ಮಂಗಳವಾರ, ನವೆಂಬರ್ 19, 2019
27 °C
ಕುರುಬರ ಸಂಘದಿಂದ ಪ್ರತಿಭಾ ಪುರಸ್ಕಾರ

ಹಣ, ಜಾತಿ, ದ್ವೇಷಕ್ಕೆ ರಾಜಕಾರಣ ಬೇಡ : ಸಿದ್ದರಾಮಯ್ಯ ಅಭಿಮತ

Published:
Updated:
Prajavani

ಮಂಡ್ಯ: ‘ಜನರ ಪ್ರೀತಿ ಮತ್ತು ಅಭಿಮಾನವನ್ನು ಸಂಪಾದಿಸಿದವನು ಮಾತ್ರ ನಾಯಕನಾಗಬಲ್ಲ. ಕೇವಲ ಹಣಕ್ಕಾಗಿ, ಜಾತಿಗಾಗಿ, ದ್ವೇಷಕ್ಕಾಗಿ, ಇನ್ನೊಬ್ಬನನ್ನು ಮುಗಿಸುವ ಕಾರಣಕ್ಕಾಗಿ ರಾಜಕಾರಣ ಮಾಡಬಾರದು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಕನಕಭವನ ಆವರಣದಲ್ಲಿ ಭಾನುವಾರ ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸ್ಥಳೀಯ ಸಂಸ್ಥೆಗಳ ನೂತನ ಸದಸ್ಯರಿಗೆ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ರಾಜಕೀಯಕ್ಕೆ ಬನ್ನಿ ಎಂದು ಯಾರೂ ನಮಗೆ ಆಹ್ವಾನ ನೀಡಿಲ್ಲ. ನಾವೇ ಜನರ ಸೇವೆ ಮಾಡಲು ಬದ್ಧ ಎಂಬುದಾಗಿ ರಾಜಕಾರಣಕ್ಕೆ ಬರಬೇಕು. ಕಡೆಯವರೆಗೂ ಬದ್ಧರಾಗಿಯೇ ಇರಬೇಕು. ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಗುಣವನ್ನು ರಾಜಕಾರಣಿ ಬೆಳೆಸಿಕೊಳ್ಳಬೇಕು. ನನಗೆ ಎಲ್ಲಾ ಪಕ್ಷಗಳಲ್ಲಿ, ಎಲ್ಲಾ ಜಾತಿಗಳಲ್ಲೂ ಉತ್ತಮ ಸ್ನೇಹಿತರು ಇದ್ದಾರೆ. ನಾನು ರಾಜಕೀಯವಾಗಿ ವಿರೋಧ ಪಕ್ಷಗಳ ಮುಖಂಡರನ್ನು ವಿರೋಧಿಸುತ್ತೇನೆ. ಆದರೆ ವೈಯಕ್ತಿಕವಾಗಿ ಅವರ ವಿರುದ್ಧ ನನಗೆ ಯಾವುದೇ ದ್ವೇಷ ಇಲ್ಲ’ ಎಂದು ಹೇಳಿದರು.

‘ಪ್ರತಿಭೆಗೆ ಜಾತಿ ಸಂಕೋಲೆಯಾಗಬಾರದು. ಪ್ರತಿಭಾವಂತ ಮಕ್ಕಳಿಗೆ ಯಾವ ಜಾತಿಯೂ ಇರುವುದಿಲ್ಲ. ಅಬ್ದುಲ್‌ ಕಲಾಂ ಹಾಗೂ ಸರ್‌.ಎಂ.ವಿಶ್ವೇಶ್ವರಯ್ಯ ಅವರಿಗೆ ಜಾತಿಯ ಬೇಲಿ ಇಲ್ಲ. ಕುವೆಂಪು ಹೇಳಿರುವಂತೆ ನಾವು ಹುಟ್ಟಿನಿಂದ ವಿಶ್ವಮಾನವರಾಗಿದ್ದೇವೆ. ಆದರೆ ಬೆಳೆಯುತ್ತಾ ಅಲ್ಪ ಮಾನವರಾಗುತ್ತಿದ್ದೇವೆ. ಬೆಳೆಯುತ್ತಲೂ ನಾವು ವಿಶ್ವಮಾನವರಾಗಲು ಪ್ರಯತ್ನಿಸಬೇಕು. ಜಾತಿ ಧರ್ಮಗಳನ್ನು ದೇವರು ಮಾಡಿಲ್ಲ. ಮನುಷ್ಯರೇ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

‘ಬುದ್ಧಿವಂತಿಕೆ ಹಾಗೂ ಜ್ಞಾನದಿಂದ ಪ್ರತಿಭೆಯನ್ನು ಸಂಪಾದನೆ ಮಾಡಿಕೊಳ್ಳಬಹುದು. ಮಕ್ಕಳನ್ನು ಉತ್ತಮ ಪರಿಸರದಲ್ಲಿ ಬೆಳೆಸಿದರೆ, ಉತ್ತಮ ಓದಿನ ವಾತಾವರಣ ನೀಡಿದರೆ ಎಲ್ಲರೂ ಪ್ರತಿಭಾವಂತರಾಗಿ ಬೆಳೆಯುತ್ತಾರೆ. ನಾನು 1–4ನೇತರಗತಿವರೆಗೆ ಶಾಲೆಯಲ್ಲಿ ಓದಲೇ ಇಲ್ಲ. ನೇರವಾಗಿ 5ನೇ ತರಗತಿಗೆ ಸೇರಿದೆ. ಮುಂದೆ ವಕೀಲನಾದೆ, ರಾಜ್ಯದ ಮುಖ್ಯಮಂತ್ರಿಯಾದೆ’ ಎಂದು ಹೇಳಿದರು.

‘ನಾನು 13 ಬಾರಿ ರಾಜ್ಯದ ಹಣಕಾಸು ಸಚಿವನಾಗಿ ಬಜೆಟ್‌ ಮಂಡಿಸಿದ್ದೇನೆ. ನಾನು ಮೊದಲ ಬಾರಿಗೆ ಹಣಕಾಸು ಸಚಿವನಾಗಿದ್ದಾಗ ಕೆಲವರು ನನ್ನ ವಿರುದ್ಧ ಟೀಕೆ ಮಾಡಿದರು. ಕುರುಬ ಜನಾಂಗದ ಸಿದ್ದರಾಮಯ್ಯನಿಗೆ 100 ಕುರಿ ಎಣಿಸಲು ಬರುವುದಿಲ್ಲ ಎಂದರು. ಆದರೆ ನಾನು ಅದನ್ನೇ ಸವಾಲಾಗಿ ಸ್ವೀಕರಿಸಿದೆ. ಗುರಿ, ಶ್ರದ್ಧೆ, ಛಲ ಇದ್ದರೆ ಎತ್ತರಕ್ಕೆ ಬೆಳೆಯಬಹುದು’ ಎಂದು ಹೇಳಿದರು.

ಕಾಗಿನೆಲೆ ಮಹಾಸಂಸ್ಥಾನ ಮಠ, ಮೈಸೂರು ಶಾಖೆ ಪೀಠಾಧಿಪತಿ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ ‘ಸ್ಪರ್ಧಾ ಜಗತ್ತಿನಲ್ಲಿ ಮಕ್ಕಳಿಗೆ ಎಲ್ಲಾ ಕ್ಷೇತ್ರಗಳ ಅರಿವು ಅತ್ಯಂತ ಮುಖ್ಯವಾದುದು. ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ ಶಕ್ತಿಯ ಸಹಾಯದೊಂದಿಗೆ ಸಮಾಜದಲ್ಲಿ ಮುಂದುವರಿಯಬೇಕು. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಉನ್ನತ ಸಾಧನೆಯೊಂದಿಗೆ ಮುನ್ನಡೆದರೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಬಹುದು’ ಎಂದು ಹೇಳಿದರು.

ಸರ್ವಧರ್ಮ ಸಾಮರಸ್ಯದ ಪ್ರತೀಕವಾಗಿ ಭಗವದ್ಗೀತೆ, ಖುರಾನ್‌, ಬೈಬಲ್‌ ಗ್ರಂಥಗಳನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿದ 41 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ 10 ಸದಸ್ಯರನ್ನು ಸನ್ಮಾನಿಸಲಾಯಿತು.

ಕಾಂಗ್ರೆಸ್‌ ಮುಖಂಡರಾದ ರಮೇಶ್‌ಬಾಬು ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್‌, ಎಂ.ಎಸ್‌.ಆತ್ಮಾನಂದ, ಮಲ್ಲಾಜಮ್ಮ, ಡಾ.ಬಿ.ಎಸ್.ಶಿವಣ್ಣ, ಗಣಿಗ ಪಿ ರವಿಕುಮಾರ್‌ಗೌಡ, ಕುರುಬರ ಸಂಘದ ಪದಾಧಿಕಾರಿಗಳಾದ ಕೆಂ.ಎಂ.ರಾಮಚಂದ್ರಪ್ಪ, ದೊಡ್ಡಯ್ಯ ಹಾಜರಿದ್ದರು.

‘ಕುರುಬರಿಗೆ ನಾನು ಏನೂ ಮಾಡಿಲ್ಲ’

‘ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ವರ್ಗದ ಜನರಿಗೂ ಕೊಡುಗೆ ನೀಡಿದ್ದೇನೆ. ಬಡವರು, ರೈತರಿಗೆ ಯಾವುದೇ ಜಾತಿ ಇರುವುದಿಲ್ಲ. ಸಮಾಜದ ಎಲ್ಲಾ ವರ್ಗದ ಜನರನ್ನು ಉದ್ದೇಶವಾಗಿಟ್ಟುಕೊಂಡು ಕಾರ್ಯಕ್ರಮ ರೂಪಿಸಿದ್ದೇನೆ. ಆದರೂ 2018ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸೋಲು ಕಾಣಬೇಕಾಯಿತು. ಜನರು ನನ್ನ ಕಾರ್ಯಕ್ರಮಗಳನ್ನು ಮರತೇಬಿಟ್ಟರು. ಅಪಪ್ರಚಾರವೇ ಅದಕ್ಕೆ ಮುಖ್ಯ ಕಾರಣ. ಕುರುಬರಿಗೆ ಮಾತ್ರ ಕೊಡುಗೆ ನೀಡಿದ್ದಾರೆ ಎಂದು ಪ್ರಚಾರ ಮಾಡಿದರು. ನಿಜವಾಗಿ ನಾನು ಕುರುಬ ಸಮಾಜಕ್ಕೆ ಏನೂ ಮಾಡಲಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಒಕ್ಕಲಿಗ, ಲಿಂಗಾಯತರ ವಿರೋಧಿಯಲ್ಲ

ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಮಾತನಾಡಿ ‘ಸಿದ್ದರಾಮಯ್ಯ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಎಲ್ಲಾ ಸಮಾಜದ ಜನರೂ ಅವರನ್ನು ಪ್ರೀತಿಸುತ್ತಾರೆ. ಅವರು ಮುಖ್ಯಮಂತ್ರಿಯಾಗಿ ಅಪಾರ ಸೇವೆ ಮಾಡಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಕಾರ್ಯಕ್ರಮಗಳಿಂದಲೇ ಕಳೆದ 14 ತಿಂಗಳ ಸಮ್ಮೀಶ್ರ ಸರ್ಕಾರ ನಡೆಸಲಾಯಿತು. ಅವರು ಯಾವುದೇ ಜಾತಿಯ ವಿರೋಧಿಯಲ್ಲ. ಅವರನ್ನು ಲಿಂಗಾಯತ, ಒಕ್ಕಲಿಗ ವಿರೋಧಿ ಎಂದು ಹಣಪಟ್ಟಿ ಕಟ್ಟಬೇಡಿ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)