ಸಮಾಜದಲ್ಲಿ ಆರ್ಥಿಕ ಸ್ಥಿರತೆ, ಸಮಾನತೆಗೆ ಒತ್ತು: ಪ್ರಿಯಾಂಕ್‌ ಖರ್ಗೆ

ಸೋಮವಾರ, ಮಾರ್ಚ್ 25, 2019
33 °C
ಬಿಳಿಗಿರಿರಂಗನಬೆಟ್ಟ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಸಮಾಜದಲ್ಲಿ ಆರ್ಥಿಕ ಸ್ಥಿರತೆ, ಸಮಾನತೆಗೆ ಒತ್ತು: ಪ್ರಿಯಾಂಕ್‌ ಖರ್ಗೆ

Published:
Updated:
Prajavani

ಚಾಮರಾಜನಗರ: ‘ಸಮಾಜದಲ್ಲಿ ಆರ್ಥಿಕ ಸ್ಥಿರತೆ ಮತ್ತು ಸಮಾನತೆ ತರುವ ನಿಟ್ಟಿನಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ಬದಲಾವಣೆ ತರಲಾಗಿದೆ’ ಎಂದು ಸಮಾಜಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಶನಿವಾರ ಅಭಿಪ್ರಾಯಪಟ್ಟರು.

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಹೊಸದಾಗಿ ನಿರ್ಮಿಸಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ, ಹಾಸ್ಟೆಲ್‌ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಲಾಖೆಯ ಯೋಜನೆಗಳಲ್ಲಿ  ಬದಲಾವಣೆ ತಂದಿದ್ದೇವೆ. ಸಮುದಾಯಗಳಲ್ಲಿ ಆರ್ಥಿಕ ಸ್ಥಿರತೆ ಉಂಟು ಮಾಡುವುದಕ್ಕೆ ಹೆಚ್ಚು ಮುತುವರ್ಜಿ ತೋರುತ್ತಿದ್ದೇವೆ‌. ಸಮಾನತೆಯ ಹಾಗೂ ಆರ್ಥಿಕವಾಗಿ ದೃಢವಾದ ಸಮಾಜ ಕಟ್ಟಲು ಶಿಕ್ಷಣವೇ ಬುನಾದಿ. ಹಾಗಾಗಿ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡುತ್ತಿದ್ದೇವೆ’ ಎಂದರು.

‘ದಲಿತರು ಮಾತ್ರವಲ್ಲದೆ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಲಾಗುತ್ತಿದೆ. ಇಲಾಖೆಯ ಅಡಿಯಲ್ಲಿ 820 ಇಂಗ್ಲಿಷ್‌ ಮಾಧ್ಯಮದ ವಸತಿ ಶಾಲೆಗಳು ಹಾಗೂ 3,200 ಹಾಸ್ಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಾದ್ಯಂತ 4.5 ಲಕ್ಷ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದೆ’ ಎಂದರು.

ಜೀವನೋಪಾಯಕ್ಕೆ ಒತ್ತು: ಬಿಳಿಗಿರಿರಂಗನ ಬೆಟ್ಟದ 660 ರೈತರಿಗೆ ತಮ್ಮದೇ ಆದ ಕಾಫಿ ಬ್ರ್ಯಾಂಡ್‌ ರೂಪಿಸಲು ಇಲಾಖೆ ಸಹಾಯ ಮಾಡಿದೆ. ಇದೇ ಮಾದರಿಯಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ರೈತರಿಗೆ ಜೀವನೋಪಾಯವನ್ನು ಕಂಡುಕೊಳ್ಳಲು ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ₹ 15 ಕೋಟಿ ವೆಚ್ಚದಲ್ಲಿ ತರಬೇತಿ ನೀಡುವ ಕೆಲಸ ಮಾಡುತ್ತಿದ್ದೇವೆ’ ಎಂದರು.

ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು, ‘₹ 17 ಕೋಟಿ ವೆಚ್ಚದಲ್ಲಿ ವಸತಿ ಶಾಲೆಯನ್ನು ನಿರ್ಮಿಸಲಾಗಿದೆ. ಸಂಸ್ಥೆಯು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ನವೋದಯ ಶಾಲೆಗಳ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಆಶಿಸಿದರು.

ಸಂಸದ ಆರ್‌. ಧ್ರುವನಾರಾಯಣ ಮಾತನಾಡಿ, ‘ಜಿಲ್ಲೆಯ 16 ಹೋಬಳಿಗಳಲ್ಲಿ 19 ವಸತಿಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಯಾವುದೇ ದೇಶ, ರಾಜ್ಯ ಅಥವಾ ಜಿಲ್ಲೆ ಪ್ರಗತಿ ಹೊಂದಬೇಕಾದರೆ ಅಲ್ಲಿ ಶೈಕ್ಷಣಿಕ ಅಭಿವೃದ್ಧಿ ಆಗಬೇಕು’ ಎಂದು ಹೇಳಿದರು.

ಸೋಲಿಗರನ್ನೂ ಸೇರಿಸಿ: ‘ಸದ್ಯ ಜೇನು ಕುರುಬ ಹಾಗೂ ಕಾಡು ಕುರುಬ ಸಮುದಾಯದವರನ್ನು ಮಾತ್ರ ಪ್ರಾಚೀನ ಬುಡಕಟ್ಟು ಸಮುದಾಯ ಎಂದು ಗುರುತಿಸಲಾಗುತ್ತಿದೆ. ಈ ಪಟ್ಟಿಯಲ್ಲಿ ಸೋಲಿಗರನ್ನೂ ಸೇರಿಸಬೇಕು. ಅವರು ಕೂಡ ತಲೆತಲಾಂತರದಿಂದ ಅರಣ್ಯದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಈ ರೀತಿ ಗುರುತಿಸುವುದರಿಂದ ಅವರಿಗೆ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

ಆಶ್ರಮ ಶಾಲೆಗೆ ಶಿಕ್ಷಕರನ್ನು ನೇಮಿಸಿ: ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಮಾತನಾಡಿ, ‘ಮೈತ್ರಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಹೋಬಳಿ ಮಟ್ಟದಲ್ಲಿ 1,000 ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. 1ರಿಂದ 12ರ ವರೆಗೆ ಶಿಕ್ಷಣ ನೀಡುವ ಕರ್ನಾಟಕ ಪಬ್ಲಿಕ್‌ ಶಾಲೆಯನ್ನು ತೆರೆಯುವ ಯೋಜನೆಯನ್ನೂ ಘೋಷಿಸಲಾಗಿದೆ. ವಸತಿ ಶಾಲೆಗಳಲ್ಲಿ ಉತ್ತಮವಾದ ಗುಣಮಟ್ಟ ಸಿಗುತ್ತಿದೆ. ಹೋಬಳಿಮಟ್ಟದಲ್ಲಿ ಒಂದು ವಸತಿ ಶಾಲೆ ತೆರೆಯುವುದರಿಂದ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಬಹುದು’ ಎಂದರು.

‘ಜಿಲ್ಲೆಯ ಆಶ್ರಮ ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲ. ಇರುವ ಬೋಧಕರಿಗೆ ಸರಿಯಾದ ತರಬೇತಿ ಇಲ್ಲ. ರಾಜ್ಯ ಸರ್ಕಾರ ಈ ಶಾಲೆಗಳ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಮನವಿ ಮಾಡಿದರು.

ಆದಿವಾಸಿಗಳಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಬ್ರ್ಯಾಂಡ್‌ಗೆ ಚಾಲನೆ: ಸಮಾಜ ಕಲ್ಯಾಣ ಇಲಾಖೆ, ಕಾಫಿ ಬೋರ್ಡ್‌ ಸಹಭಾಗಿತ್ವದಲ್ಲಿ ಶ್ರೀ ಬಿಳಿಗಿರಿರಂಗನಾಥಸ್ವಾಮಿ ಸೋಲಿಗರ ಸಂಸ್ಕರಣಾ ಸಂಘ ಸಿದ್ಧಪಡಿಸಿರುವ ‘ಅಡವಿ’ ಕಾಫಿ ಬ್ರ್ಯಾಂಡ್‌ಗೆ ಪ್ರಿಯಾಂಕ್‌ ಖರ್ಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಕೆಲವು ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ವಿತರಿಸಲಾಯಿತು. 

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಯೋಗೇಶ್‌, ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾವತಿ, ಯಳಂದೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಿರಂಜನ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ, ಉಪಾಧ್ಯಕ್ಷ ಶ್ರೀನಿವಾಸ್‌, ಕಾಂಗ್ರೆಸ್‌ ಮುಖಂಡರಾದ ಜಯಣ್ಣ, ಆರ್‌.ಬಾಲರಾಜು, ಎ.ಆರ್‌.ಕೃಷ್ಣಮೂರ್ತಿ ಇತರರು ಇದ್ದರು.

ವಿಶೇಷ ಪ್ಯಾಕೇಜ್‌ಗೆ ಮನವಿ

ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಅವರು ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು.

‘ಬುಡಕಟ್ಟು ಜನರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಮತ್ತು ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಹಕ್ಕುಪತ್ರ ಪಡೆದವರನ್ನು ಅರಣ್ಯದಿಂದ ಒಕ್ಕಲೆಬ್ಬಿಸುವುದನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ ಅವರು, ‘ಏನೇನು ಕೆಲಸಗಳು ಆಗಬೇಕು ಎಂಬುದರ ಬಗ್ಗೆ ಸವಿವರವಾದ ವರದಿಯನ್ನು ಕೊಡಿ. ಎಲ್ಲವನ್ನೂ ಹಂತ ಹಂತವಾಗಿ ಬಗೆಹರಿಸಲು ಯತ್ನಿಸುತ್ತೇನೆ’ ಎಂದರು.

‘ಆದಿವಾಸಿಗಳನ್ನು ಅರಣ್ಯದಿಂದ ಒಕ್ಕಲೆಬ್ಬಿಸುವುದನ್ನು ತಡೆಯುವ ನಿಟ್ಟಿನಲ್ಲಿ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಈಗಾಗಲೇ ಸಭೆ ನಡೆಸಿ ಚರ್ಚಿಸಿದ್ದಾರೆ. ವಿಶೇಷ ಸಮಿತಿ ರಚಿಸುವ ಪ್ರಸ್ತಾವನೆಯೂ ಇದೆ. ಸರ್ಕಾರ ಈ ನಿಟ್ಟಿನಲ್ಲಿ ಎಲ್ಲ ಕ್ರಮ ಕೈಗೊಳ್ಳಲಿದೆ’ ಎಂದರು.

ಪ್ರತ್ಯೇಕ ವಿಭಾಗ ಮಾಡಲು ಸಲಹೆ

‘ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ನವೋದಯ ಶಾಲೆಗಳು ಹಾಗೂ ಕೇಂದ್ರೀಯ ವಿದ್ಯಾಲಯಗಳನ್ನು ನಿರ್ವಹಿಸಲು ಪ್ರತ್ಯೇಕ ಸಂಸ್ಥೆಗಳು ಇರುವಂತೆ ರಾಜ್ಯದ ಮಟ್ಟದಲ್ಲೂ ವಸತಿಶಾಲೆಗಳ ನಿರ್ವಹಣೆಗೆ ಪ್ರತ್ಯೇಕ ಘಟಕ ಮಾಡಬೇಕು’ ಎಂದು ಸಂಸದ ಆರ್‌.ಧ್ರುವನಾರಾಯಣ ಸಲಹೆ ನೀಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಿಯಾಂಕ್‌ ಖರ್ಗೆ, ‘ಈ ಶಾಲೆಗಳಿಗೆ ಒದಗಿಸುವ ಮೂಲಸೌಕರ್ಯ, ಶಿಕ್ಷಕರ ತರಬೇತಿ ಸೇರಿದಂತೆ ಇನ್ನಿತರ ಕೆಲಸಗಳ ನಿರ್ವಹಣೆಗೆ ಸಮಿತಿ ರಚಿಸುವ ಚಿಂತನೆ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !