ಕೆ‍ಪಿಎಸ್‌ಸಿ ನೌಕರನ ಸೋಗಿನಲ್ಲಿ ₹ 35 ಲಕ್ಷ ಲೂಟಿ

7
ಅಬಕಾರಿ, ಮೀನುಗಾರಿಕೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ

ಕೆ‍ಪಿಎಸ್‌ಸಿ ನೌಕರನ ಸೋಗಿನಲ್ಲಿ ₹ 35 ಲಕ್ಷ ಲೂಟಿ

Published:
Updated:

ಬೆಂಗಳೂರು: ಮೀನುಗಾರಿಕೆ ಹಾಗೂ ಅಬಕಾರಿ ‌ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಗೆ ₹ 35 ಲಕ್ಷ ಪಡೆದು ವಂಚಿಸಿದ ಆರೋಪದಡಿ ತಿಮ್ಮೇಶ್ ಎಂಬುವರ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.

‘ನಾನು ಕೆಪಿಎಸ್‌ಸಿಯ (ಕರ್ನಾಟಕ ಲೋಕಸೇವಾ ಆಯೋಗ) ಸ್ಕ್ಯಾನಿಂಗ್ ವಿಭಾಗದಲ್ಲಿ ಮೇಲ್ವಿಚಾರಕನಾಗಿದ್ದೇನೆ. ಹಣ ಕೊಟ್ಟರೆ ವಿವಿಧ ಇಲಾಖೆಗಳಲ್ಲಿ ನಿಮಗೆ ಉನ್ನತ ಹುದ್ದೆಗಳನ್ನು ಕೊಡಿಸುತ್ತೇನೆ’ ಎಂದು ನಂಬಿಸಿರುವ ತಿಮ್ಮೇಶ್, ವಿಜಯಪುರದ ಪಿ.ಬಿ.ಸದಾಶಿವಪ್ಪ ಎಂಬುವರಿಂದ ₹ 25 ಲಕ್ಷ ಹಾಗೂ ತುಮಕೂರಿನ ಎಂ.ಎಸ್.ಮಧು ಎಂಬುವರಿಂದ ₹ 10 ಲಕ್ಷ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.

‘ಅಬಕಾರಿ ಉಪನಿರೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ನನ್ನ ಮಗ ಪಿ.ಎಸ್.ರಾಘವೇಂದ್ರ, 2017ರ ಏ.30ರಂದು ದಾವಣಗೆರೆಯಲ್ಲಿ ಲಿಖಿತ ಪರೀಕ್ಷೆ ಬರೆದಿದ್ದ. ಅದೇ ವೇಳೆ ಬೆಂಗಳೂರಿನಲ್ಲಿ ಕೆಲವರು ಹಣ ಪಡೆದು ನೇಮಕಾತಿ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದರಿಂದ ನಾವೂ ನಗರಕ್ಕೆ ಬಂದೆವು. ಗಾಂಧಿನಗರದ ‘ಶೀತಲ್ ಲಾಡ್ಜ್‌’ನಲ್ಲಿ  ಉಮೇಶ್ ಗೌಡ ಹಾಗೂ ತಿಮ್ಮೇಶ್ ಎಂಬುವರನ್ನು ಭೇಟಿಯಾಗಿ ಕೆಲಸದ ವಿಚಾರವಾಗಿ ಮಾತುಕತೆ ನಡೆಸಿದ್ದೆವು’ ಎಂದು ಸದಾಶಿವಪ್ಪ ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದರು.

‘₹ 35 ಲಕ್ಷ ಕೊಟ್ಟರೆ ಕೆಲಸ ಮಾಡಿಕೊಡುವುದಾಗಿ ಉಮೇಶ್ ಗೌಡ ಹೇಳಿ ಕಳುಹಿಸಿದ್ದರು. ಸ್ವಲ್ಪ ಸಮಯದ ಬಳಿಕ ನಮಗೆ ಕರೆ ಮಾಡಿದ್ದ ತಿಮ್ಮೇಶ್, ‘ನನ್ನ ಕಡೆ ಬಂದರೆ ₹ 25 ಲಕ್ಷಕ್ಕೇ ನಿಮ್ಮ ಕೆಲಸ ಆಗುತ್ತದೆ’ ಎಂದರು. ಅಂತೆಯೇ ಹಣ ಹೊಂದಿಸಿಕೊಂಡು ಜೂನ್ ಮೊದಲ ವಾರದಲ್ಲಿ ಅವರನ್ನು ಗಾಂಧಿನಗರದ ‘ರಾಮಕೃಷ್ಣ ಹೋಟೆಲ್‌’ನಲ್ಲಿ ಭೇಟಿಯಾಗಿದ್ದೆವು. ಅಲ್ಲಿ ನನ್ನ ಮಗನಿಗೆ ಒಎಂಆರ್ ಶೀಟ್‌ ಕೊಟ್ಟು ಭರ್ತಿ ಮಾಡಿಸಿಕೊಂಡ ಅವರು, ₹ 25 ಲಕ್ಷ ಪಡೆದರಕೊಂಡರು. ಆದಷ್ಟು ಬೇಗ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿ ಹೋಗಿದ್ದರು. ಆದರೀಗ ಕೆಲಸವನ್ನೂ ಕೊಡಿಸದೆ, ಹಣವನ್ನೂ ಮರಳಿಸದೆ ಸತಾಯಿಸುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.

‘ಉಮೇಶ್ ಗೌಡ ಹಾಗೂ ತಿಮ್ಮೇಶ್ ಅವರು ವಿಜಯಪುರ ಜಿಲ್ಲೆಯ ನೀಲಮ್ಮ ಬಿರಾದರ್, ಸಿದ್ದು ನಿರಗಿ, ಪಾರ್ವತಯ್ಯ ಹಿರೇಮಠ ಎಂಬುವರಿಗೂ ಇದೇ ರೀತಿ ವಂಚನೆ ಮಾಡಿದ್ದಾರೆ. ಹೀಗಾಗಿ, ಆರೋಪಿಗಳನ್ನು ‌ಪತ್ತೆ ಮಾಡಿ ಕ್ರಮ ಜರುಗಿಸಬೇಕು’ ಎಂದು ಸದಾಶಿವಪ್ಪ ಮನವಿ ಮಾಡಿದ್ದಾರೆ.

ತಿಮ್ಮೇಶ್ ಯಾರೆಂಬುದು ಇನ್ನೂ ಗೊತ್ತಾಗಿಲ್ಲ. ದೂರುದಾರರಿಗೆ ವಿಧಾನಸಭಾ ಸಚಿವಾಲಯದ ನಕಲಿ ಐಡಿ ಕಾರ್ಡ್ ತೋರಿಸಿ ತಾನೊಬ್ಬ ಪ್ರಭಾವಿ ಎಂದು ಹೇಳಿಕೊಂಡಿದ್ದಾನೆ. ಆರೋಪಿಯ ಶೋಧ ನಡೆಯುತ್ತಿದೆ ಎಂದು ಉಪ್ಪಾರಪೇಟೆ ಪೊಲೀಸರು ಹೇಳಿದ್ದಾರೆ.

ಹೆಸರಿರಲಿಲ್ಲ
‘ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಹುದ್ದೆಗೆ ಪರೀಕ್ಷೆ ಬರೆದು ಪಾಸಾಗಿದ್ದೆ. ಸಂದರ್ಶನಕ್ಕೆ ಆಯ್ಕೆಯಾಗಿದ್ದವರ ಪಟ್ಟಿಯಲ್ಲಿ ನನ್ನ ಹೆಸರಿರಲಿಲ್ಲ. ಆಗ ಪರಿಚಿತರ ಸಲಹೆಯಂತೆ ತಿಮ್ಮೇಶ್ ಅವರನ್ನು ಸಂಪರ್ಕಿಸಿದ್ದೆ. 2017 ಡಿ.31ರಂದು ₹ 10 ಲಕ್ಷ ಪಡೆದುಕೊಂಡ ಅವರು, ‘ನಿಮ್ಮ ಕೆಲಸ ಆಯಿತು ಎಂದುಕೊಳ್ಳಿ’ ಎಂದಿದ್ದರು. ಆದರೆ, ಅಂತಿಮ ಆಯ್ಕೆಪಟ್ಟಿಯಲ್ಲಿ ನನ್ನ ಹೆಸರಿರಲಿಲ್ಲ. ಈ ಬಗ್ಗೆ ವಿಚಾರಿಸಿದರೆ ಏನೇನೋ ಸಬೂಬು ಹೇಳುತ್ತಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ಮೊಬೈಲ್ ಸ್ವಿಚ್ಡ್ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ’ ಎಂದು ತುಮಕೂರಿನ ಮಧು ದೂರಿನಲ್ಲಿ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !