ಹೆಚ್ಚು ಕೆಲಸ ಮಾಡಲು ಅವಕಾಶ ಕೊಡಿ–ಸಂಸದರ ಮನವಿ

ಬುಧವಾರ, ಮಾರ್ಚ್ 20, 2019
31 °C
ಧ್ರುವನಾರಾಯಣ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು

ಹೆಚ್ಚು ಕೆಲಸ ಮಾಡಲು ಅವಕಾಶ ಕೊಡಿ–ಸಂಸದರ ಮನವಿ

Published:
Updated:
Prajavani

ಚಾಮರಾಜನಗರ: ‘ನಾನು ಎರಡು ಬಾರಿ ಶಾಸಕ ಮತ್ತು ಸಂಸದನಾಗ‌ಲು ಕ್ಷೇತ್ರದ ಮುಸ್ಲಿಂ ಸಮುದಾಯವೂ ಕಾರಣ. ಮುಂದಿನ ಅವಧಿಯಲ್ಲಿ ಕೆಲಸ ಮಾಡಲು ಸಮುದಾಯ ಮತ್ತೊಮ್ಮೆ ಅವಕಾಶ ನೀಡಬೇಕು’ ಎಂದು ಸಂಸದ ಆರ್‌.ಧ್ರುವನಾರಾಯಣ ಅವರು ಮನವಿ ಮಾಡಿದರು.

ನಗರದ ರತ್ನೇಶ್ವರಿ ರೆಸಿಡೆನ್ಸಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಮುಸ್ಲಿಂ ಸಮುದಾಯದೊಂದಿಗಿನ ಸಂವಾದಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಇಡೀ ಜಿಲ್ಲೆಗೆ ಅತೀ ಹೆಚ್ಚು ಅನುದಾನವನ್ನು ನೀಡಲಾಗಿ ಕ್ಷೇತ್ರದ ಅಭಿವೃದ್ಧಿ ಮಾಡಲಾಗಿತ್ತು. ನಾನು ಸಂಸದನಾಗಿ ಕಣ್ಣಿಗೆ ಕಾಣುವ ಕೆಲಸ ಮಾಡಿದ್ದೇನೆ. ಕೇಂದ್ರಿಯ ವಿದ್ಯಾಲಯ, ಕೃಷಿ ಕಾಲೇಜು, ಕಾನೂನು ಕಾಲೇಜು ಸೇರಿದಂತೆ ಹಲವು ಯೋಜನೆಗಳು ಅನುಷ್ಠಾನಗೊಂಡಿವೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಧ್ರುವನಾರಾಯಣ ಅವರಿಗಿಂತಲೂ ಮೊದಲಿದ್ದ ಸಂಸದರು ಕ್ಷೇತ್ರಕ್ಕೆ ಎಷ್ಟು ಬಾರಿ ಬಂದಿದ್ದಾರೆಂಬುದು ಈ ಕ್ಷೇತ್ರದ ಜನತೆಗೆ ಗೊತ್ತಿದೆ. ಧ್ರುವನಾರಾಯಣ ಅವರು ಸದಾ ಅವರ ಕ್ಷೇತ್ರದಲ್ಲೇ ಇದ್ದು ಜನರ ನೋವು ನಲಿವಿಗೆ ಸ್ಪಂದಿಸಿ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹಾಗಾಗಿ, ಅವರನ್ನು ಕಳೆದ ಅವಧಿಗಿಂತಲೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

‘ಮುಸ್ಲಿಮರಿಗೆ ನಾವು ಎಲ್ಲಿಯೂ ಯಾವಾಗಲೂ ದ್ರೋಹ ಮಾಡಿಲ್ಲ. ಒಂದು ವೇಳೆ ಮಾಡಿದ್ದರೆ ಆತ್ಮ ವಂಚನೆ ಮಾಡಿಕೊಂಡಂತಾಗುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಖಂಡ ಸಯ್ಯದ್ ರಫಿ ಅವರು ಮಾತನಾಡಿ, ‘ಕಾಂಗ್ರೆಸ್ಸಿಗೆ ಮುಸ್ಲಿಮರ ಮತ ಶೇ 90ರಷ್ಟಿದ್ದರೂ ನಮಗೆ ಪಕ್ಷದ ವತಿಯಿಂದ ಹೇಳಿಕೊಳ್ಳುವಂತಹ ಅವಕಾಶಗಳಾಗಲಿ, ಸ್ಥಾನಮಾನಗಳಾಗಲಿ ಸಿಗಲಿಲ್ಲ. ಶಿಕ್ಷಣದ ಸಮರ್ಪಕವಾದ ಸವಲತ್ತುಗಳು, ಸಮುದಾಯ ಭವನಗಳು, ವಿದ್ಯಾರ್ಥಿ ನಿಲಯಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ನೀಡಲಿಲ್ಲ. ಕಳೆದ ಬಾರಿ ನಮ್ಮ ಸಮುದಾಯದ ಶೇ 85ರಷ್ಟು ಮತಗಳು ಕಾಂಗ್ರೆಸ್ಸಿಗೆ ಬಿದ್ದಿತ್ತು. ಈ ಬಾರಿ ಶೇ 100ರಷ್ಟು ಮತಗಳನ್ನು ಕಾಂಗ್ರೆಸ್‌ಗೆ ನೀಡಲಿದ್ದು, ಮುಸ್ಲಿಂ ಸಮುದಾಯಕ್ಕೆ ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಉತ್ತಮ ಸ್ಥಾನಮಾನಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಸಂವಾದಲ್ಲಿ ಮಾತನಾಡಿದ ಸಮುದಾಯದ ಮುಖಂಡರು, ‘ಚುನಾವಣೆಯಲ್ಲಿ ಧ್ರುವನಾರಾಯಣ ಅವರ ಜಯಕ್ಕಾಗಿ ಶ್ರಮಿಸಲಾಗುವುದು. ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸುತ್ತೇವೆ’ ಎಂದು ಹೇಳಿದರು.

ಮುಖಂಡರಾದ ಸುಹೇಲ್ ಅಲಿಖಾನ್, ಕಲೀಮುಲ್ಲಾ ಖಾನ್, ನಾಜಿಮುದ್ದೀನ್, ರಫೀಖ್, ಕಲಾಮುಲ್ಲಾ, ಸಯ್ಯದ್ ಅತೀಖ್‌, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಅಜ್ಗರ್ ಮುನ್ನಾ, ಎಪಿಎಂಸಿ ಸದಸ್ಯ ಬಿ.ಕೆ. ರವಿಕುಮಾರ್‌, ಜಿಲ್ಲಾ ಪಂಚಾಯಿತಿ ಸದಸ್ಯ ಸದಾಶಿವಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !