ನಿರೀಕ್ಷೆ ಹತ್ತೆಂಟು; ಈಡೇರುವುದೆಷ್ಟು..?

7
ವಿಧಾನಸಭೆಯಲ್ಲಿ 2019–20ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಇಂದು

ನಿರೀಕ್ಷೆ ಹತ್ತೆಂಟು; ಈಡೇರುವುದೆಷ್ಟು..?

Published:
Updated:

ವಿಜಯಪುರ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ, ರಾಜ್ಯ ರಾಜಕಾರಣದ ಹಲವು ಗೊಂದಲಗಳ ಜಂಜಾಟದ ನಡುವೆಯೂ, 2019–20ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭಗೊಂಡಿದೆ.

ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಶಾಸಕರ ಬೇಡಿಕೆಗಳಿಗೆ ಮನ್ನಣೆ ನೀಡುವ ಜತೆಯಲ್ಲೇ; ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ, ಕೇಂದ್ರ ಬಜೆಟ್‌ಗಿಂತ, ಜನಪ್ರಿಯ ಬಜೆಟ್‌ ಮಂಡಿಸಲಿದ್ದಾರೆ ಎಂಬ ನಿರೀಕ್ಷೆ ಎಲ್ಲೆಡೆ ವ್ಯಕ್ತವಾಗಿದೆ.

ಈಚೆಗಿನ ದಶಕಗಳಲ್ಲಿ ಮೂರು ಕ್ಯಾಬಿನೆಟ್‌ ದರ್ಜೆಯ ಸಚಿವರನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯಪುರ ಜಿಲ್ಲೆಯ ಜನರು ಬಂಪರ್‌ ಕೊಡುಗೆಯ ನಿರೀಕ್ಷೆಯಲ್ಲಿದ್ದಾರೆ.

ಬರೋಬ್ಬರಿ ಎರಡು ದಶಕದ ಬಳಿಕ ಮತ್ತೆ ಸಚಿವರಾದ ಎಂ.ಸಿ.ಮನಗೂಳಿ ಇದೀಗ ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದಾರೆ. ಜೆಡಿಎಸ್‌ ಅಗ್ರೇಸರ ಎಚ್‌.ಡಿ.ದೇವೇಗೌಡ ಅತ್ಯಾಪ್ತರಾಗಿರುವ ಮನಗೂಳಿ, ಕುಮಾರಸ್ವಾಮಿ ಮೇಲೆ ಪ್ರಭಾವ ಬೀರಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವ ಉಮೇದಿನಲ್ಲಿದ್ದಾರೆ.

‘₹ 28 ಕೋಟಿ ವೆಚ್ಚದಲ್ಲಿ ಸಿಂದಗಿ ಪಟ್ಟಣಕ್ಕೆ ಬಳಗಾನೂರ ಕೆರೆಯಿಂದ ಕುಡಿಯುವ ನೀರು ಸರಬರಾಜು ಯೋಜನೆ, ₹ 90 ಕೋಟಿ ವೆಚ್ಚದಲ್ಲಿ ಸಿಂದಗಿ ಪಟ್ಟಣದ ಸಮಗ್ರ ಒಳಚರಂಡಿ ಕಾಮಗಾರಿ, ₹ 10 ಕೋಟಿ ವೆಚ್ಚದಲ್ಲಿ ನೂತನ ಮಿನಿ ವಿಧಾನಸೌಧ ಕಟ್ಟಡ, ₹ 50 ಕೋಟಿ ವೆಚ್ಚದಲ್ಲಿ ಕಡಣಿ ಬಳಿ ನೂತನವಾಗಿ ಬ್ಯಾರೇಜ್‌ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಆಲಮೇಲಕ್ಕೆ ತಾಲ್ಲೂಕು ಸ್ಥಾನಮಾನ ನೀಡುವ ಯತ್ನ ನಡೆಸಿದ್ದು, ಇದರ ಜತೆ ಆಲಮೇಲಕ್ಕೆ ತಮ್ಮ ಇಲಾಖೆಯಿಂದ ತೋಟಗಾರಿಕೆ ಕಾಲೇಜೊಂದನ್ನು ಮಂಜೂರು ಮಾಡಿಸಿಕೊಳ್ಳುವ ಸಿದ್ಧತೆ ನಡೆಸಿದ್ದು, ಬಜೆಟ್‌ನಲ್ಲಿ ಕುಮಾರಸ್ವಾಮಿ ಘೋಷಿಸಬೇಕಿದೆ’ ಎಂದು ಸಚಿವರ ಆಪ್ತ ವಲಯ ತಿಳಿಸಿದೆ.

ಗೃಹ ಸಚಿವ ಎಂ.ಬಿ.ಪಾಟೀಲ ತಮ್ಮ ಇಲಾಖೆಯಿಂದ ಜಿಲ್ಲಾ ಪೊಲೀಸ್ ಇಲಾಖೆಗೆ ಬಜೆಟ್‌ನಲ್ಲಿ ಬಂಪರ್ ಕೊಡುಗೆಯನ್ನು ನೀಡುವ ನಿರೀಕ್ಷೆ ಹೆಚ್ಚಿದೆ. ಸಂಚಾರ ವ್ಯವಸ್ಥೆ ಸುಧಾರಣೆ, ಹೊಸ ಜೈಲು ನಿರ್ಮಾಣ, ಪೊಲೀಸ್ ತರಬೇತಿ ಶಾಲೆ, ಪೊಲೀಸ್ ವಸತಿ ಗೃಹಗಳ ನಿರ್ಮಾಣ ಸೇರಿದಂತೆ ವಿಜಯಪುರಕ್ಕೆ ಹಲವು ಕೊಡುಗೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.

ಆರೋಗ್ಯ ಸಚಿವ ಶಿವಾನಂದ ಪಾಟೀಲ ಈ ಹಿಂದಿನ ಬಜೆಟ್‌ನಲ್ಲಿ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಹಲವು ಯೋಜನೆ ನೀಡಿದ್ದು, ಇದೀಗ ಇನ್ನಷ್ಟು ಯೋಜನೆಯನ್ನು ಬಜೆಟ್‌ ಮೂಲಕ ಅನುಷ್ಠಾನಗೊಳಿಸಲಿದ್ದಾರೆ. ಹೊಸ ಆಸ್ಪತ್ರೆಗಳು, ಈ ಭಾಗದ ಜನರಿಗೆ ದೂರದ ಮಾತಾಗಿರುವ ಮಾರಣಾಂತಿಕ ರೋಗಗಳ ಚಿಕಿತ್ಸಾ ಕೇಂದ್ರಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಮೂಲಕ ಕೊಡಲಿದ್ದಾರೆ ಎಂದು ಸಚಿವರ ಆಪ್ತ ವಲಯ ತಿಳಿಸಿದೆ.

ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನರ ನೀರಿನ ಬವಣೆ ನೀಗಿಸಲಿಕ್ಕಾಗಿ ‘ಜಲಧಾರೆ’ ಯೋಜನೆ ಘೋಷಣೆಗೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ವಿಜಯಪುರ ಜಿಲ್ಲೆಯ ವಿವಿಧ ಪ್ರಸ್ತಾವನೆಗಳು

ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯ ನಿರ್ಮಾಣಕ್ಕಾಗಿ ₹ 25 ಕೋಟಿ ಪ್ರಸ್ತಾವನೆ, ವಿಮಾನ ನಿಲ್ದಾಣದ ಜಾಗ ಸಮತಟ್ಟುಗೊಳಿಸಲು ₹ 200 ಕೋಟಿಯ ಪ್ರಸ್ತಾವನೆ, ನಾಲ್ಕುವರೆ ವರ್ಷದಿಂದ ನನೆಗುದಿಗೆ ಬಿದ್ದಿರುವ ವಿಜಯಪುರ ನಗರದ ಮಾಸ್ಟರ್‌ ಪ್ಲಾನ್‌ ಅನುಷ್ಠಾನಕ್ಕಾಗಿ ವಿಶೇಷ ಪ್ರಸ್ತಾವನೆ.

ಪ್ರವಾಸೋದ್ಯಮ ಬೆಳವಣಿಗೆಗೆ ವಿಶೇಷ ಪ್ರಸ್ತಾವನೆ, ಟೂರಿಸಂ ಸರ್ಕೀಟ್‌ ನಿರ್ಮಾಣಕ್ಕೆ ಅನುದಾನ, ಜಗದ್ವಿಖ್ಯಾತ ಗೋಳಗುಮ್ಮಟ, ಐತಿಹಾಸಿಕ ಕಪ್ಪುತಾಜ್‌ ಎಂದೇ ಖ್ಯಾತವಾದ ಇಬ್ರಾಹಿಂ ರೋಜಾದ ಉದ್ಯಾನಗಳ ನೀರಿನ ನಿರ್ವಹಣೆಗಾಗಿ ₹ 1.92 ಕೋಟಿಯ ಪ್ರಸ್ತಾವನೆ.

ದೇಶದ ಮೊದಲ ಮಹಿಳಾ ವಸ್ತು ಸಂಗ್ರಹಾಲಯ ನಿರ್ಮಾಣ, ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದ ಚಟುವಟಿಕೆ ನಡೆಸಲು, ಮಂಡ್ಯದಲ್ಲಿ ಸ್ನಾತಕೋತ್ತರ ಕೇಂದ್ರದ ಚಟುವಟಿಕೆ ಚುರುಕುಗೊಳಿಸಲು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಸಹ 2019–20ನೇ ಬಜೆಟ್‌ನಲ್ಲಿ ₹ 85 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬುದು ಮೂಲಗಳಿಂದ ಖಚಿತಪಟ್ಟಿದೆ.

ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ, ಬಸವನಬಾಗೇವಾಡಿಯಲ್ಲಿ ರಿಂಗ್‌ ರಸ್ತೆ, ಕ್ರೀಡಾಂಗಣ ನಿರ್ಮಾಣದ ಜತೆಗೆ, ಒಣದ್ರಾಕ್ಷಿ ಶೀಥಲೀಕರಣ ಘಟಕ ಸ್ಥಾಪಿಸಬೇಕು ಎಂಬ ಬೇಡಿಕೆ ಪ್ರಬಲವಾಗಿ ಕೇಳಿ ಬಂದಿದೆ.

ಹೊಸ ತಾಲ್ಲೂಕುಗಳಿಗೆ ಮೂಲ ಸೌಕರ್ಯ, ವೇಗ ಕಳೆದುಕೊಂಡಿರುವ ನೀರಾವರಿ ಕಾಮಗಾರಿಗಳಿಗೆ ಹಿಂದಿನ ಶರವೇಗ ನೀಡಲು ಹೆಚ್ಚಿನ ಅನುದಾನ ನೀಡಬೇಕು, ದ್ರಾಕ್ಷಿ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ನಿಂಬೆ ಅಭಿವೃದ್ಧಿ ಮಂಡಳಿಗೆ ಅನುದಾನ ನೀಡಬೇಕು. ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂಬುದು ವಿಜಯಪುರಿಗರ ಪ್ರಬಲ ಹಕ್ಕೊತ್ತಾಯವಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !