ಮಂಡ್ಯ: ಹಾಸ್ಟೆಲ್‌ ಮುಂದೆ ಕರು ಹಾಕಿದ ಹಸು!

ಬುಧವಾರ, ಜೂನ್ 19, 2019
23 °C
ಆರೈಕೆ ಇಲ್ಲದೆ ಜನ್ಮನೀಡಿದ ಕಾಮಧೇನು, ಭಾವುಕರಾದ ವಿದ್ಯಾರ್ಥಿಗಳು

ಮಂಡ್ಯ: ಹಾಸ್ಟೆಲ್‌ ಮುಂದೆ ಕರು ಹಾಕಿದ ಹಸು!

Published:
Updated:
Prajavani

ಮಂಡ್ಯ: ಅಪರಿಚಿತರು ಮೇಯಲು ಬಿಟ್ಟಿದ್ದ ಹಸುವೊಂದು ನಗರದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ ಮುಂದಿನ ಉದ್ಯಾನದಲ್ಲಿ ಭಾನುವಾರ ಕರು ಹಾಕಿತು. ಜನ್ಮ ನೀಡಿದ ನಂತರ ಹಸು ತನ್ನ ಕರುವನ್ನು ಆರೈಕೆ ಮಾಡುವುದನ್ನು ಕಂಡ ವಿದ್ಯಾರ್ಥಿಗಳ ಮನಸ್ಸು ತುಂಬಿ ಬಂದವು.

ಜಿಲ್ಲಾ ಪಂಚಾಯಿತಿ ಕಚೇರಿ ಪಕ್ಕದಲ್ಲಿ ಇರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ (ಯೂನಿಟ್‌ 1) ಮುಂಭಾಗ ಉದ್ಯಾನವಿದೆ. ಉದ್ಯಾನದೊಳಗೆ ಹಲವರು ಹಸುಗಳನ್ನು ಮೇಯಲು ಬಿಡುತ್ತಾರೆ. ಯಾರು ಹಸು ಬಿಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಬೇಕಂತಲೇ ಉದ್ಯಾನಕ್ಕೆ ಹಸು ಬಿಡುತ್ತಾರೆ. ಹಾಸ್ಟೆಲ್‌ ವಾರ್ಡನ್‌ ಕೂಡ ಹಸುಗಳ ಪ್ರವೇಶವನ್ನು ತಡೆಯಲು ಸಾಧ್ಯವಾಗಿಲ್ಲ. ಆದರೆ ಭಾನುವಾರ ಹಾಸ್ಟೆಲ್‌ ಮುಂದೆ ನಡೆದ ದೃಶ್ಯ ಕಂಡಾಗ ವಿದ್ಯಾರ್ಥಿಗಳ ಕಣ್ಣಾಲಿಗಳು ತುಂಬಿ ಬಂದವು.

ಸಾಮಾನ್ಯವಾಗಿ ಹಸು ಕರು ಹಾಕುವಾಗ ಮಾಲೀಕರು ಹಸುವಿನ ಆರೈಕೆ ಮಾಡಬೇಕು. ಆದರೆ ಯಾರೂ ಇಲ್ಲದ ಸನ್ನಿವೇಶದಲ್ಲಿ ಹಸು ಕರುವಿಗೆ ಜನ್ಮ ನೀಡಿತು. ಜನ್ಮ ನೀಡುವಾಗ ವಿದ್ಯಾರ್ಥಿಗಳು ಶಾಂತ ವಾತಾವರಣ ಕಾಯ್ದುಕೊಂಡಿದ್ದರು. ಕೆಲವರು ತಮ್ಮ ಮೊಬೈಲ್‌ ಫೋನ್‌ಗಳಿಂದ ಚಿತ್ರ ತೆಗೆದರು, ವಿಡಿಯೊ ಮಾಡಿಕೊಂಡರು. ಹಳ್ಳಿ ವಿದ್ಯಾರ್ಥಿಗಳಿಗೆ ಇದು ಸಾಮಾನ್ಯ ಸನ್ನಿವೇಶವಾಗಿತ್ತು. ಆದರೆ ಕೆಲ ವಿದ್ಯಾರ್ಥಿಗಳಿಗೆ ಇದು ವಿಶೇಷವಾಗಿದ್ದು ಅವರು ಬಹಳ ಭಾವುಕರಾದರು.

‘ನಮ್ಮ ಮನೆಯಲ್ಲೂ ಹಸು ಕರು ಹಾಕಿದೆ. ಆದರೆ ನಮ್ಮ ತಂದೆ ಅದಕ್ಕೆ ಅಪಾರ ಆರೈಕೆ ಮಾಡುತ್ತಿದ್ದರು. ಔಷಧಿ ಕೊಡಿಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಪಶುವೈದ್ಯರನ್ನು ಕರೆಸಿ ಕರು ಹಾಕಿಸುತ್ತಿದ್ದರು. ಆದರೆ ಇಲ್ಲಿ ಯಾರ ಸಹಾಯವೂ ಇಲ್ಲದೇ, ಮರದ ನೆರಳಲ್ಲಿ ಹಸು ಕರುವಿಗೆ ಜನ್ಮನೀಡಿದ ದೃಶ್ಯ ನೋಡಿ ಮನಸ್ಸು ಅರಳಿತು’ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದರು.

ಕರು ಮಾರಿದ ಮಾಲೀಕ
ಕರು ಹುಟ್ಟಿ ಐದಾರು ಗಂಟೆಯ ನಂತರ ಹಸುವಿನ ಮಾಲೀಕ ಹಾಸ್ಟೆಲ್‌ ಪ್ರವೇಶ ಮಾಡಿದ. ಆತ ಕದ್ದು ಮುಚ್ಚಿ ಹಸುವನ್ನು ಉದ್ಯಾನಕ್ಕೆ ಮೇಯಲು ಬಿಡುತ್ತಿದ್ದ ವಿಚಾರ ವಿದ್ಯಾರ್ಥಿಗಳಿಗೆ ತಿಳಿಯಿತು. ಹೋರಿ ಕರು ಹುಟ್ಟಿದೆ ಎಂದು ತಿಳಿದದ್ದೇ ತಡ ಆತ ಅತೃಪ್ತಿ ಹೊರಹಾಕಿದ. ತಕ್ಷಣ ಕಸಾಯಿಖಾನೆಯವರನ್ನು ಆಹ್ವಾನಿಸಿ ಸ್ಥಳದಲ್ಲೇ ಆ ಪುಟಾಣಿ ಕರುವನ್ನು ಮಾರಿಬಿಟ್ಟ. ಆ ಸುಂದರ ಕರುವನ್ನು ಚೀಲದಲ್ಲಿ ನಿರ್ಜೀವ ವಸ್ತುವಿನಂತೆ ತುಂಬಿಕೊಂಡು ಹೋದರು. ಇದು ವಿದ್ಯಾರ್ಥಿಗಳಿಗೆ ಬೇಸರ ತರಿಸಿತು.

ಹೆಣ್ಣು ಮಗು ಹೆತ್ತರೆ ಮನುಷ್ಯರು ಅತೃಪ್ತಿ ಹೊರಹಾಕುತ್ತಾರೆ. ಆದರೆ ಹಸು, ಗಂಡು ಕರು ಹಾಕಿದರೆ ಕಸಾಯಿಖಾನೆಗೆ ಮಾರುತ್ತಾರೆ ಎಂದು ವಿದ್ಯಾರ್ಥಿಗಳು ಚರ್ಚಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !