ಕೊಂಕಣ ಸುತ್ತಿ ಮೋದಿ ಗಾರ್ಡನ್‌ಗೆ!

7
ಸ್ಥಳೀಯರಿಗೆ ಆರ್ಥಿಕ ಹೊರೆ, ಪರಿಸರ ಮಾಲಿನ್ಯವೂ ಹೆಚ್ಚಳ

ಕೊಂಕಣ ಸುತ್ತಿ ಮೋದಿ ಗಾರ್ಡನ್‌ಗೆ!

Published:
Updated:
Deccan Herald

ಬೆಂಗಳೂರು:  ‘ಮೋದಿ ಗಾರ್ಡನ್‌’ ಬಡಾವಣೆ ನಿವಾಸಿಗಳು ಮನೆ ಸೇರಲು ಕೊಂಕಣ ಸುತ್ತಿ ಮೈಲಾರ ತಲುಪಿದಂತೆ ಸುತ್ತಿ ಬಳಸಿ ಸಾಗಬೇಕಾದ ಸ್ಥಿತಿ ಇದೆ. ಅವರ ಕಿಸೆಗೂ ಕತ್ತರಿ ಬೀಳುತ್ತಿದೆ.

ವರ್ಷಕ್ಕೆ ₹ 14 ಸಾವಿರ ಹೊರೆ: ‘ಮೋದಿ ಗಾರ್ಡನ್‌ನಿಂದ ಸವಾರ್‌ ಲೈನ್‌ ಮೂಲಕ ಜೆಸಿ ನಗರಕ್ಕೆ ಹೋಗಲು 1 ಕಿ.ಮೀ ದೂರ. ಈಗ ನಾವು ದಿಣ್ಣೂರು ಮುಖ್ಯ ರಸ್ತೆ, ಕಬೀರ್‌ ಆಶ್ರಮ ರಸ್ತೆ (ದೇವೇಗೌಡ ರಸ್ತೆ) ಮೂಲಕ ಸಾಗಿ ಜೆ.ಸಿ.ನಗರ ತಲುಪಬೇಕು. ನಿತ್ಯ 2.5 ಕಿ.ಮೀ ಹೆಚ್ಚುವರಿ ಪ್ರಯಾಣ ಮಾಡಬೇಕು. ಈ ಹಿಂದೆ ಆಟೊದಲ್ಲಿ ಕನಿಷ್ಠ ದರ (₹ 25) ಪಾವತಿಸಿ ಜೆ.ಸಿ.ನಗರಕ್ಕೆ ಹೋಗಬಹುದಿತ್ತು. ಈಗ ₹ 45 ನೀಡಬೇಕು’ ಎಂದು ವಿವರಿಸುತ್ತಾರೆ ಮೋದಿ ಗಾರ್ಡನ್‌ ನಿವಾಸಿಗಳ ಕ್ಷೇಮಾಭಿ
ವೃದ್ಧಿ ಸಂಘದ ಅಧ್ಯಕ್ಷ ಎ.ಆರ್‌.ಸುರೇಶ್‌.

‘ನಾನು ಕಚೇರಿಗೆ ಕಾರಿನಲ್ಲಿ ಹೋಗಿ ಬರಲು ನಿತ್ಯ 5 ಕಿ.ಮೀ ಹೆಚ್ಚುವರಿಯಾಗಿ ಪ್ರಮಾಣಿಸಬೇಕು. ಇದರಿಂದ ಹೆಚ್ಚೂ ಕಡಿಮೆ ಅರ್ಧ ಲೀಟರ್‌ ಪೆಟ್ರೋಲ್‌ ಹೆಚ್ಚುವರಿಯಾಗಿ ಬಳಕೆ ಆಗುತ್ತದೆ. ದಿನಕ್ಕೆ ₹ 40 ಹೆಚ್ಚುವರಿ ಹೊರೆ, ರಜೆ ದಿನಗಳನ್ನು ಕಳೆದರೂ ತಿಂಗಳಿಗೆ ₹1,100 ಹೆಚ್ಚುವರಿ ವೆಚ್ಚ ಮಾಡಬೇಕಾಗುತ್ತದೆ. ವರ್ಷಕ್ಕೆ 12.5 ಸಾವಿರ ಹೆಚ್ಚುವರಿಯಾಗಿ ವೆಚ್ಚವಾಗುತ್ತದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

‘ಇದು ಕೇವಲ ಹಣದ ಪ್ರಶ್ನೆ ಅಲ್ಲ. ನಿತ್ಯವೂ ಸಾವಿರಾರು ಮಂದಿ ಸುತ್ತು ಬಳಸಿ ಸಾಗುವುದರಿಂದ ಮಾಲಿನ್ಯದ ಪ್ರಮಾಣ ಎಷ್ಟು ಹೆಚ್ಚುತ್ತದೆ, ಎಷ್ಟು ಜನರ ಸಮಯ ವ್ಯರ್ಥವಾಗುತ್ತದೆ ಎಂಬುದನ್ನೂ ನಾವು ಪರಿಗಣಿಸಬೇಕು. ನಾವು ಹೊಸ ರಸ್ತೆಯನ್ನು ಕೇಳುತ್ತಿಲ್ಲ. ಅನಾದಿ ಕಾಲದಿಂದಲೂ ಸಾರ್ವಜನಿಕರು ಬಳಸುತ್ತಿದ್ದ ರಸ್ತೆಯನ್ನು ಮತ್ತೆ ನಮಗೆ ಬಿಟ್ಟುಕೊಡಿ ಎಂಬುದಷ್ಟೇ ನಮ್ಮ ಬೇಡಿಕೆ. ಇದರಿಂದ ಭವಿಷ್ಯದ ಪೀಳಿಗೆಗೆ ಬಹಳ ಅನುಕೂಲ ಆಗಲಿದೆ’ ಎಂದು ಹೇಳುತ್ತಾರೆ.

ಸವಾರ್‌ಲೈನ್‌ ರಸ್ತೆಯನ್ನು ಮುಚ್ಚಿದ ಬಳಿಕ ಮೋದಿ ಗಾರ್ಡನ್‌, ಕಾವಲ್‌ ಭೈರಸಂದ್ರ, ಬಂಗಾರಗಿರಿ ನಗರ, ದಿಣ್ಣೂರು, ಈದ್ಗಾ ಮೊಹಲ್ಲಾ, ನೂರ್‌ ಮಸೀದಿ, ಆನಂದ ಥಿಯೇಟರ್‌ ಪ್ರದೇಶದ ನಿವಾಸಿಗಳಿಗೂ ಅನನುಕೂಲವಾಗಿದೆ. ಈ ಪ್ರದೇಶಗಳಲ್ಲಿ 40 ಸಾವಿರ ಮಂದಿ ನೆಲೆಸಿದ್ದಾರೆ.

ದೇವಸ್ಥಾನ ಪ್ರವೇಶಕ್ಕೂ ನಿರ್ಬಂಧ

ಸವಾರ್‌ ಲೈನ್‌ ಗ್ರಾಮದಲ್ಲಿ ಆಂಜನೇಯ ದೇವಸ್ಥಾನವಿದೆ.  ಸವಾರ್‌ಲೈನ್‌ ರಸ್ತೆ ಮತ್ತು ದೇಸ್‌ರಾಜ್‌ ರಸ್ತೆಯಲ್ಲಿ ಸಾರ್ವಜನಿಕ ಸಂಚಾರ ನಿರ್ಬಂಧಿಸಿದ ಬಳಿಕ ಈ ದೇವಸ್ಥಾನ ಭಕ್ತರಿಂದ ದೂರವಾಗಿದೆ.

 ‘ಮೈಸೂರು ರಾಜ್ಯ ಸರ್ಕಾರ ಹಾಗೂ ರಕ್ಷಣಾ ಇಲಾಖೆ ನಡುವೆ 1955ರಲ್ಲಿ ನಡೆದ ಒಪ್ಪಂದ ಪ್ರಕಾರ ದೇವಸ್ಥಾನದ ಜಾಗವನ್ನು ನಿಮಗೆ ಬಿಟ್ಟುಕೊಡಲಾಗಿದೆ. ಈ ದೇವಸ್ಥಾನಕ್ಕೆ ಹಗಲು ಹೊತ್ತಿನಲ್ಲಿ ಯಾರು ಬೇಕಾದರೂ ಬಂದು ಹೋಗಬಹುದು’ ಎಂದು ರಕ್ಷಣಾ ಇಲಾಖೆಯ ಕಮಾಂಡಿಂಗ್‌ ಪ್ರಧಾನ ಕಚೇರಿಯ ಕರ್ನಲ್‌ ಗಜೇಂದ್ರ ಜೋಷಿಯವರು ದೇವಸ್ಥಾನದ ಆಡಳಿತ ಮಂಡಳಿಗೆ 2012ರಲ್ಲಿ ಬರೆದಿದ್ದ ಪತ್ರದಲ್ಲಿ ಸ್ಪಷ್ಟಪಡಿಸಿದ್ದರು.

‘ಈ ದೇವಸ್ಥಾನಕ್ಕೂ ಮಿಲಿಟರಿಯವರು ಯಾರನ್ನೂ ಬಿಡುತ್ತಿಲ್ಲ. ಅರ್ಚಕರು ಆಗೊಮ್ಮೆ ಈಗೊಮ್ಮೆ ಹೋಗಿ ಪೂಜೆ ನಡೆಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸುರೇಶ್‌. 

ಕಲ್ಯಾಣಕ್ಕೂ ಕತ್ತರಿ: ಮೋದಿ ಗಾರ್ಡನ್‌, ಕಾವಲ್‌ ಭೈರಸಂದ್ರ, ಬಂಗಾರಗಿರಿ ನಗರ, ದಿಣ್ಣೂರು, ನಾಗವಾರ ಪ್ರದೇಶಗಳ ನಿವಾಸಿಗಳ ವಿವಾಹಗಳು ಈ ದೇವಸ್ಥಾನದ ಸಭಾಂಗಣದಲ್ಲೇ ನಡೆಯುತ್ತಿದ್ದವು.

ಮದುವೆ ಸಮಾರಂಭಗಳಿಗೆ ನೂರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಸುರಕ್ಷತಾ ದೃಷ್ಟಿಯಿಂದ ಇಂತಹ ಸಮಾರಂಭಗಳಿಗೆ ಅವಕಾಶ ಕಲ್ಪಿಸುವುದು ಕಷ್ಟ ಎಂಬ ನೆಪ ಹೇಳಿ ಈ ದೇವಸ್ಥಾನದಲ್ಲಿ ಮದುವೆ ಏರ್ಪಡಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !