ಬಂಡಾಯಗಾರರ ವಿರುದ್ಧ ಕ್ರಮಕ್ಕೆ ರಾಹುಲ್‌ ಸೂಚನೆ: ಡಿಸಿಎಂ

ಗುರುವಾರ , ಏಪ್ರಿಲ್ 25, 2019
21 °C
ಸುಮಲತಾ ಪರ ನಿಂತಿರುವ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ವಜಾಕ್ಕೆ ಒತ್ತಾಯ

ಬಂಡಾಯಗಾರರ ವಿರುದ್ಧ ಕ್ರಮಕ್ಕೆ ರಾಹುಲ್‌ ಸೂಚನೆ: ಡಿಸಿಎಂ

Published:
Updated:
Prajavani

ಮಂಡ್ಯ: ‘ಮೈತ್ರಿಧರ್ಮದಂತೆ ಕಾಂಗ್ರೆಸ್‌ ಮುಖಂಡರು ಕೆ.ನಿಖಿಲ್‌ ಗೆಲುವಿಗಾಗಿ ಶ್ರಮಿಸಬೇಕು. ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ಸೂಚನೆ ನೀಡಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಭಾನುವಾರ ಹೇಳಿದರು.

ಕಾಂಗ್ರೆಸ್– ಜೆಡಿಎಸ್ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕಗಳ ವತಿಯಿಂದ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್ ಪರ ದಲಿತರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ರಾಹುಲ್‌ಗಾಂಧಿ ಅವರು ಕೈಗೊಂಡಿರುವ ನಿರ್ಧಾರಕ್ಕೆ ಬದ್ಧರಾಗಿ ಕೆಲಸ ಮಾಡಬೇಕು. ಬಂಡಾಯ ಹೆಜ್ಜೆ ಇಟ್ಟರೆ ಅವರು ಯಾರೇ ಆಗಿರಲಿ, ಅವರನ್ನು ಕ್ಷಮಿಸುವುದಿಲ್ಲ. ಕೆಲವರು ತಮ್ಮ ವೈಯಕ್ತಿಕ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಹಿಂದೆ ಹೋಗಿರಬಹುದು. ಆದರೆ ಇಡೀ ಕಾಂಗ್ರೆಸ್‌ ಕಾರ್ಯಕರ್ತರು ನಿಖಿಲ್‌ ಪರ ಇದ್ದಾರೆ’ ಎಂದರು.

‘ಉಪ ಚುನಾವಣೆಯಲ್ಲಿ ಎಲ್‌.ಆರ್‌.ಶಿವರಾಮೇಗೌಡರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕೇವಲ ಮೂರು ತಿಂಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ತುಮಕೂರಿನಲ್ಲಿ ಯಾವ ಸಮುದಾಯವೂ ದೇವೇಗೌಡರಿಗೆ ವಿರುದ್ಧವಾಗಿ ಇಲ್ಲ. ಪಿ.ಮುದ್ದಹನುಮೇಗೌಡ ಅವರ ವಿರೋಧವಿಲ್ಲ. ಅವರು ಮಧುಗಿರಿ, ಕೊರಟಗೆರೆಯಲ್ಲಿ ಪ್ರಚಾರ ಮಾಡಿದ್ದಾರೆ. ನಮ್ಮ ಜೊತೆಯಲ್ಲೂ ಬರುವುದಾಗಿ ತಿಳಿಸಿದ್ದಾರೆ. ಬಿಜೆಪಿ ಶಾಸಕ ಮಧುಸ್ವಾಮಿ ಮತದಾರರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ, ಉದ್ವೇಗದಿಂದ ಹಲ್ಲೆ ಮಾಡಿರಬಹುದು’ ಎಂದರು.

ಎರಡನೇ ದರ್ಜೆಗೆ ದಲಿತರು: ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅವರು ‘ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜವನ್ನು ವಿಭಜನೆ ಮಾಡುವ ಮೂಲಕ ದಲಿತರನ್ನು ಎರಡನೇ ದರ್ಜೆಗೆ ತಳ್ಳುವ ಪ್ರಯತ್ನ ಮಾಡಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರವನ್ನು ಪಕ್ಷದ ಕಚೇರಿಯಲ್ಲಿ ಇಟ್ಟುಕೊಳ್ಳದ, ಅವರ ಮೂರ್ತಿ ಧ್ವಂಸಗೊಳಿಸುವ ಪಕ್ಷಕ್ಕೆ ಅಧಿಕಾರ ಕೊಡಬಾರದು. ಕೊಟ್ಟರೆ ನಮ್ಮಿಂದಲೇ ನಮ್ಮ ಅಂತ್ಯವಾಗುತ್ತದೆ. ಜಿಲ್ಲೆಯಲ್ಲಿರುವ 3.60 ಲಕ್ಷ ದಲಿತರ ಮತಗಳಲ್ಲಿ ಒಂದು ಮತವೂ ಬೇರೆಯವರಿಗೆ ಹೋಗದಂತೆ ಮೈತ್ರಿ ಅಭ್ಯರ್ಥಿಗೆ ಬೆಂಬಲಿಸಬೇಕು’ ಎಂದರು.

ವಜಾಕ್ಕೆ ಒತ್ತಾಯ: ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡುತ್ತಿರುವ ಮುಖಂಡರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಪಕ್ಷದಿಂದ ವಜಾ ಮಾಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು. ಪರಮೇಶ್ವರ ಪ್ರತಿಕ್ರಿಯಿಸಿ ‘ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದರು.

ಅಂಬೇಡ್ಕರ್‌ ಜಯಂತಿ, ಚರ್ಚ್‌ ಭೇಟಿ

ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಅಂಗವಾಗಿ ಭಾನುವಾರ ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಹಾಗು ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌  ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಬೇಡ್ಕರ್‌ ಭಾವಚಿತ್ರಕ್ಕೆ ಪ್ರತ್ಯೇಕವಾಗಿ ಮಾಲಾರ್ಪಣೆ ಮಾಡಿದರು. ನಂತರ ಸುಮಲತಾ ಸಾಡೆ ಸ್ಮಾರಕ ಚರ್ಚ್‌ಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಕ್ರೈಸ್ತರ ಬೆಂಬಲ ಕೋರಿದರು. ನಿಖಿಲ್‌ ತಾಯಿ, ಶಾಸಕಿ ಅನಿತಾ ಕುಮಾರಸ್ವಾಮಿ ಸೇಂಟ್‌ ಜಾನ್‌ ಚರ್ಚ್‌ಗೆ ತೆರಳಿ ಬೆಂಬಲ ಕೋರಿದರು.

ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಡಾ.ಯತೀಂದ್ರ, ಜಿ.ಟಿ.ದೇವೇಗೌಡರ ಪುತ್ರ ಹರೀಶ್‌ ದೇವೇಗೌಡ ನಿಖಿಲ್‌ ಪ್ರಚಾರಕ್ಕೆ ಸಾಥ್‌ ಕೊಟ್ಟರು. ಮದ್ದೂರು ತಾಲ್ಲೂಕು ಕೊಪ್ಪದಲ್ಲಿ ನಟ ದರ್ಶನ್‌ ಪ್ರಚಾರದ ವೇಳೆ ನೂಕು ನುಗ್ಗಲು ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠ ಪ್ರಹಾರ ನಡೆಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !