ಬುಧವಾರ, ನವೆಂಬರ್ 20, 2019
21 °C

ಪೌರಕಾರ್ಮಿಕರು ಸ್ವಚ್ಛತೆಯ ಸೇನಾನಿಗಳು: ಡಾ.ಎಂ.ವಿ.ವೆಂಕಟೇಶ್‌ ಅಭಿಮತ

Published:
Updated:

ಮಂಡ್ಯ: ‘ಗಡಿಯಲ್ಲಿ ಶತ್ರುಗಳೊಂದಿಗೆ ಹೋರಾಡಿ ಸೈನಿಕರು ನಮ್ಮನ್ನು ರಕ್ಷಣೆ ಮಾಡುತ್ತಾರೆ. ನಮ್ಮ ಹಸಿವಿಗೆ ರೈತರು ಅನ್ನ ನೀಡಿ ಸಲಹುತ್ತಾರೆ. ಪರಿಸರವನ್ನು ಸ್ವಚ್ಛಗೊಳಿಸಿ ಪೌರಕಾರ್ಮಿಕರು ನಮಗೆ ಉತ್ತಮ ಆರೋಗ್ಯ ನೀಡುತ್ತಾರೆ. ಹೀಗಾಗಿ ಪೌರಕಾರ್ಮಿಕರು ಕೂಡ ಸ್ವಚ್ಛತೆಯ ಸೇನಾನಿಗಳು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಜಿಲ್ಲಾಡಳಿತ ವತಿಯಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಗುರುವಾರ ನಡೆದ ಜಿಲ್ಲೆಯ ವಿವಿಧ ನಗರ ಸಂಸ್ಥೆ ವ್ಯಾಪ್ತಿಯ ಪೌರಕಾರ್ಮಿಕರ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

‘ಆರೋಗ್ಯವಂತ ಸಮಾಜದಲ್ಲಿ ವಿಷ ಜಂತು, ಕ್ರಿಮಿ, ಕೀಟ ಇರಬಾರದು. ನಗರಗಳು ಸ್ವಚ್ಛ ಸುಂದರವಾಗಿರಬೇಕು. ಇದಕ್ಕಾಗಿ ಪೌರಕಾರ್ಮಿಕರು ಶ್ರಮಿಸಬೇಕು. ಪೌರಕಾರ್ಮಿಕರು ಹೆಚ್ಚಿನ ಅರಿವಿಲ್ಲದೆ ಕೆಲವು ಸಂದರ್ಭದಲ್ಲಿ ನಾನಾ ಚಟಕ್ಕೆ ತುತ್ತಾಗುತ್ತಾರೆ. ಪೌರಕಾರ್ಮಿಕರು ಹೆಚ್ಚಿನ ಮದ್ಯ ಸೇವನೆ, ತಂಬಾಕು ಸೇವನೆ ಮಾಡುತ್ತಾರೆ ಎಂದು ಒಂದು ಸರ್ವೆ ಹೇಳಿದೆ. ಇಂತಹ ಪರಿಸ್ಥಿತಿ ಇಲ್ಲವಾಗಬೇಕು. ಅವರು ಕೂಡ ಆರೋಗ್ಯವಂತರಾಗಿ ಸಮಾಜದ ಆರೋಗ್ಯ ಕಾಪಾಡಬೇಕು’ ಎಂದು ಹೇಳಿದರು.

‘ಪೌರಕಾರ್ಮಿಕರು ಮದ್ಯ ಸೇವನೆ, ತಂಬಾಕು ಸೇವನೆಯಿಂದ ಮುಕ್ತರಾಗಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬೇಕು. ಇದರಿಂದ ಸಮಾಜದ ಆರೋಗ್ಯವೂ ಬದಲಾಗುತ್ತದೆ. ಯಾವುದೇ ದುಷ್ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕಾಳಜಿ ವಹಿಸಬೇಕು. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಆ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕು’ ಎಂದರು.

‘ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿರುವಾಗ ಅಗತ್ಯ ಪರಿಕರ ಧರಿಸಿ ಕೆಲಸ ಮಾಡಬೇಕು. ಇದರಿಂದ ಸಂಭವನೀಯ ಅವಘಡಗಳು ತಪ್ಪುತ್ತವೆ. ಹೆಚ್ಚು ಹೆಚ್ಚರಿಕೆಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ನಗರ ಪ್ರದೇಶದಲ್ಲಿ ಬೇರ್ಪಡಿಸಿದ ಒಣ ಕಸ, ಹಸಿ ಕಸ ಸ್ವೀಕರಿಸಿ ನವೀಕರಣಗೊಳ್ಳಬಹುದಾದ ವಸ್ತುಗಳ ಬಳಕೆಗೆ ಹೆಚ್ಚು ಒತ್ತು ನೀಡಬೇಕು. ಕಸ ಸಂಗ್ರಹಿಸುವ ಹಂತದಲ್ಲಿಯೇ ಇಂತಹ ಕಾರ್ಯಗಳು ಆಗುವುದರಿಂದ ಸ್ವಚ್ಛತಾ ಕಾರ್ಯ ಇನ್ನೂ ಸಲೀಸಾಗುತ್ತದೆ’ ಎಂದು ಹೇಳಿದರು.

‘ನಗರದ ಸ್ವಚ್ಛತೆಯ ಜವಾಬ್ದಾರಿ ಹೊತ್ತಿರುವ ಪೌರಕಾರ್ಮಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಂಡು ಇತರರ ಆರೋಗ್ಯ ರಕ್ಷಣೆ ಮಾಡುತ್ತಿರುವ ಪೌರಕಾರ್ಮಿಕರಿಗೆ ಜಾಗೃತಿ ಮೂಡಿಸಲು ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪೌರಕಾರ್ಮಿಕರು ಪೌಷ್ಟಿಕ ಆಹಾರ ಸೇವಸಿ ರೋಗ ನಿರೋಧಕ ಶಕ್ತಿ ಹೆಚ್ಚುಸಿಕೊಳ್ಳಬೇಕು. ಕೇವಲ ಕಾಶ್ಮೀರಿ ಸೇಬು ಅಂತಹ ಹಣ್ಣುಗಳೊಂದಿಗೆ ಸ್ಥಳೀಯ ಹಣ್ಣುಗಳ ಸೇವನೆಯತ್ತಲೂ ಗಮನ ಹರಿಸಬೇಕು. ಮಂಡ್ಯ ಜಿಲ್ಲೆ ಉತ್ತಮ ನಗರ ಪ್ರದೇಶವನ್ನಾಗಿ ರೂಪಿಸಲು ನಾವೆಲ್ಲರೂ ಶ್ರಮವಹಿಸಬೇಕು’ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಪೌರಾಯುಕ್ತ ಎಸ್‌.ಲೋಕೇಶ್‌, ನಗರಸಭೆ ಸದಸ್ಯ ಶ್ರೀಧರ್‌ ಇದ್ದರು.

ಮಲ ಹೊತ್ತರೆ ಗುತ್ತಿಗೆದಾರ, ಅಧಿಕಾರಿ ಹೊಣೆ
‘ದೇಶದಲ್ಲಿ ಮಲ ಹೊರುವುದನ್ನು ನಿಷೇಧಿ ಮಾಡಲಾಗಿದೆ. ಯಾವುದೇ ಸಂದರ್ಭದಲ್ಲಿ ಮಲ ಹೊರಬಾರದು. ಒಳಚರಂಡಿ ಮತ್ತು ಮಲ ಸ್ವಚ್ಛತೆಗಾಗಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿರುವ ವಾಹನ ಉಪಯೋಗಿಸಲಾಗುತ್ತಿದೆ. ಇದರ ಹೊರತಾಗಿಯೂ ಒಳಚಂಡಿ ಸ್ವಚ್ಛತೆ, ಮಲ ಹೊರುವುದು ಕಂಡು ಬಂದರೆ ಗುತ್ತಿಗೆದಾರ‌, ಅಧಿಕಾರಿಯನ್ನು ಜವಾಬ್ದಾರಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)