ಗುರುವಾರ , ನವೆಂಬರ್ 14, 2019
23 °C
ನವೋದಯ ಶಾಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ, ಸಂವಿಧಾನ ಓದಿ– ಮಕ್ಕಳಿಗೆ ಸಂಸದರ ಸಲಹೆ

ಗಮನ ಸೆಳೆದ ಯುವ ಅಣಕು ಸಂಸತ್‌

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಜವಾಹರ್‌ ನವೋದಯ ವಿದ್ಯಾಲಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ‘ಯುವ ಅಣಕು ಸಂಸತ್‌’ ಕಾರ್ಯಕ್ರಮ ಗಮನ ಸೆಳೆಯಿತು.

ಜನಪ್ರತಿನಿಧಿಗಳು ನಡೆಸುವ ಸಂಸದೀಯ ಚಟುವಟಿಕೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ವಿದ್ಯಾಲಯದ ಕಲಾನಂದನ ಸಭಾಂಗಣದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದು 23ನೇ ಆವೃತ್ತಿಯ ಕಾರ್ಯಕ್ರಮವಾಗಿತ್ತು.  

ವಿದ್ಯಾರ್ಥಿಗಳು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರಂತೆ ಸದನದಲ್ಲಿ ವಾದ ಮಂಡಿಸಿದರು. ಎರಡೂ ಕಡೆಯವರ ವಾದ ಪ್ರತಿವಾದಗಳು ಸಂಸತ್‌ ಹಾಗೂ ವಿಧಾನಸಭಾ ಕಲಾಪಗಳಲ್ಲಿ ಜನಪ್ರತಿನಿಧಿಗಳ ನಡುವಿನ ವಾಗ್ಯುದ್ಧದಂತೆಯೇ ಇತ್ತು. 

ಆರಂಭದಲ್ಲಿ ಸಭಾಧ್ಯಕ್ಷರು, ಮುಖ್ಯಮಂತ್ರಿ, ಪ್ರತಿ ಪಕ್ಷದ ನಾಯಕರು, ಗೃಹ, ಶಿಕ್ಷಣ ಸೇರಿದಂತೆ ಸಚಿವರ ಆಯ್ಕೆ ಪ್ರಕ್ರಿಯೆ ನಡೆಯಿತು. ಮೊದಲಿಗೆ ತಾತ್ಕಾಲಿಕವಾಗಿ ಇಬ್ಬರು ಸಚಿವರು ತಮ್ಮ ಪರಿಚಯ ಮಾಡಿಕೊಂಡು ಅಧಿಕಾರ ಸ್ವೀಕರಿಸಿದರು. ನಂತರ ನೇರವಾಗಿ ಕಲಾಪಕ್ಕೆ ಮುಂದಾದರು.

ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರು ತಮಗೆ ನಿಗದಿಪಡಿಸಿದ ಆಸನಗಳಲ್ಲಿ ಕುಳಿತಿದ್ದರು. ಸಭಾಧ್ಯಕ್ಷರು ಕಾರ್ಯಕಲಾಪ ಆರಂಭಿಸಿದರು. ಸಂತಾಪ ಸೂಚನೆ, ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ.... ಹೀಗೆ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ನಡೆಯುವ ಕಲಾಪವನ್ನೇ ಇಲ್ಲೂ ಮರು ಸೃಷ್ಟಿಸಿದರು. ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡು ಪ್ರಸ್ತುತ ಸನ್ನಿವೇಶಕ್ಕೆ ಸರಿಸಮಾನವಾಗಿ ವಿರೋಧ ಪಕ್ಷಗಳ ಸದಸ್ಯರು ಪ್ರಶ್ನೆಗಳನ್ನು ಕೇಳಿ ಸರ್ಕಾರದಿಂದ ಉತ್ತರ ಪಡೆದರು.

ಅಣಕು ಸ‌ಂಸತ್ತಿನ ಕಲಾಪಕ್ಕೆ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಸಾಕ್ಷಿಯಾದರು. ತೀರ್ಪುಗಾರರಾಗಿ ಅವರು ಭಾಗವಹಿಸಿದರು.

ನಂತರ ಮಾತನಾಡಿದ ಅವರು, ‘ಸಂಸದೀಯ ವ್ಯವಸ್ಥೆಯ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು ಅರಿವು ಬೆಳೆಸಿಕೊಳ್ಳಬೇಕು. ಯುವ ಸಂಸತ್‌ನಲ್ಲಿ ಮಕ್ಕಳು ಪಡೆಯುವ ಅನುಭವವನ್ನು ತಮ್ಮ ಶಾಲೆಗಳಲ್ಲಿ ಹಾಗೂ ಹೊರಗೆ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕು. ಸಂವಿಧಾನದ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಾವು ನಿರ್ವಹಿಸುವ ಯಾವುದೇ ವೃತ್ತಿ ನಮಗೆ ಶ್ರೇಷ್ಠವಾಗಬೇಕು. ಯಾವುದೇ ಕ್ಷೇತ್ರಕ್ಕೆ ಹೋದರೂ ಘನತೆ, ಗೌರವ ಕಾಪಾಡಬೇಕು. ಪ್ರೌಢಶಾಲಾ ಹಂತದಲ್ಲೇ ಇಂತಹ ಅಣಕು ಸಂಸತ್ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಇಂದಿನ ಮಕ್ಕಳು ಮುಂದಿನ ಉತ್ತಮ ನಾಗರಿಕರಾಗಬೇಕು. ಇದಕ್ಕಾಗಿ ಸಂವಿಧಾನ ಓದಬೇಕು. ವಿವಿಧೆತೆಯಲ್ಲಿ ಏಕತೆ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ನವೋದಯ ಶಾಲೆಯ ಪ್ರಾಂಶುಪಾಲ ವಿ.ಪ್ರಸಾದ್, ಮೈಸೂರಿನ ಪ್ರಾದೇಶಿಕ ಶಿಕ್ಷಣ ನಿರ್ದೇಶನಾಲಯದ (ಆರ್‌ಐಇ) ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಡಿ.ಕೆ.ಮಿಶ್ರ ಇದ್ದರು.

ಪ್ರತಿಕ್ರಿಯಿಸಿ (+)