ದಾನ ಮಾಡಲು ನಿರ್ಧರಿಸಿದೆ. ಅದರಂತೆ ಕಲಾವತಿ ಅವರ ಹೆಸರಿನಲ್ಲಿ ದಾನಪತ್ರ ವಿತರಣೆ ಮಾಡಿದ್ದೇನೆ. ಯಾವುದೇ ಷರತ್ತುಗಳಿಲ್ಲದೇ ಜಮೀನು ದಾನ ಮಾಡಿದ್ದೇನೆ. ಶೀಘ್ರ ನೋಂದಣಿ ಪ್ರಕ್ರಿಯೆ ಪೂರೈಸಲಾಗುವುದು’ ಎಂದು ಸುಮಲತಾ ಹೇಳಿದರು.

ಬರಹ ಇಷ್ಟವಾಯಿತೆ?

 • 42

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !