ಆರೋಗ್ಯಕ್ಕೂ ಹಣಕ್ಕೂ ಇದೆ ಅನಾರೋಗ್ಯಕರ ನಂಟು!

7

ಆರೋಗ್ಯಕ್ಕೂ ಹಣಕ್ಕೂ ಇದೆ ಅನಾರೋಗ್ಯಕರ ನಂಟು!

Published:
Updated:
Deccan Herald

ಬದುಕನ್ನು ಹಣದಿಂದ ಅಳೆಯಲಾಗದು ಎನ್ನುವುದನ್ನು ತಾತ್ವಿಕವಾಗಿ ಅಲ್ಲಗಳೆಯಲಾಗುವುದಿಲ್ಲ. ಗ್ರೀಕ್ ತತ್ವಶಾಸ್ತ್ರಜ್ಞ ಎಪಿಕ್ಯೂರಸ್ ‘ರಾಶಿ ಹಾಕಿಕೊಂಡಿದ್ದರಿಂದ ನಾವು ಸಮೃದ್ಧರಲ್ಲ. ಯಾವುದನ್ನು ಬಳಸಿ, ಅನುಭವಿಸಿ, ಆನಂದಿಸುತ್ತೇವೆಯೋ ಅದೇ ಸಮೃದ್ಧಿ’ ಎಂದಿದ್ದ. ಒಂದು ರೀತಿಯಲ್ಲಿ ಇದು ಆಚರಣೀಯ ತತ್ವ. ಕಾರ್ಯಗತಕ್ಕೆ ಬರದದ್ದನ್ನು ಅಮೆರಿಕದ ತತ್ವಶಾಸ್ತ್ರಜ್ಞರು ಒಪ್ಪಲಿಲ್ಲ. ಇವರನ್ನು 'ಪ್ರಾಗ್ಮಾಟಿಂಕ್ ಫಿಲಾಸಫರ್ಸ್' ಎನ್ನುತ್ತಾರೆ.

ಹಳೆಯ ಮಾತೊಂದಿದೆ: ‘ತತ್ವಶಾಸ್ತ್ರದಿಂದ ತರಕಾರಿ ಬೇಯದು’ ಎಂದು! ಅದೇನೇ ಇರಲಿ, ಆರ್ಥಿಕತೆಗೂ ಆರೋಗ್ಯಕ್ಕೂ ಸಾಕಷ್ಟು ಸಾಮ್ಯವನ್ನು ಇಂದು ಸಾಕಷ್ಟು ಲಭ್ಯವಿರುವ ಜಾಗತಿಕ ಮಟ್ಟದ ಅಂಕಿ ಅಂಶಗಳಲ್ಲಿ ಗುರುತಿಸಬಹುದು. ‘ದಿ ಎಕಾನಮಿಸ್ಟ್’ ಪ್ರತಿ ವರ್ಷ ಹೊರತರುವ ‘ಪಾಕೆಟ್ ವರ್ಲ್ಡ್‌ ಇನ್ ಫಿಗರ್ಸ್’ ಗಮನಿಸಿದರೆ ಇಂತಹ ವಿಷಯಗಳು ಸ್ಪಷ್ಟವಾಗುತ್ತವೆ. ಕೆಲವರು ಹೇಳುವ ಪ್ರಕಾರ ಬದುಕಿನ ಸಂತೋಷವು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಅವಲಂಬಿಸಿದೆ.

ಭಾರತದ ಸರಾಸರಿ ಆದಾಯ ಜಗತ್ತಿನ ಸರಾಸರಿಯ ಶೇ 18ರಷ್ಟಿದೆ. ಹಾಗಾಗಿ ನಾವು ಜಗತ್ತಿನ ರಾಷ್ಟ್ರಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿ – 135ನೇ ಸ್ಥಾನದಲ್ಲಿದ್ದೇವೆ. ಒಟ್ಟು ಆರ್ಥಿಕತೆಯಲ್ಲಿ ನಾವು 6ನೇ ಬಲಿಷ್ಟ ರಾಷ್ಟ್ರವಾದರೂ, 135 ಕೋಟಿ ಜನ ಇರುವುದರಿಂದ ತಲಾವಾರು ಆದಾಯ ಸುಮಾರು 2000 ಡಾಲರ್‌ನಷ್ಟು. ಜಗತ್ತಿನ ಒಟ್ಟು ಸರಾಸರಿ ಆದಾಯ ಸುಮಾರು 12 ಸಾವಿರ ಡಾಲರ್. ತಲಾವಾರು ಆದಾಯದ ಲೆಕ್ಕಕ್ಕೂ, ನಾವು ನಿತ್ಯ ಪಡೆಯುವ ಆಹಾರದ ಕ್ಯಾಲೊರಿ, ಪ್ರೊಟೀನ್ ಮತ್ತು ಕೊಬ್ಬಿಗೂ ನೇರವಾದ ಸಂಬಂಧವಿದೆ. ಆದಾಯ ಹೆಚ್ಚಿದಂತೆ ಇವುಗಳ ಪ್ರಮಾಣ ಹೆಚ್ಚುವುದನ್ನು ಗಮನಿಸಬಹುದು.

ನಮ್ಮ ಸರಾಸರಿ ಕ್ಯಾಲೊರಿ ಬಳಕೆ ಸುಮಾರು 2200 ಕ್ಯಾಲೊರಿ ಕಂಡುಬಂದರೆ, ಮುಂದುವರಿದ ರಾಷ್ಟ್ರಗಳಲ್ಲಿ 3000ದಿಂದ 3500 ಕ್ಯಾಲೊರಿ ದಕ್ಕಿಸಿಕೊಳ್ಳುತ್ತಾರೆ. ಭಾರತೀಯರ ಸರಾಸರಿ ವಯೋಮಾನ (life expectancy) ಗಂಡಸರದ್ದು 67 ಮತ್ತು ಮಹಿಳೆಯರದ್ದು 70 ವರ್ಷಗಳಾದರೆ, ಜಗತ್ತಿನ ಸರಾಸರಿ ಪ್ರಮಾಣ ಗಂಡಸರದ್ದು 70 ವರ್ಷ ಹಾಗೂ ಮಹಿಳೆಯರದ್ದು 74 ವರ್ಷ. ಜಗತ್ತಿನ ಹೆಚ್ಚು ಕಾಲ ಬದುಕುವ ಮೇಲ್ದರ್ಜೆಯ ನೂರು ದೇಶಗಳಲ್ಲಿ ಭಾರತಕ್ಕೆ ಸ್ಥಾವವಿಲ್ಲ; ಆದರೆ ನೂರನೇ ಸ್ಥಾನದಲ್ಲಿ ಸಿರಿಯಾ ದೇಶವಿದೆ! ಅಲ್ಲಿ ಸರಾಸರಿ ವಯೋಮಾನ ಸುಮಾರು 76 ವರ್ಷಗಳು. ಈ ಪ್ರಮಾಣ ಚೀನಾದಲ್ಲಿ 78 ವರ್ಷ ಮತ್ತು ಶ್ರೀಲಂಕಾದಲ್ಲಿ 77 ವರ್ಷ.

ಹೀಗಾಗಿ ನಮ್ಮ ಆದಾಯಕ್ಕೂ, ಆರೋಗ್ಯಕ್ಕೂ ನೇರ ಸಂಬಂಧಗಳನ್ನು ಕಾಣಬಹುದು. ನಮ್ಮ ದೇಶದಲ್ಲಿ ದುಡಿಯುವ ಸುಮಾರು 59 ಕೋಟಿ ಜನರಲ್ಲಿ ಸುಮಾರು 40 ಕೋಟಿ ಜನರು ತಿಂಗಳಿಗೆ 7500 ರೂಪಾಯಿಗೂ ಕಡಿಮೆ ದುಡಿಯುತ್ತಾರೆಂದು ಕೇಂದ್ರ ಸರ್ಕಾರದ ‘ಲೇಬರ್ ಬ್ಯೂರೋ’ ವರದಿ ಹೇಳುತ್ತಿದೆ. ಈ ಆದಾಯದಲ್ಲಿ ಅನ್ನಭಾಗ್ಯದ ಅನ್ನ ಮತ್ತು ಏಕದಳ ಧಾನ್ಯಗಳಾದ ಗೋಧಿಯಂತಹ ಧಾನ್ಯಗಳಿಂದಲೇ ಹೆಚ್ಚು ಕ್ಯಾಲೊರಿ ಪಡೆದುಕೊಳ್ಳಬೇಕಾಗುತ್ತದೆ; ಕೈಗೆಟುಕದ ಎಣ್ಣೆಕಾಳು, ಬೇಳೆಕಾಳು, ಮೀನು, ಮಾಂಸ ಮೊಟ್ಟೆ, ಹಣ್ಣು–ತರಕಾರಿಗಳನ್ನು ಹೆಚ್ಚು ಬಳಸಲು ಕಷ್ಟಸಾಧ್ಯ.

ಹೀಗಾಗಿ ನಾವು ಜಗತ್ತಿನ ಹಸಿವಿನ ಸೂಚ್ಯಂಕದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಮೂರು ಸ್ಥಾನದಷ್ಟು ಕೆಳಗೆ ಬಿದ್ದಿದ್ದೇವೆ. ಕಳೆದ ವರ್ಷ ಇದ್ದ ನೂರನೇ ಸ್ಥಾನ, ಈ ವರ್ಷ ನೂರಾಮೂರನೇ ಸ್ಥಾನಕ್ಕೆ ಏರಿದೆ. ‘ಸ್ಟಂಟಿಂಗ್’ ಅಂದರೆ, ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವವರ ಪ್ರಮಾಣ ಶೇ 38ರಷ್ಟು 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬಂದಿದೆ. ಆರ್ಥಿಕ ಅಭಿವೃದ್ಧಿಗೂ ಬಡತನದ ನಿರ್ವಹಣೆಗೂ ಆರೋಗ್ಯಕರ ಬದುಕಿಗೂ ಸಂಬಂಧಗಳಿರುವುದನ್ನು ಈ ಅಂಕಿ–ಅಂಶಗಳಿಂದ ಸ್ಪಷ್ಟವಾಗುತ್ತದೆ. ಬಡತನಕ್ಕೆ ಕಾರಣವನ್ನು ಹುಡುಕಿದಾಗ ವಿದ್ಯಾಭ್ಯಾಸದ ಕೊರತೆ ಎನ್ನುವುದು ತಿಳಿಯುತ್ತದೆ.

ವಿದ್ಯಾಭ್ಯಾಸದ ಕೊರತೆಯಿಂದ ಕೌಶಲದ ಕೊರತೆ, ಹೆಚ್ಚು ಗಳಿಕೆಯ ಅಸಾಧ್ಯತೆ, ಪೌಷ್ಟಿಕಾಂಶದ ಕೊರತೆ, ಪೌಷ್ಟಿಕಾಂಶದ ಕೊರತೆಯಿಂದ ಅನಾರೋಗ್ಯ, ಅನಾರೋಗ್ಯದಿಂದ ಆಸ್ಪತ್ರೆಯ ಖರ್ಚು, ಆಸ್ಪತ್ರೆಯ ಖರ್ಚಿನಿಂದ ಇನ್ನೂ ಬಡತನ – ಹೀಗೊಂದು ವಿಷವರ್ತುಲದಲ್ಲಿ ನಾವು ಸಿಕ್ಕಿಕೊಂಡಂತಾಗಿದೆ. ಶಿಕ್ಷಣ ಮತ್ತು ಆರೋಗ್ಯವನ್ನು ಸರ್ಕಾರವು ಸಮರ್ಪಕವಾಗಿ ನಿರ್ವಹಿಸಿದಲ್ಲಿ, ಜನಸಾಮಾನ್ಯರು ಈ ವರ್ತುಲದಿಂದ ಬಿಡುಗಡೆ ಪಡೆಯಲು ಸಾಧ್ಯವಾಗುವುದು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !