ಮುಂಗುಸಿಗಳ ಚಿನ್ನಾಟ...

ಮಂಗಳವಾರ, ಜೂನ್ 18, 2019
23 °C

ಮುಂಗುಸಿಗಳ ಚಿನ್ನಾಟ...

Published:
Updated:
Prajavani

ಅವತ್ತು ನಾನು ಧಾರವಾಡ ಜಿಲ್ಲೆಯ ಕಲಘಟಕಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮಕ್ಕೆ ಭೇಟಿಕೊಟ್ಟಿದ್ದೆ. ಬೆಳಗಿನ ಬೆಳಕಿನಲ್ಲಿ ಹಕ್ಕಿಗಳ ಫೋಟೊ ತೆಗೆಯುವುದು ನನ್ನ ಉದ್ದೇಶ. ನಸುಕಿನ 6 ಗಂಟೆಯ ಸುಮಾರಿಗೆ ಪುಟ್ಟ ಕ್ಯಾಮೆರಾ ಹೆಗಲಿಗೇರಿಸಿಕೊಂಡು, ಊರಿನ ಹೊರವಲಯಕ್ಕೆ ನನ್ನ ಸವಾರಿ ನಡೆಯಿತು. ಸುಮ್ಮನೆ ಹೋಗುತ್ತಿದ್ದ ನನ್ನ ಕಾಲುಗಳಿಗೆ ಹೊಲದ ಮೂಲೆಯೊಂದರಲ್ಲಿ ಆದ ಅಲುಗಾಟ ತಡೆಯೊಡ್ಡಿತು. ನನ್ನ ಊಹೆ ತಪ್ಪಾಗಲಿಲ್ಲ. ಅಲ್ಲಿ ಎರಡು ಮುಂಗುಸಿಗಳು ಗುದ್ದಾಟಕ್ಕೆ ನಿಂತಿದ್ದಂತೆ ಕಂಡವು.

ಒಂದು ಕೆಳಗೆ, ಮತ್ತೊಂದು ಅದರ ಮೇಲೆ ಸವಾರಿ ಮಾಡುತ್ತಾ, ಕಿಚಿ ಕಿಚಿ... ಕಿರುಚಾಡುತ್ತಿದ್ದವು. ಅವಕ್ಕೆ ಇಹಲೋಕದ ಪರಿವೆ ಇರಲಿಲ್ಲ. ಇಷ್ಟಕ್ಕೂ ಕಾಡಲ್ಲಿ ಇಹ ಲೋಕದ ಪರಿವೆ ಏಕಿರಬೇಕು? ಅವುಗಳದ್ದೇ ಜಾಗವಲ್ಲವೇ

ಸಾಮಾನ್ಯವಾಗಿ ಮುಂಗುಸಿಗಳು ಹಾವುಗಳೊಂದಿಗೆ ಕಾದಾಡುವಾಗ ಹೀಗೆ ಚೀರಾಡುವುದನ್ನು ನೋಡಿದ್ದೆ. ಇಲ್ಲೂ ಹಾಗೇ ಆಗಿರಬೇಕು ಎಂದುಕೊಂಡು ಪೊದೆಗಳ ಮರೆಯಲ್ಲಿ ಅವಿತು ಕುಳಿತು, ಹೆಗಲೇರಿದ ಕ್ಯಾಮೆರಾ ಇಳಿಸಿದೆ. ಲೆನ್ಸ್‌ ಕ್ಯಾಪ್ ತೆರೆದು, ಮುಂಗುಸಿಗಳತ್ತ ಕ್ಯಾಮೆರಾ ಗುರಿ ಇಟ್ಟು, ಜೂಮ್ ಮಾಡಿದೆ. ನಾನು ಅಂದುಕೊಂಡಂತೆ ಅದು ಮುಂಗುಸಿಗಳ ಜಗಳ ಆಗಿರಲಿಲ್ಲ; ಅದು ಅವುಗಳ ಸರಸ ಸಲ್ಲಾಪ, ಮಿಲನೋತ್ಸವವಾಗಿತ್ತು!

ಕುತೂಹಲ ಹೆಚ್ಚಾಯಿತು. ಇನ್ನಷ್ಟು ಹತ್ತಿರದಿಂದ ಫೋಟೊ ತೆಗೆಯಬೇಕೆನ್ನಿಸಿತು. ಅವುಗಳ ಸಮೀಪಕ್ಕೆ ಹೋಗೋಣ ಎಂದುಕೊಂಡೆ. ಆದರೆ, ಮುಂಗುಸಿಗಳು ಮಾತ್ರವಲ್ಲ ಕಾಡುಪ್ರಾಣಿಗಳು ಬಹಳ ಸೂಕ್ಷ್ಮಗ್ರಾಹಿಗಳು. ಸಣ್ಣ ಸದ್ದಾದರೂ ಕುತ್ತಿಗೆ ಸರಕ್ ಸರಕ್‌ ಎಂದು ಅಲ್ಲಾಡಿಸಿಕೊಂಡು ಓಡಿಬಿಡುತ್ತವೆ. ಅದಕ್ಕೆ ನಾನೇ ಒಂದು ಕಡೆ ಠಿಕಾಣಿ ಹಾಕಿದೆ. ಕ್ಯಾಮೆರಾ ಫಿಕ್ಸ್ ಮಾಡಿಕೊಂಡೆ. ಶುರುವಾಯ್ತು ‘ಫ್ರೇಮ್ ಬೈ ಫ್ರೇಮ್‌’ ಫೋಟೊ ತೆಗೆಯುತ್ತಿದ್ದೆ. ಆ ದೃಶ್ಯದಲ್ಲಿ ಒಂದು ಮುಂಗುಸಿ ಮತ್ತೊಂದರ ಮೇಲೆ ಹತ್ತಿ, ಮೂತಿಗೆ ತಿವಿಯಿತ್ತಿತ್ತು. ಅವುಗಳ ಭಾವ, ಭಂಗಿ, ನೋಟ, ನಾಲಿಗೆ ತಿರುಗಿಸುವ, ಹಲ್ಲು ಕಿರಿಯುವುದನ್ನು ನೋಡುತ್ತಿದ್ದರೆ ‘ಸರಸಕೆ ಬಾರೇ ಪ್ರೇಮ ಸಖಿ’ ಎಂದು ಹಾಡಿಗೆ ನೃತ್ಯ ಮಾಡಿದಂತಿತ್ತು. ಅವುಗಳ ಕ್ಷಣ ಕ್ಷಣದ ಭಂಗಿಗಳು ಕ್ಯಾಮೆರಾದಲ್ಲಿ ಸೆರೆಯಾದವು.

ಇಷ್ಟೆಲ್ಲ ಕಂಡ ಮೇಲೆ ಮನಸ್ಸು ಕೇಳುತ್ತದೆಯೇ. ಅವುಗಳ ಸಮೀಪಕ್ಕೆ ಹೋಗಲೇಬೇಕೆಂದು ಹಟ ಹಿಡಿಯಿತು. ಹಾಗೇ ನೆಲದ ಮೇಲೆ ತೆವಳುತ್ತಾ ಮುಂದೆ ಹೋದೆ. ಒಂದು ಮುಂಗುಸಿಗೆ ತೆವಳುವ ಶಬ್ದ  ಕೇಳಿಸಿತೇನೋ, ಅದು ನನ್ನತ್ತ ದುರುಗುಟ್ಟಿ ನೋಡಿತು. ಶಬ್ದವೇಧಿ ಬಾಣದಂತೆ, ಕತ್ತನ್ನು ಅತ್ತಿತ್ತ ಹೊರಳಿಸಿತು. ಬಿರಿದ ಕಣ್ಣುಗಳನ್ನು ನೋಡಿ, ‘ಓ... ಇವರು ಜಾಗ ಬಿಟ್ರಪ್ಪಾ’ ಎಂದುಕೊಂಡೆ. ಆದರೆ, ಇನ್ನೊಂದು ಮುಂಗುಸಿ, ಅದರ ನೋಟವನ್ನೇ ಬದಲಿಸಿ, ಸರಸಕೆ ಕರೆಯಿತೇನೋ... ಮತ್ತೆ ‘ಶೋ’ ಮುಂದುವರಿಯಿತು.

ಎಳೆ ಬಿಸಿಲು ಮೆಲ್ಲಗೆ ಕಾಲಿಡಲು ಶುರು ಮಾಡಿತು. ತಂಗಾಳಿಯೂ ಜತೆಯಾಯಿತು. ಚಿರಿ ಚಿರಿ ಎಂದು ತರಗೆಲೆಗಳ ಶಬ್ದವೂ ನನ್ನ ಚಿತ್ರೀಕರಣಕ್ಕೆ ಹಿನ್ನೆಲೆ ಸಂಗೀತದಂತಿತ್ತು.

ಅಲ್ಲಿವರೆಗೂ ಒಂದು ಮುಂಗುಸಿ ಶಬ್ದ ಆಲಿಸುತ್ತಿದ್ದರೆ, ಈಗ ಎರಡೂ ಕಣ್ಣರಳಿಸಿ ನೋಡಲಾರಂಭಿಸಿದವು. ಛಾಯಾಗ್ರಹಣ ಮುಂದುವರಿದಿತ್ತು. ಒಂದೆರಡು ತುಣುಕು ವಿಡಿಯೊ ರೆಕಾರ್ಡ್ ಮಾಡಿದೆ. ನೋಡ ನೋಡುತ್ತಿರುವಂತೆಯೇ, ಕ್ಯಾಮೆರಾ ಎದುರಿನಿಂದ ಎರಡೂ ಮುಂಗುಸಿಗಳು ಸದ್ದಿಲ್ಲದೇ ಸರಿದ ಹೋದವು. ಪಾತ್ರಧಾರಿಗಳು ಕೈಕೊಟ್ಟಿದ್ದರಿಂದಾಗಿ ಶೃಂಗಾರಮಯ ಸಿನಿಮಾದ ಚಿತ್ರೀಕರಣ ನಿಂತಿತು.

ಬಹುಶಃ, ಮುಂಗುಸಿಗಳಿಗೆ ಇದು ಪ್ರಣಯದ ಕಾಲ ಎನ್ನಿಸುತ್ತದೆ. ಅದಕ್ಕೆ ಈ ಕಾಡಿನಲ್ಲಿ ವಿಹರಿಸಲು ಬಂದಿರಬಹುದು. ನಾನೇನಾದರೂ ತೊಂದರೆ ಮಾಡಿಬಿಟ್ಟನೇನೋ ಎಂದು ಮನಸ್ಸು ಚೂರು ಕಸಿವಿಸಿಗೊಂಡಿದ್ದಂತೂ ಹೌದು.

ಚಿತ್ರಗಳು: ಲೇಖಕರವು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !