ಗುರುವಾರ , ನವೆಂಬರ್ 14, 2019
18 °C
ಕೃಷಿ ಉಪಕರಣ ಮಾರಾಟಗಾರರಿಗೆ ಕಾರ್ಯಗಾರ; ಜಿಲ್ಲಾಧಿಕಾರಿ ವೆಂಕಟೇಶ್‌ ಸಲಹೆ

ನಿಷೇಧಿತ ಕೀಟನಾಶಕ, ಕಳಪೆ ಪರಿಕರ ಮಾರದಿರಿ

Published:
Updated:
Prajavani

ಮಂಡ್ಯ: ‘ನಿಷೇಧಿತ ಕೃಷಿ ಕೀಟನಾಶಕ, ರಾಸಾಯನಿಕ ಗೊಬ್ಬರ, ಕಳಪೆ ಕೃಷಿ ಪರಿಕರಗಳನ್ನು ರೈತರಿಗೆ ಮಾರಾಟ ಮಾಡಬಾರದು. ಲಾಭದಾಸೆಗೆ ಮಾರಾಟಗಾರರು ರೈತರಿಗೆ ಮೋಸ ಮಾಡಬಾರದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಮಂಗಳವಾರ ಕೃಷಿ ಪರಿಕರಗಳ ಮಾರಾಟಗಾರರಿಗೆ ಆಯೋಜಿಸಿದ್ದ ‘ರಸ ಗೊಬ್ಬರ, ಬಿತ್ತನೆ ಬೀಜ ಮತ್ತು ಕೀಟನಾಶಕ ಕಾಯ್ದೆ ಹಾಗೂ ನಿಯಮಗಳ ಪಾಲನೆ' ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಕಳಪೆ ಕೀಟನಾಶಕ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಕೃಷಿಯ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ. ಅನಧಿಕೃತ ಕಂಪನಿಗಳ ಮಾತು ಕೇಳಿ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಮುಂದಾಗುತ್ತಾರೆ. ಇಂತಹ ಚಟುವಟಿಕೆಗಳಿಂದ ಮಾರಾಟಗಾರರು ದೂರ ಇರಬೇಕು. ರೈತರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳಬೇಕು. ರೈತರು ಕೃಷಿ ವಿಜ್ಞಾನಿಗಳ ಮಾತಿಗಿಂತ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಸಗಟು ವ್ಯಾಪಾರಸ್ಥರ ಮಾತಿಗೆ ಮಹತ್ವ ನೀಡುತ್ತಾರೆ. ಹೀಗಾಗಿ ರೈತರಿಗೆ ಅನ್ಯಾಯ ಮಾಡಬಾರದು’ ಎಂದರು.

‘ಕೆಲವು ಸಗಟು ಮಾರಾಟಗಾರರು ಹಣದ ಆಸೆಗೆ ಬಿದ್ದು, ಸರ್ಕಾರದಿಂದ ನಿಷೇಧಿಸಲ್ಪಟ್ಟ ಕೃಷಿ ರಾಸಾಯನಿಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಇಂತಹ ಕಳಪೆ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಹೀಗಾಗಿ ಉತ್ತಮ ಗುಣಮಟ್ಟದ ವಸ್ತುಗಳನ್ನೇ ಮಾರಾಟ ಮಾಡಬೇಕು. ರೈತರು ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸದೇ ಭೂಮಿಯ ಆರೋಗ್ಯ ಕಾಪಾಡಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕ್ಯಾನ್ಸರ್, ಸಕ್ಕರೆ ಖಾಯಿಲೆ, ಹೃದ್ರೋಗ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ವರೋಗಗಳಿಗೆ ಆಹಾರ ಪದಾರ್ಥಗಳ ಗುಣಮಟ್ಟದ ಕೊರತೆಯೇ ಕಾರಣವಾಗಿದೆ. ಬದಲಾದ ಆಹಾರ ಕ್ರಮಗಳೇ ರೋಗಗಳ ಮೂಲವಾಗಿವೆ. ರೈತರು ಗುಣಮಟ್ಟದ ಆಹಾರ ಪದಾರ್ಥಗಳನ್ನು ಬೆಳೆಯಲು ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರ, ಕೀಟನಾಶಕ ಹೆಚ್ಚಾಗಿ ಬಳಸಬಾರದು’ ಎಂದು ಸಲಹೆ ನೀಡಿದರು.

‘ಸಿರಿಧಾನ್ಯ, ಸಾವಯವ ಆಹಾರ ಬಳಕೆಯಿಂದ ಆರೋಗ್ಯ ಉತ್ತಮವಾಗುತ್ತದೆ. ಆರೋಗ್ಯ ಭಾಗ್ಯ ಬಲು ಮುಖ್ಯವಾದುದು. ಗುಣಮಟ್ಟದ ಆಹಾರ ಸೇವನೆಯಿಂದ ಮನಷ್ಯನ ಆರೋಗ್ಯವನ್ನು ಸಮತೋಲನದಲ್ಲಿ ಇರುತ್ತದೆ’ ಎಂದರು.

ಕೃಷಿ ಇಲಾಖೆ ಅಧಿಕಾರಿ ರಾಮಕೃಷ್ಣ ಮಾತನಾಡಿ ‘ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಬೇಕು ಎಂದು ರೈತರಲ್ಲಿ ಅರಿವು ಮೂಡಿಸಬೇಕು. ಕೃಷಿ ಇಲಾಖೆಯ ಕಾರ್ಯಕ್ರಮಗಳೊಂದಿಗೆ ಮಾರಾಟಗಾರರು ಸ್ಪಂದಿಸಬೇಕು. ಅನ್ಯ ದೇಶಗಳಿಂದ ಎಷ್ಟೋ ಕೃಷಿ ಪರಿಕರಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಅದನ್ನೆಲ್ಲ ಉತ್ಪಾದನೆ ಮಾಡಿಕೊಳ್ಳಬಹುದು. ಅಂತಹ ಯೋಜನೆಗಳಿಗೆ ಮಾರಾಟಗಾರರು ಸಹಕಾರ ನೀಡಬೇಕು’ ಎಂದರು.

‘ರೈತರಿಗೆ ಗುಣಮಟ್ಟದ ಪರಿಕರಗಳನ್ನು ವಿತರಿಸಲು ಸರ್ಕಾರದಿಂದ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಈ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಮಾರಾಟಗಾರರು ಮಾಡಬೇಕು. ಗುಣಮಟ್ಟದ ಬಿತ್ತನೆ ಬೀಜ ಮಾರಾಟ ಮಾಡಬೇಕು. ಕಳಪೆ ಬಿತ್ತನೆ ಬೀಜ ನೀಡಿದರೆ ರೈತರು ನಷ್ಟ ಅನುಭವಿಸುತ್ತಾರೆ. ಕಷ್ಟಪಟ್ಟು ಬೆಳೆದ ಬೆಳೆ ಅವರ ಕೈ ಸೇರುವುದಿಲ್ಲ’ ಎಂದರು.

ಕಾರ್ಯಗಾರದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ಉಪ ನಿರ್ದೇಶಕರಾದ ಡಾ.ಕೆ.ಮಾಲತಿ, ಮಮತಾ, ಪುಷ್ಪ, ಸುಷ್ಮಾ ಇದ್ದರು.

ಪ್ರತಿಕ್ರಿಯಿಸಿ (+)