ಶೈಕ್ಷಣಿಕ ಸಾಧನೆಯಿಂದ ದೇಶದ ಪ್ರಗತಿ: ಸಿಇಒ

7
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ‘ಪ್ರೇರೇಪಣಾ ಕಾರ್ಯಕ್ರಮ’

ಶೈಕ್ಷಣಿಕ ಸಾಧನೆಯಿಂದ ದೇಶದ ಪ್ರಗತಿ: ಸಿಇಒ

Published:
Updated:
Prajavani

ಚಾಮರಾಜನಗರ: ‘ಶೈಕ್ಷಣಿಕವಾಗಿ ಸಾಧನೆ ಮಾಡಿರುವ ದೇಶ ಪ್ರಗತಿಯ ಮುಂಚೂಣಿಯಲ್ಲಿರುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‌ ಕುಮಾರ್‌ ಅವರು ಅಭಿಪ್ರಾಯಪಟ್ಟರು.

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಗಾನಕವಿ ಫೌಂಡೇಷನ್‌ ಸೇವಾಸಂಸ್ಥೆ, ಸುಧಾ ಫ್ಯಾಷನ್‌ ಪ್ಯಾರಡೈಸ್‌ ಸಹಯೋಗದಡಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ‘ಪ್ರೇರೇಪಣಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ದೇಶದ ಅಭಿವೃದ್ಧಿ ಶಿಕ್ಷಣದ ಸಾಧನೆಯ ಮೇಲೆ ನಿಂತಿದೆ. ಇತರೇ ಎಲ್ಲ ಕ್ಷೇತ್ರಗಳಿಗಿಂತ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು. ಇದರಿಂದ ಮುಂದಿನ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಸರ್ಕಾರ, ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಗಳೊಂದಿಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಕೈಜೋಡಿಸಿದರೆ ಮಾತ್ರ ಸಂಪೂರ್ಣವಾಗಿ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗಲಿದೆ. ಇಲ್ಲಿ ಸಂಘ–ಸಂಸ್ಥೆಗಳ ಪಾತ್ರ ಅತಿಮುಖ್ಯ. ಇಂತಹ ಪ್ರೇರಣಾ ಕಾರ್ಯಕ್ರಮಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವ ತಯಾರಿಗಾಗಿ ಮಕ್ಕಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ’ ಎಂದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಮಾತನಾಡಿ, ‘ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಇಲಾಖೆಯಿಂದ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ’ ಎಂದರು.

‘ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಅವರಲ್ಲಿ ಮನೋಸ್ಥೈರ್ಯ, ಸ್ಫೂರ್ತಿ ತುಂಬಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ’ ಎಂದರು.

ಕಾರ್ಯಕ್ರಮದಲ್ಲಿ 2017–18ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಪಡೆದ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. 

ಗಾನಕವಿ ಫೌಂಡೇಷನ್‌ನ ಅಧ್ಯಕ್ಷ ಎಚ್‌.ಬಿ.ವಿಶ್ವಕುಮಾರ್‌, ಮೈಸೂರು ವಿದ್ಯಾವರ್ಧಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಿ.ಬಾಬು ರಾಜೇಂದ್ರ ಪ್ರಸಾದ್, ಜವಳಿ ವರ್ತಕರ ಸಂಘದ ಅಧ್ಯಕ್ಷ ವೆಂಕಟನಾಗಪ್ಪ ಶೆಟ್ಟಿ, ಪ್ರದೀಪ್‌ ಕುಮಾರ್‌ ದೀಕ್ಷಿತ್‌, ಸಿ.ಎಂ.ವೆಂಕಟೇಶ್, ಸಿದ್ದಮಲ್ಲಪ್ಪ, ಜಿ.ಶಂಕರ್‌, ಎಂ.ಕುಮಾರ್‌, ಸಿದ್ದರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !