ಮಂಡ್ಯ: ಜೆಡಿಎಸ್‌ನಲ್ಲಿ ನಾಯಕರಿಲ್ಲವೇ?

ಗುರುವಾರ , ಮಾರ್ಚ್ 21, 2019
27 °C
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ, ಹರಿದಾಡುತ್ತಿವೆ ಸಂದೇಶ. ವಿಡಿಯೊಗಳು

ಮಂಡ್ಯ: ಜೆಡಿಎಸ್‌ನಲ್ಲಿ ನಾಯಕರಿಲ್ಲವೇ?

Published:
Updated:
Prajavani

ಮಂಡ್ಯ: ಹಾಸನದ ನಿಖಿಲ್‌ ಮಂಡ್ಯ ಕ್ಷೇತ್ರದಿಂದ ಏಕೆ ಸ್ಪರ್ಧೆ ಮಾಡಬೇಕು? ಜಿಲ್ಲೆಯ ಜೆಡಿಎಸ್‌ನಲ್ಲಿ ನಾಯಕರಿಲ್ಲವೇ? ಜೆಡಿಎಸ್‌ ಮುಖಂಡರು ಕಡೆಯವರೆಗೂ ಕಾರ್ಯಕರ್ತರಾಗಿಯೇ ಉಳಿಯಬೇಕೆ? ಎಚ್‌.ಡಿ.ದೇವೇಗೌಡರ ಕುಟುಂಬ ರಾಜಕಾರಣದಿಂದಾಗಿ ನಿಷ್ಠಾವಂತ ಕಾರ್ಯಕರ್ತರು ಬಲಿಯಾಗಬೇಕೆ?– ಇಂಥ ಹತ್ತಾರು ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡಿರುವ ಕ್ರಾಂತಿ ಸಿಂಹ ಎನ್ನುವ ವಾಟ್ಸ್‌ಆ್ಯಪ್‌ ಬಳಕೆದಾರ ‘ಕೆ.ಟಿ.ಎಸ್‌ (ಕೆ.ಟಿ.ಶ್ರೀಕಂಠೇಗೌಡ) ಜೆಡಿಎಸ್‌’ ಗುಂಪಿನಲ್ಲಿ ಪ್ರಶ್ನೆಗಳನ್ನು ಹರಿಬಿಟ್ಟಿದ್ದಾರೆ. ಫೇಸ್‌ಬುಕ್‌ನಲ್ಲೂ ಸಂದೇಶ ಪ್ರಕಟಿಸಿದ್ದಾರೆ. ನೂರಾರು ಬಳಕೆದಾರರು ಈ ಪ್ರಶ್ನೆಗಳನ್ನು ಹಂಚಿಕೊಂಡು ಚರ್ಚೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜಿಲ್ಲೆಯ ಯಾವ ನಾಯಕನನ್ನೂ ಬೆಳೆಯಲು ಬಿಡುತ್ತಿಲ್ಲ. ಕುಟುಂಬ ರಾಜಕಾರಣವನ್ನು ಇನ್ನು ಎಷ್ಟು ದಿನ ಸಹಿಸಿಕೊಳ್ಳುವುದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜೆಡಿಎಸ್‌ ಬಡ ಕಾರ್ಯಕರ್ತರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ನಾವು ಜೆಡಿಎಸ್‌ ಪಕ್ಷ ಬಿಟ್ಟು ಬೇರಾವ ಪಕ್ಷಕ್ಕೂ ಮತ ಹಾಕುವುದಿಲ್ಲ. ಹೀಗಾಗಿ ನಾನೇ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದೇನೆ. ಜೆಡಿಎಸ್‌ನಿಂದ ಅನ್ಯಾಯ ಅನುಭವಿಸಿರುವ ಮುಖಂಡರ ಧ್ವನಿಯಾಗಿ ಕೆಲಸ ಮಾಡಲು ಸಹಕರಿಸಿ’ ಎಂದು ಕ್ರಾಂತಿ ಸಿಂಹ ಸಂದೇಶ ಪ್ರಕಟಿಸಿದ್ದಾರೆ.

ಅಂಬರೀಷ್‌ ಅಭಿಮಾನಿಗಳ ಪ್ರಶ್ನೆ: ಮತ್ತೊಂದೆಡೆ ಅಂಬರೀಷ್‌ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ 
ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. ಈ ಕುರಿತ ವಿಡಿಯೊ ಹರಿದಾಡುತ್ತಿದೆ.

‘ಎಸ್‌.ಡಿ.ಜಯರಾಂ ಪುತ್ರ ಅಶೋಕ್‌ಗೆ ಟಿಕೆಟ್‌ ಕೊಡಬಹುದಾಗಿತ್ತು. ಜೆಡಿಎಸ್‌ಗಾಗಿ ಪ್ರಾಣವನ್ನೇ ಕೊಟ್ಟ ತೊಪ್ಪನಹಳ್ಳಿ ಪ್ರಕಾಶ್‌ ಪತ್ನಿಯನ್ನು ಕಣಕ್ಕೆ ಇಳಿಸಬಹುದಾಗಿತ್ತು. ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡುವುದು ನಿಮ್ಮ ಪಕ್ಷದ ಸಿದ್ಧಾಂತವೇ’ ಎಂದು 
ಪ್ರಶ್ನಿಸಿದ್ದಾರೆ.

ಕಾರ್ಮಿಕ ಹೋರಾಟಗಾರ ಎಂ.ಬಿ.ನಾಗಣ್ಣಗೌಡ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ‘ಹಾಸನ ಮೊಮ್ಮಗನೂ ಬೇಡ, ಮಂಡ್ಯ ಸೊಸೆಯೂ ಬೇಡ. ಜನರ ಸಂಕಷ್ಟ ಅರಿಯುವ ಸ್ಥಳೀಯ ಪ್ರತಿನಿಧಿಯೊಬ್ಬರು ಬೇಕು’ ಎಂದು ಸಂದೇಶ ಪ್ರಕಟಿಸಿದ್ದಾರೆ.

ಮನೆ ರಾಜಕಾರಣ: ನಗರದಲ್ಲಿ ಮನೆ ಮಾಡಲು ನಿಖಿಲ್‌ ಹಾಗೂ ಸುಮಲತಾ ಪೈಪೋಟಿ ನಡೆಸುತ್ತಿದ್ದಾರೆ. ಅಂಬರೀಷ್‌ ಅವರಿದ್ದ ಮನೆಯನ್ನೇ ಸುಮಲತಾ ಬಾಡಿಗೆಗೆ ಪಡೆದಿದ್ದಾರೆ. ಜೆಡಿಎಸ್‌ ಮುಖಂಡ ಎಂ.ಜೆ.ಚಿಕ್ಕಣ್ಣ ಅವರ ಮನೆ ಕೊಳ್ಳಲು ನಿಖಿಲ್‌ ಮುಂದಾಗಿದ್ದಾರೆ. ಜೊತೆಗೆ ತೋಟ ಖರೀದಿಸುವ ಪ್ರಯತ್ನ ಸಾಗಿದ್ದು, ತಾಲ್ಲೂಕಿನ ಹುಳುವಾಡಿ ಗ್ರಾಮದಲ್ಲಿ 7 ಎಕರೆ ತೋಟ ಖರೀದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿಖಿಲ್‌, ಸುಮಲತಾ ವಿರುದ್ಧ ಪ್ರತಿಭಟನೆ ಇಂದು

ನಿಖಿಲ್‌ ಕುಮಾರಸ್ವಾಮಿ ಹಾಗೂ ಸುಮಲತಾ ಸ್ಪರ್ಧೆಯನ್ನು ವಿರೋಧಿಸಿ ಕರ್ನಾಟಕ ಜನಶಕ್ತಿ ಸಂಘಟನೆ ಕಾರ್ಯರ್ತರು ಬುಧವಾರ, ಕೆ.ವಿ.ಶಂಕರಗೌಡ ಪ್ರತಿಮೆ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಜಿಲ್ಲೆಯ ರೈತರ, ಸಾಮಾನ್ಯ ಜನರ ಬಗ್ಗೆ ಎಳ್ಳಷ್ಟೂ ಅರಿವಿಲ್ಲದ ನಿಖಿಲ್‌, ಸುಮಲತಾ ಸ್ಪರ್ಧೆ ಮಾಡುತ್ತಿರುವುದು ಜಿಲ್ಲೆಯ ದುರದೃಷ್ಟ. ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ನಿಖಿಲ್‌, ಸುಮಲತಾ ಇಬ್ಬರೂ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ. ಇವರ ಸ್ಪರ್ಧೆ ವಿರೋಧಿಸಿ ‘ಮಂಡ್ಯ ಸ್ವಾಭಿಮಾನಿ ದನಿಯ ಪ್ರತಿಭಟನೆ’ ಎಂದು ಹೋರಾಟ ನಡೆಸಲು ಮುಂದಾಗಿದ್ದಾರೆ.

‘ಮಂಡ್ಯ ಜನರದ್ದೇ ಅಂತಿಮ ತೀರ್ಮಾನ’

ಕೋಲಾರ: ‘ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಗ ನಿಖಿಲ್‌ ಸ್ಪರ್ಧೆ ವಿಚಾರವಾಗಿ ಜನರಲ್ಲಿ ದೊಡ್ಡ ಹವಾ ಸೃಷ್ಟಿಯಾಗಿಲ್ಲ. ಹೀಗಾಗಿ ಇದಕ್ಕೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ. ಸ್ಪರ್ಧೆ ಬಗ್ಗೆ ಕ್ಷೇತ್ರದ ಜನ ಅಂತಿಮ ತೀರ್ಮಾನ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್‌ ಸ್ಪರ್ಧೆಗೆ ಮುಂದಾಗಿರುವ ಬಗ್ಗೆ ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಚುನಾವಣೆಯಲ್ಲಿ ಪರ– ವಿರೋಧ ಸಹಜ. ಎಲ್ಲರೂ ಪರವಾಗಿರಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು’ ಎಂದರು.

‘ಚುನಾವಣೆ ಪ್ರಕ್ರಿಯೆ ಆರಂಭವಾದ ಮೇಲೆ ಬೇರೆ ರೀತಿಯ ವಾತಾವರಣ ಸೃಷ್ಟಿಯಾಗುತ್ತದೆ. ಚುನಾವಣೆ ಹತ್ತಿರ ಬಂದಾಗ ಸ್ಪರ್ಧೆ ಬಗ್ಗೆ ನೋಡೋಣ’ ಎಂದರು.

‘ಸುಮಲತಾಗೆ ಟಿಕೆಟ್‌ ಇಲ್ಲ’: ಈ ನಡುವೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ‘ಮಂಡ್ಯ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್‌ ಸಂಸದರೇ ಇರುವ ಕಾರಣ ಆ ಕ್ಷೇತ್ರವನ್ನು ಆ ಪಕ್ಷದವರಿಗೇ ಬಿಟ್ಟುಕೊಡಬೇಕಾಗುತ್ತದೆ. ಹಾಗಾಗಿ ಸುಮಲತಾ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸುವ ಪ್ರಶ್ನೆ ಉದ್ಭವಿಸದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

  • 17

    Happy
  • 1

    Amused
  • 2

    Sad
  • 0

    Frustrated
  • 1

    Angry

Comments:

0 comments

Write the first review for this !