ಭಯೋತ್ಪಾದನೆ ಮುಕ್ತ ವಾತಾವರಣ ಅಗತ್ಯ: ಇಮ್ರಾನ್‌ಖಾನ್‌ಗೆ ಮೋದಿ ಸ್ಪಷ್ಟೋಕ್ತಿ

ಮಂಗಳವಾರ, ಜೂನ್ 25, 2019
24 °C

ಭಯೋತ್ಪಾದನೆ ಮುಕ್ತ ವಾತಾವರಣ ಅಗತ್ಯ: ಇಮ್ರಾನ್‌ಖಾನ್‌ಗೆ ಮೋದಿ ಸ್ಪಷ್ಟೋಕ್ತಿ

Published:
Updated:

ನವದೆಹಲಿ: ಉಭಯ ದೇಶಗಳ ನಡುವೆ ಶಾಂತಿ ನೆಲೆಸಿ, ಅಭಿವೃದ್ಧಿ ಸಾಧಿಸಬೇಕಾದರೆ ಭಯೋತ್ಪಾದನೆ, ಹಿಂಸೆ ಮುಕ್ತ ಹಾಗೂ ವಿಶ್ವಾಸ ತುಂಬಿದ ವಾತಾವರಣ ನಿರ್ಮಿಸುವುದು ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್‌ಗೆ ಹೇಳಿದ್ದಾರೆ.

ಚುನಾವಣೆಯಲ್ಲಿನ ಅಭೂತಪೂರ್ವ ಗೆಲುವಿಗೆ ಅಭಿನಂದಿಸಲು ಇಮ್ರಾನ್‌ ಖಾನ್‌ ದೂರವಾಣಿ ಕರೆ ಮಾಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

’ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧಕ್ಕೆ ಭಾರತ ಒತ್ತು ನೀಡುತ್ತದೆ. ಈ ಹಿಂದೆಯೇ ಹೇಳಿದಂತೆ ಎರಡೂ ದೇಶಗಳು ಬಡತನದ ವಿರುದ್ಧ ಹೋರಾಡುವುದು ಮುಖ್ಯ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು‘ ಎಂದು ಸಚಿವಾಲಯ ಹೇಳಿದೆ.

ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌, ನೇಪಾಳದ ಮಾಜಿ ಪ್ರಧಾನಿ ಮಾಧವ ನೇಪಾಳ ಅವರೂ ದೂರವಾಣಿ ಕರೆ ಮಾಡಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು ಎಂದು ಸಚಿವಾಲಯ ತಿಳಿಸಿದೆ.

ಇಸ್ಲಾಮಾಬಾದ್‌ ವರದಿ: ’ಪಾಕಿಸ್ತಾನದ ಜನರ ಪ್ರಗತಿಗಾಗಿ ಭಾರತದೊಂದಿಗೆ ಕೈಜೋಡಿಸಲು ಅಪೇಕ್ಷಿಸುವುದಾಗಿ‘ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ದೂರವಾಣಿ ಕರೆ ಮಾಡಿ ಮಾತನಾಡಿದ ಅವರು, ’ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿಗಾಗಿ ಮೋದಿ ಅವರೊಂದಿಗೆ ಕಾರ್ಯ ನಿರ್ವಹಿಸಲು ಎದುರು ನೋಡುತ್ತಿದ್ದೇನೆ ಎಂಬುದಾಗಿ ಹೇಳಿದರು‘ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

 ’ಬಗೆಹರಿಯದ ಎಲ್ಲಾ ವಿವಾದಗಳ ಪರಿಹಾರಕ್ಕಾಗಿ ಭಾರತದ ನೂತನ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧರಿದ್ದೇವೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಶಿ ಅವರೂ ಹೇಳಿದ್ದಾರೆ.

ಮುಲ್ತಾನ್‌ನಲ್ಲಿ ಇಫ್ತಾರ್‌ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪ್ರಗತಿ ಹಾಗೂ ಶಾಂತಿ ಸ್ಥಾಪನೆಗಾಗಿ ಉಭಯ ದೇಶಗಳು ಪರಸ್ಪರ ಮಾತುಕತೆ ನಡೆಸುವ ಅಗತ್ಯವಿದೆ’ ಎಂದಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಎರಡನೇ ಬಾರಿಗೆ ಜಯಗಳಿಸಿದ ಬಳಿಕ ಖುರೇಶಿ  ಈ ಹೇಳಿಕೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !