ಭಾನುವಾರ, ಡಿಸೆಂಬರ್ 8, 2019
25 °C
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿ ಪರಿಶೀಲಿಸಿದ ಸಂಸದ ಆರ್.ಧ್ರುವನಾರಾಯಣ

ತ್ವರಿತವಾಗಿ ಕಾಮಗಾರಿ ಪೂರ್ಣಗೊಳಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ‘ರಾಷ್ಟ್ರೀಯ ಹೆದ್ದಾರಿ 209 ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದ ಆರ್.ಧ್ರುವನಾರಾಯಣ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ 209ರ ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿ ಕಾಮಗಾರಿ ಪ್ರಗತಿಯನ್ನು ಅವರು ಮಂಗಳವಾರ ಪರಿಶೀಲಿಸಿದರು.

‘ಕೋಳಿಪಾಳ್ಯ, ಪುಣಜನೂರು ಮಾರ್ಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಭಾಗದಲ್ಲಿ ಅನೇಕ ತೊಂದರೆಗಳನ್ನು ಎದುರಿಸುವಂತಾಗಿದೆ’ ಎಂಬ ದೂರುಗಳು ಬಂದಿರುವುದರಿಂದ ಸಂಸದರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.

‘ಚಾಮರಾಜನಗರದಿಂದ ಕೋಳಿಪಾಳ್ಯ, ಪುಣಜನೂರಿನವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ಅದು ಪೂರ್ಣಗೊಳ್ಳುವವರೆಗೆ ವಾಹನ ಸಂಚಾರಕ್ಕೆ ಅನನುಕೂಲವಾಗಲಿದೆ. ಆದ್ದರಿಂದ ಡಿಸೆಂಬರ್ 26ರೊಳಗೆ ಮಾರ್ಗಮಧ್ಯದ ಗುಂಡಿಗಳನ್ನು ಮುಚ್ಚಬೇಕು. ಜಿಲ್ಲೆಯ ಗಡಿಭಾಗದವರೆಗೂ ಯಾವುದೇ ತೊಂದರೆಯಾಗದಂತೆ ಕೆಲಸ ಪೂರ್ಣಗೊಳಿಸಬೇಕು’ ಎಂದು ಹೇಳಿದರು.

‘ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ರಸ್ತೆ ಅಭಿವೃದ್ಧಿ ಕೆಲಸದಲ್ಲಿ ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ದೂರುಗಳು ಬರದಂತೆ ಉತ್ತಮ ಕಾಮಗಾರಿ ಪೂರೈಸಬೇಕು’ ಎಂದರು.

ಶೇ 37ರಷ್ಟು ಪ್ರಗತಿ: ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿ ಶೇ 37ರಷ್ಟು ಪ್ರಗತಿಯಾಗಿದೆ. ರಸ್ತೆ ವಿಸ್ತರಣೆ, ಸೇತುವೆ ನಿರ್ಮಾಣ ಕೆಲಸ ನಡೆಯುತ್ತಿದೆ ಎಂದರು.

‘ರಸ್ತೆ ಅಭಿವೃದ್ಧಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಶೇ 90ರಷ್ಟು ಪೂರ್ಣಗೊಂಡಿದೆ. ಭೂಮಾಲೀಕರಿಗೆ ಪರಿಹಾರ ನೀಡುವ ಪ್ರಕ್ರಿಯೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಆಸಕ್ತಿಯಿಂದ ಎಲ್ಲ ಕೆಲಸವನ್ನು ಮಾಡುತ್ತಿದೆ’

ಎಪಿಎಂಸಿ ಸದಸ್ಯ ಬಿ.ಕೆ. ರವಿಕುಮಾರ್, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ವ್ಯವಸ್ಥಾಪಕ ಶ್ರೀಧರ್, ಕಾರ್ಯಪಾಲಕ ಎಂಜಿನಿಯರ್ ಕಾಂತರಾಜು, ತಹಶೀಲ್ದಾರ್ ಕೆ. ಪುರಂದರ್, ಭೂಸ್ವಾಧೀನ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು