ಗುರುವಾರ , ಅಕ್ಟೋಬರ್ 17, 2019
27 °C

ನನಗೆ ಸ್ಪಂದಿಸಿದ್ದ ಪ್ರಧಾನಿ ನಿಮಗೇಕೆ ಸ್ಪಂದಿಸುತ್ತಿಲ್ಲ? ಕುಮಾರಸ್ವಾಮಿ ಪ್ರಶ್ನೆ

Published:
Updated:
Prajavani

ಮಂಡ್ಯ: ‘ಕರ್ನಾಟಕದ ಖಜಾನೆ ಲಕ್ಷ್ಮಿ ಇದ್ದ ಹಾಗೆ, ಅದಕ್ಕೆ ಎಂದೂ ದರಿದ್ರ ಬಂದಿಲ್ಲ. ನಾನು ರೈತರ ಸಾಲ ಮನ್ನಾ ಮಾಡುವಾಗ ಇಲಾಖಾವಾರು ಹಂಚಿಕೆ ಮಾಡಿದ್ದ ಅನುದಾನ ಮುಟ್ಟಿಲ್ಲ. ಖಜಾನೆಯಲ್ಲಿ ಇನ್ನೂ ಹಣ ಇದೆ, ಎಷ್ಟಿದೆ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಉತ್ತರಿಸಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ಹೇಳಿದರು.

‘ಯಡಿಯೂರಪ್ಪ ಅವರ ಮಗನ ಖಜಾನೆ ಖಾಲಿ ಆಗಿರಬಹುದು. ಆದರೆ ಸರ್ಕಾರದ ಹಣ ಖಾಲಿಯಾಗಲು ಸಾಧ್ಯವಿಲ್ಲ. ರಾಜ್ಯದ ಜನರು ತೆರಿಗೆಯ ಮೂಲಕ ಖಜಾನೆ ತುಂಬಿಸಿದ್ದಾರೆ. ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಹಣ ನೀಡಬೇಕು ಎಂಬುದು ಒಂದೆಡೆ ಇರಲಿ, ರಾಜ್ಯ ಸರ್ಕಾರದ ಜವಾಬ್ದಾರಿ ಏನು? ಹಣ ಕೊಡುವ ಹೃದಯ ವೈಶಾಲ್ಯತೆ ನಿಮಗೆ ಇಲ್ಲವಾಗಿದೆ. ಸಚಿವ ಸಂಪುಟದ ಅನುಮೋದನೆ ಮೂಲಕ ತಕ್ಷಣವೇ ₹ 10 ಸಾವಿರ ಕೋಟಿ ಹಣ ಬಿಡುಗಡೆ ಮಾಡಬಹುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ... ಬೊಕ್ಕಸ ಖಾಲಿಯಾಗಿರುವುದು ಸರ್ಕಾರದ್ದೋ, ಬಿಎಸ್‌ವೈ ಕುಟುಂಬದ್ದೋ: ಕುಮಾರಸ್ವಾಮಿ

‘ಎಂದೂ ಕಂಡರಿಯದ ಪ್ರವಾಹ ರಾಜ್ಯದಲ್ಲಿ ಬಂದಿದೆ. ಇಂತಹ ಸಂದರ್ಭದಲ್ಲಿ ಎನ್‌ಡಿಆರ್‌ಎಫ್‌ ನಿಯಮಾವಳಿಗಳಿಗೆ ಕಾಯುತ್ತಾ ಕುಳಿತರೆ ಸಂತ್ರಸ್ತರು ಉಳಿಯುವುದಿಲ್ಲ. ಕೇಂದ್ರದ ಅನುದಾನ ಬಾರದಿರುವುದಕ್ಕೆ ಬಿಜೆಪಿ ಮುಖಂಡರೇ ಬೊಬ್ಬೆ ಹೊಡೆಯುತ್ತಿದ್ದಾರೆ. ಉಪ ಮುಖ್ಯಮಂತ್ರಿಯೊಬ್ಬರು, ಎಲ್ಲಿಂದ ಹಣ ತರುವುದು ಎಂದು ಹೇಳಿಕೆ ಕೊಟ್ಟಿದ್ದಾರೆ. ಕಂದಾಯ ಸಚಿವರಿಗೆ ಸಾಮಾನ್ಯ ಜ್ಞಾನ ಇಲ್ಲ, ಇಲಾಖೆಯ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಇದನ್ನೂ ಓದಿ... ಪ್ರವಾಹ ನಷ್ಟದ ಅಂದಾಜು: ರಾಜ್ಯದ ವರದಿ ತಿರಸ್ಕರಿಸಿದ ಕೇಂದ್ರ

ನನಗೆ ಸ್ಪಂದಿಸಿದ್ದ ಪ್ರಧಾನಿ: ‘ನಾನು ಮುಖ್ಯಮಂತ್ರಿಯಾಗಿದ್ದಾಗ ಕೊಡಗಿನಲ್ಲಿ ಪ್ರವಾಹ ಬಂದಿತ್ತು. ಮಡಿಕೇರಿಯಲ್ಲಿ 2018, ಆ.19ರಂದು ಸಭೆ ನಡೆಸುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿದ್ದರು. ನಿಮ್ಮ ಜೊತೆ ನಾವಿದ್ದೇವೆ, ಸಕಲ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ನಂತರ ಟ್ವೀಟ್‌ ಕೂಡ ಮಾಡಿದ್ದರು. ತಕ್ಷಣ ₹ 580 ಕೋಟಿ ಹಣವನ್ನೂ ಬಿಡುಗಡೆ ಮಾಡಿದ್ದರು. ಈಗ ನಿಮಗೇಕೆ ಸಹಾಯ ಮಾಡುತ್ತಿಲ್ಲ, ಮುಖ್ಯಮಂತ್ರಿಗೆ ಪ್ರಧಾನಿ ಭೇಟಿಯೇ ಸಾಧ್ಯವಾಗುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದರು.

‘ಶೇ 75ರಷ್ಟು ಹಾನಿಯಾದ ಮನೆಗಳಿಗೆ ನಾನು ತಕ್ಷಣ ₹ 1 ಲಕ್ಷ ಪರಿಹಾರ ನೀಡಿದ್ದೆ. ನೀರು ನುಗ್ಗಿ ವಸ್ತುಗಳು ಹಾನಿಯಾಗಿದ್ದ ಮನೆಗಳಿಗೆ ₹ 50 ಸಾವಿರ ನೀಡಿದ್ದೆ. ತಲಾ ₹ 10 ಲಕ್ಷ ವೆಚ್ಚದಲ್ಲಿ 900 ಮನೆ ನಿರ್ಮಾಣ, ಸಂತ್ರಸ್ತರಿಗೆ 10 ತಿಂಗಳು ಬಾಡಿಗೆ ಹಣವನ್ನೂ ಕೊಡಲಾಯಿತು’ ಎಂದರು.

ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಕೇಂದ್ರಸರ್ಕಾರದಿಂದ ಬಿಡುಗಡೆಯಾಗದ ಪರಿಹಾರ: ಅಸಹಾಯಕರಾದ ಸಿ.ಎಂ

ಸಿದ್ದರಾಮಯ್ಯ ತಪ್ಪು ಮಾಡಿದ್ದರು: ‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆಗಿದ್ದ ತಪ್ಪುಗಳನ್ನು ಸರಿಪಡಿಸಿದ್ದೇನೆ. ಆರ್ಥಿಕ ತಜ್ಞರೆನಿಸಿಕೊಂಡಿರುವ ಸಿದ್ದರಾಮಯ್ಯ ಬಜೆಟ್‌ನ ರೆವಿನ್ಯೂ ಖಾತೆಯ ಬದಲಾಗಿ ಮೂಲ (ಕ್ಯಾಪಿಟಲ್‌) ಖಾತೆಯಿಂದ ಖರ್ಚು–ವೆಚ್ಚ ತೋರಿಸಿದ್ದರು. ಅದನ್ನೆಲ್ಲಾ ಸರಿ ಮಾಡಿದೆ, ಅವರು ಮನ್ನಾ ಮಾಡಿದ್ದ ₹ 4 ಸಾವಿರ ಕೋಟಿ ಸಾಲಕ್ಕೂ ಹಣ ಹೊಂದಿಸಿದೆ’ ಎಂದರು.

‘ಸದನದಲ್ಲಿ ಅನುಮೋದನೆ ನೀಡಿದ ಯೋಜನೆಗಳನ್ನು ರದ್ದು ಮಾಡಲಾಗಿದೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಸದನದ ನಿರ್ಧಾರಕ್ಕೆ ಅಗೌರವ ತೋರಿಸಿದ್ದಾರೆ. ಶಿಕಾರಿಪುರ ಕ್ಷೇತ್ರಕ್ಕೆ ನಾನು ಮೀಸಲಿಟ್ಟಿದ್ದ ₹ 250 ಕೋಟಿ ಹಣವನ್ನು ಮುಖ್ಯಮಂತ್ರಿ ₹ 850 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ. ಎಲ್ಲವನ್ನೂ ಮುಂಬರುವ ಅಧಿವೇಶನದಲ್ಲಿ ಬಿಚ್ಚಿಡುತ್ತೇನೆ’ ಎಂದರು.

ರಾಜೀನಾಮೆ ಕೇಳುವುದಿಲ್ಲ: ‘ಕಾಂಗ್ರೆಸ್‌ ಮುಖಂಡರ ರೀತಿಯಲ್ಲಿ ನಾನು ಯಡಿಯೂರಪ್ಪ ಅವರ ರಾಜೀನಾಮೆ ಕೇಳುವುದಿಲ್ಲ. ಬಹಳ ಕಷ್ಟಪಟ್ಟು ಮುಖ್ಯಮಂತ್ರಿಯಾಗಿದ್ದಾರೆ. ಅವರು ಅಧಿಕಾರದಲ್ಲಿ ಮುಂದುವರಿಯಲಿ. ಆದರೆ ನೆರೆ ಸಂತ್ರಸ್ತರನ್ನು ಉಳಿಸುವ ಕೆಲಸ ಮಾಡಲಿ’ ಎಂದರು.

ಪ್ರಧಾನಿ ಕಾಲು ಹಿಡಿಯಿರಿ
‘ಪ್ರಧಾನಮಂತ್ರಿಯ ಕಾಲು ಹಿಡಿದು ನೆರೆ ಪರಿಹಾರ ತೆಗೆದುಕೊಂಡು ಬನ್ನಿ, ಅವರ ವಿಶ್ವಾಸ ಗಳಿಸುವ ಕೆಲಸ ಮಾಡಿ. ನಿಮ್ಮ ಬಗ್ಗೆ ಅವರಿಗೆ ವಿಶ್ವಾಸದ ಕೊರತೆಯಾಗಿದ್ದು ನಿಮ್ಮ ನಡವಳಿಕೆಗಳ ಬಗ್ಗೆ ವರದಿ ತರಿಸಿಕೊಳ್ಳುತ್ತಿದ್ದಾರೆ. ನಿಮ್ಮ ನಡುವೆ ಇರುವ ಹುಳುಕುಗಳನ್ನು ಸರಿಪಡಿಸಿಕೊಳ್ಳಿ’ ಎಂದರು.

ಕಂದಕ ಸೃಷ್ಟಿಯಾಗಿತ್ತು...
‘ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಹಾಗೂ ಪತ್ರಕರ್ತರ ನಡುವೆ ಒಂದು ಕಂದಕ ಸೃಷ್ಟಿಯಾಗಿತ್ತು, ಅದು ಯಾವ ಕಾರಣಕ್ಕೆ ಎಂಬುದು ಗೊತ್ತಿಲ್ಲ. ಮಾಧ್ಯಮದವರಿಗೆ ನಾನು ಕೊಡುವ ಗೌರವವನ್ನು ರಾಜ್ಯದ ಯಾವ ರಾಜಕಾರಣಿಯೂ ಕೊಟ್ಟಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

‘ನಾನು ಪದವಿಯಲ್ಲಿದ್ದಾಗ ಪತ್ರಿಕಾಗೋಷ್ಠಿಯನ್ನೇ ಮಾಡಲಿಲ್ಲ. ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ. ಈಚೆಗೆ ನಾನು ಹೊರಗೇ ಬಂದಿರಲಿಲ್ಲ, ಬರೀ ಟ್ವೀಟ್‌ ಮಾಡುತ್ತಿದ್ದೆ. ಆದರೆ ನೆರೆ ಸಂತ್ರಸ್ತರು ಸಂಕಷ್ಟದಲ್ಲಿದ್ದಾಗ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ’ ಎಂದರು.

ಇದನ್ನೂ ಓದಿ... ನೆರೆ ಹಾನಿ ಅಂದಾಜು ವಾಪಸ್ ರಾಜ್ಯದ ಇತಿಹಾಸದಲ್ಲೇ ಇದು ಮೊದಲು: ದೇವೇಗೌಡ

Post Comments (+)