ಶುಕ್ರವಾರ, ನವೆಂಬರ್ 15, 2019
22 °C
ಮಲೇಷ್ಯಾ ಪ್ರಧಾನಿ ಮಹತೀರ್‌ ಮೊಹಮದ್‌ ಜೊತೆ ಮೋದಿ ಮಾತುಕತೆ

ಝಾಕಿರ್‌ ಹಸ್ತಾಂತರಕ್ಕೆ ಮನವಿ

Published:
Updated:
Prajavani

ವ್ಲಾಡಿವೊಸ್ಟೊಕ್‌ (ಪಿಟಿಐ): ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿರುವ, ವಿವಾದಿತ ಧರ್ಮಬೋಧಕ ಝಾಕಿರ್ ನಾಯ್ಕ್ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವಂತೆ  ಮಲೇಷ್ಯಾ ಪ್ರಧಾನಿ ಮಹತೀರ್‌ ಮೊಹಮದ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ರಷ್ಯಾದ ಪೂರ್ವಭಾಗದ ನಗರ ವ್ಲಾಡಿವೊಸ್ಟೊಕ್‌ನಲ್ಲಿ ನಡೆಯುತ್ತಿರುವ ಪೌರ್ವಾತ್ಯ ಆರ್ಥಿಕ ವೇದಿಕೆಯ (ಇಇಎಫ್‌) ಐದನೇ ಸಮಾವೇಶದ ಎರಡನೇ ದಿನವಾದ ಗುರುವಾರ ಅವರು ಮಲೇಷ್ಯಾ ಪ್ರಧಾನಿ ಜೊತೆ ಹಲವಾರು ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚಿಸಿದರು.

ಹಣ ಅಕ್ರಮ ವರ್ಗಾವಣೆ ಹಾಗೂ ದ್ವೇಷಪೂರಿತ ಭಾಷಣಗಳ ಮೂಲಕ ಮೂಲಭೂತವಾದ ಪ್ರಚಾರ ಮಾಡುತ್ತಿದ್ದ ಆರೋಪ ಹೊತ್ತ
ಝಾಕಿರ್ ನಾಯ್ಕ್‌ 2016ರಲ್ಲಿ ಭಾರತ ತೊರೆದು, ಮಲೇಷ್ಯಾದಲ್ಲಿ ಆಶ್ರಯ ಪಡೆದಿದ್ದಾರೆ.

ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ತೀವ್ರಗೊಳಿಸುವ ಸಂಬಂಧ ಭಾರತದ ತನಿಖಾ ಸಂಸ್ಥೆಗಳು ನಾಯ್ಕ್‌ ಹಸ್ತಾಂತರಕ್ಕೆ ಪ್ರಯತ್ನಿಸುತ್ತಿವೆ.

‘ನಾಯ್ಕ್‌ಗೆ ಸಂಬಂಧಿಸಿದ ವಿಷಯ ಉಭಯ ದೇಶಗಳ ಪಾಲಿಗೆ ಮಹತ್ವದ್ದು. ಈ ಸಂಬಂಧ ಎರಡೂ ದೇಶಗಳ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರಲು ಉಭಯ ನಾಯಕರು ಸಮ್ಮತಿಸಿದರು’ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಸಭೆ ನಂತರ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ನಿರ್ಧಾರ ಹಿಂದಿರುವ ತರ್ಕ ಹಾಗೂ ಉದ್ದೇಶವನ್ನು ಮಹತೀರ್‌ ಅವರಿಗೆ ಮೋದಿ ಮನವರಿಕೆ ಮಾಡಿದರು’ ಎಂದೂ ಗೋಖಲೆ ತಿಳಿಸಿದ್ದಾರೆ.

₹ 100 ಕೋಟಿ ಸಾಲ ಘೋಷಣೆ

‘ರಷ್ಯಾದ ಪೂರ್ವಭಾಗದ ಪ್ರದೇಶಗಳ ಅಭಿವೃದ್ಧಿಗಾಗಿ ಭಾರತ ₹ 100 ಕೋಟಿ ಸಾಲ ನೀಡಲಿದೆ’ ಎಂದು ಮೋದಿ ಗುರುವಾರ ಪ್ರಕಟಿಸಿದರು.

‘ಆ್ಯಕ್ಟ್‌ ಈಸ್ಟ್‌’ ನೀತಿಯಡಿ ನನ್ನ ಸರ್ಕಾರ ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ಹೆಚ್ಚು ಪರಿಣಾಮಕಾರಿ ಸಂಬಂಧ ವೃದ್ಧಿಗೆ ಶ್ರಮಿಸುತ್ತಿದೆ. ನೈಸರ್ಗಿಕ ಸಂಪನ್ಮೂಲಗಳಿಂದ ಸಂಪದ್ಭರಿತ ಪೂರ್ವಭಾಗದ ಅಭಿವೃದ್ಧಿಗೆ ಭಾರತ ಹೆಗಲು ಕೊಡಲಿದೆ’ ಎಂದೂ ಹೇಳಿದರು.

‘ವ್ಲಾಡಿವೊಸ್ಟೊಕ್‌ನಲ್ಲಿ ರಾಜತಾಂತ್ರಿಕ ಕಚೇರಿ ಆರಂಭಿಸಿದ ಮೊದಲ ದೇಶ ಸಹ ಭಾರತ’ ಎಂದೂ ಹೇಳಿದರು.

‘ಗಾಂಧಿ–ಟಾಲ್‌ಸ್ಟಾಯ್‌ ಪ್ರೇರಣೆ’

‘ರಷ್ಯಾದ ಖ್ಯಾತ ಲೇಖಕ, ದಾರ್ಶನಿಕ ಲಿಯೋ ಟಾಲ್‌ಸ್ಟಾಯ್‌ ಹಾಗೂ ಮಹಾತ್ಮ ಗಾಂಧಿ ಪರಸ್ಪರರ ಮೇಲೆ ಅಚ್ಚಳಿಯದ ಪ್ರಭಾವ ಹೊಂದಿದ್ದರು. ನಮ್ಮ ದ್ವಿಪಕ್ಷೀಯ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲು ಈ ಮಹಾನ್‌ ವ್ಯಕ್ತಿಗಳಿಂದ ಪ್ರೇರಣೆ ಪಡೆಯಬೇಕು’ ಎಂದು ಮೋದಿ ಪ್ರತಿಪಾದಿಸಿದರು.

‘ಈ ಇಬ್ಬರು ಮೇರು ವ್ಯಕ್ತಿಗಳು ಎಂದಿಗೂ ಭೇಟಿಯಾಗಲಿಲ್ಲ. ಆದರೆ, ಪತ್ರ ವ್ಯವಹಾರದ ಮೂಲಕವೇ ವಿಚಾರಗಳ ವಿನಿಮಯ ಮಾಡಿಕೊಂಡರು. ಟಾಲ್‌ಸ್ಟಾಯ್‌ ಅವರ ‘ದಿ ಕಿಂಗ್‌ಡಂ ಆಫ್‌ ಗಾಡ್‌ ಈಸ್‌ ವಿದಿನ್‌ ಯು’ ಕೃತಿ ತಮ್ಮ ಜೀವನದ ದಿಕ್ಕನ್ನೇ ಬದಲಿಸಿದ ಬಗ್ಗೆ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಅವರು ಹೇಳಿದರು.

 

ಪ್ರತಿಕ್ರಿಯಿಸಿ (+)