ಮಂಗಳವಾರ, ನವೆಂಬರ್ 19, 2019
28 °C
ಬ್ಯಾಂಕ್‌ ಆಫ್‌ ಬರೋಡ; ರೈತರ ದಿನಾಚರಣೆ ಹಾಗೂ ಕೃಷಿ ಪಾಕ್ಷಿಕ ಸಮಾರೋಪ

ಬ್ಯಾಂಕ್‌ಗಳಲ್ಲಿ ಕನ್ನಡ ಭಾಷಾ ಬಳಕೆ ಹೆಚ್ಚಲಿ: ಸುಮಲತಾ

Published:
Updated:
Prajavani

ಮಂಡ್ಯ: ‘ಬ್ಯಾಂಕ್‌ಗಳಲ್ಲಿ ಅನಕ್ಷರಸ್ಥರು, ಬಡ ರೈತರು ವಹಿವಾಟು ನಡೆಸಲು ಅನುಕೂಲಕರ ವಾತಾವರಣ ಇರಬೇಕು. ಅವರ ಜೊತೆ ಮಾತನಾಡಲು ಕನ್ನಡ ಭಾಷೆ ಬರುವ ಸಿಬ್ಬಂದಿಯನ್ನೇ ನೇಮಕ ಮಾಡಬೇಕು’ ಎಂದು ಸಂಸದೆ ಸುಮಲತಾ ಬ್ಯಾಂಕ್‌ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಬ್ಯಾಂಕ್‌ ಆಫ್‌ ಬರೋಡ ವತಿಯಿಂದ ಬುಧವಾರ ನಡೆದ ರೈತರ ದಿನಾಚರಣೆ ಹಾಗೂ ಕೃಷಿ ಪಾಕ್ಷಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಬ್ಯಾಂಕ್‌ಗಳು ಹಲವು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ. ಅವುಗಳ ಬಗ್ಗೆ ಮಾಹಿತಿ ನೀಡಲು ಹಲವು ಭಿತ್ತಿಪತ್ರ, ವಿಡಿಯೊಗಳನ್ನು ಸಿದ್ಧಪಡಿಸಲಾಗಿದೆ. ಆದರೆ ಅವು ಕೂಡ ಇಂಗ್ಲಿಷ್‌ ಭಾಷೆಯಲ್ಲಿವೆ. ಇದನ್ನು ತಪ್ಪಿಸಿ ಕನ್ನಡ ಭಾಷೆಯಲ್ಲಿ ಮಾಹಿತಿ ನೀಡುವಂತಾಗಬೇಕು. ಬಡವರ ಜೊತೆ ವ್ಯವಹಾರ ಮಾಡುವಾಗ ತಾಳ್ಮೆಯಿಂದ ಅವರಿಗೆ ಅವರ ಭಾಷೆಯಲ್ಲೇ ತಿಳಿ ಹೇಳಬೇಕು. ಹಲವೆಡೆ ಭಾಷಾ ಸಮಸ್ಯೆಯಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಅಸಮಾಧಾನ ಇರುವುದನ್ನು ನಾವು ಕಂಡಿದ್ದೇವೆ’ ಎಂದರು.

‘ಜಿಲ್ಲೆಯ ರೈತರಿಗೆ ಬ್ಯಾಂಕ್‌ಗಳಿಂದ ಉತ್ತಮ ಸೇವೆ ದೊರೆಯಬೇಕು. ಬ್ಯಾಂಕ್ ಆಫ್ ಬರೋಡದಿಂದ ನಾನಾ ಜನಪ್ರಿಯ ಹಾಗೂ ರೈತ ಪರವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಳ್ಳೆಯದು. ಬ್ಯಾಂಕ್‌ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿರುವು‌ದನ್ನು ಕಂಡ ಸಂತೋಷವಾಗಿದೆ. ಮುಂದೆಯೂ ಇದೇ ರೀತಿ ಜಿಲ್ಲೆಯ ರೈತರಿಗೆ ಸಹಾಯ ಮಾಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ ‘ವಾಣಿಜ್ಯ ಬ್ಯಾಂಕ್‌ ಹಾಗೂ ಸಹಕಾರ ಬ್ಯಾಂಕ್‌ಗಳಿಂದ ಒಟ್ಟು ₹ 500 ಕೋಟಿ ಸಾಲಾ ಮನ್ನಾ ಆಗಿದೆ. ಈ ಯೋಜನೆಯನ್ನು ಬ್ಯಾಂಕ್‌ಗಳು ಬಹಳ ಯಶಸ್ವಿಯಾಗಿ ಪೂರೈಸಿವೆ. ಮುಂದೆ ಸಾಲ ಮೇಳ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಕಳೆದ 15 ದಿನಗಳಿಂದ ಬ್ಯಾಂಕ್‌ ಆಪ್‌ ಬರೋಡ ಜಿಲ್ಲೆಯ ರೈತರ ಏಳಿಗೆಗಾಗಿ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಉತ್ತಮವಾಗಿ ಪ್ರಚಾರ ಮಾಡಿದೆ’ ಎಂದು ಶ್ಲಾಘಿಸಿದರು.

‘ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಯಡಿ ಬ್ಯಾಂಕ್‌ಗಳು ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಕೆಲಸ ಮಾಡಬೇಕು. ಹಳ್ಳಿಗಳಲ್ಲಿ ಗುಂಪುಗಳನ್ನು ಸ್ಥಾಪಿಸಿ ಆ ಮೂಲಕ ಸ್ವಚ್ಛ ವಾತಾವರಣ ನಿರ್ಮಿಸುವ ಕೆಲಸ ಮಾಡಬೇಕು. ಗ್ರಾಮೀಣ ಶಾಲೆಗಳು ಈಗ ಖಾಸಗಿ ಕಾನ್ವೆಂಟ್‌ಗಳಿಗೇನೂ ಕಮ್ಮಿ ಇಲ್ಲ. ಹೀಗಾಗಿ ಶಾಲೆಗಳಿಗೆ ಸೌಲಭ್ಯ ನೀಡಬೇಕು’ ಎಂದರು.

ಬ್ಯಾಂಕ್ ಆಫ್ ಬರೋಡಾದ ವಲಯ ಕಚೇರಿಯ ಪ್ರಧಾನ ವ್ಯವಸ್ಥಾಪಕ ಎಸ್.ಎ.ಸುದರ್ಶನ್ ಮಾತನಾಡಿ ‘ರೈತರು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೂ ನಮ್ಮ ಬ್ಯಾಂಕ್‌ನಿಂದ ಹಲವು ಸೌಲಭ್ಯ ನೀಡಲಾಗುತ್ತಿದೆ. ಸ್ತ್ರೀ ಶಕ್ತಿ ಸಂಘಗಳಿಗೆ ನೆರವು ನೀಡಲಾಗಿದೆ. ರೈತರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಬ್ಯಾಂಕ್ ಆಫ್ ಬರೋಡದಿಂದ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಕಾರ್ಯಕ್ರಮಗಳ ಪ್ರಚಾರಕ್ಕೆ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಬೀದಿ ನಾಟಕಗಳ ಮೂಲಕ ಜಾಗೃತಿ ಮುಡಿಸಲಾಗುತ್ತಿದೆ’ ಎಂದರು.

ಇದೇ ಸಂದರ್ಭದಲ್ಲಿ ಉತ್ತಮ ಸಾಧನೆ ಮಾಡಿದ ರೈತರು ಹಾಗೂ ಸ್ವಸಹಾಯ ಸಂಘಗಳ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಜಿಲ್ಲಾಕಾರಿ ಡಾ.ಎಂ.ವಿ.ವೆಂಕಟೇಶ್, ಬ್ಯಾಂಕ್ ಆಫ್ ಬರೋಡದ ದಕ್ಷಿಣ ವಲಯದ ಪ್ರಧಾನ ವ್ಯವಸ್ಥಾಪಕ ಬೀರೇಂದ್ರ ಕುಮಾರ್, ಮೈಸೂರು ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ಸತ್ಯನಾರಾಯಣ ನಾಯಕ್, ವಿಬ್‌ ಸಿಟಿ ನಿರ್ದೇಶಕ ಶೈಲೇಶ್, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್, ಸಂಪನ್ಮೂಲ ವ್ಯಕ್ತಿ ಕೆ.ಪಿ.ಅರುಣಕುಮಾರಿ ಇದ್ದರು.

*********

ಮಹಿಳೆಯರಿಗೆ ಪ್ರತ್ಯೇಕ ರೈಲು

‘ಜಿಲ್ಲೆಯಿಂದ ಬೆಂಗಳೂರಿಗೆ ಪ್ರತಿನಿತ್ಯ ಅಪಾರ ಸಂಖ್ಯೆಯ ಮಹಿಳೆಯರು ಪ್ರಯಾಣ ಮಾಡುತ್ತಾರೆ. ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಬೆಂಗಳೂರಿಗೆ ಒಂದು ಪ್ರತ್ಯೇಕ ರೈಲು ಹಾಕಬೇಕು ಎಂದು ಈಗಾಗಲೇ ಕೇಂದ್ರ ಸಚಿವ ಸುರೇಶ್‌ ಅಂಗಡಿ ಅವರಿಗೆ ಮನವಿ ಮಾಡಿದ್ದೇನೆ. ರೈಲ್ವೆ ಅಧಿಕಾರಿಗಳೊಂದಿಗೂ ಮಾತನಾಡಿದ್ದೇನೆ’ ಎಂದು ಸುಮಲತಾ ಹೇಳಿದರು.

‘ರೈಲ್ವೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಸದ್ಯಕ್ಕೆ ಜನಸಂದಣಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಮಹಿಳೆಯರಿಗೆ ಮತ್ತೊಂದು ಬೋಗಿ ಹಾಕುವುದಾಗಿ ಭರವಸೆ ನೀಡಿದ್ದಾರೆ. ಶ್ರೀರಂಗಪಟ್ಟಣವನ್ನು ಪ್ರವಾಸಿ ತಾಣವಾಗಿ ರೂಪಿಸಲು ಸಕಲ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)