ಹುಬ್ಬಳ್ಳಿ– ಬೆಂಗಳೂರು ನಡುವೆ ಸೆಮಿ ಹೈಸ್ಪೀಡ್‌ ರೈಲು : ಜೋಶಿ

ಬುಧವಾರ, ಜೂನ್ 19, 2019
28 °C
ರೈಲು ಪ್ರಯಾಣ ಅವಧಿ ನಾಲ್ಕೂವರೆ ತಾಸಿಗೆ ಇಳಿಸುವ ಬಯಕೆ:

ಹುಬ್ಬಳ್ಳಿ– ಬೆಂಗಳೂರು ನಡುವೆ ಸೆಮಿ ಹೈಸ್ಪೀಡ್‌ ರೈಲು : ಜೋಶಿ

Published:
Updated:
Prajavani

ಹುಬ್ಬಳ್ಳಿ: ಹುಬ್ಬಳ್ಳಿ– ಬೆಂಗಳೂರು ನಡುವಿನ ರೈಲು ಸಂಚಾರ ಅವಧಿಯನ್ನು ನಾಲ್ಕೂವರೆ ತಾಸಿಗೆ ಇಳಿಸುವ ಉದ್ದೇಶ ಇದ್ದು, ಅದಕ್ಕೆ ಈ ಅವಧಿಯಲ್ಲೇ ಚಾಲನೆ ನೀಡಲಾಗುವುದು ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಸತತ ನಾಲ್ಕನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಅವರು ಅಭಿಮಾನಿಗಳು, ಹಿತೈಷಿಗಳು ಹಾಗೂ ಕಾರ್ಯಕರ್ತರ ಅಭಿನಂದನೆಗಳ ಮಹಾಪೂರದ ನಡುವೆಯೇ ‘ಪ್ರಜಾವಾಣಿ’ ಜತೆ ಮಾತನಾಡಿದರು.

‘ಹುಬ್ಬಳ್ಳಿ– ಬೆಂಗಳೂರು ನಡುವಿನ ಜೋಡಿ ರೈಲು ಮಾರ್ಗ ನಿರ್ಮಾಣದ ಕಾಮಗಾರಿಗೆ ಮತ್ತಷ್ಟು ವೇಗ ನೀಡಲಾಗುವುದು. 2020ರೊಳಗೆ ಕಾಮಗಾರಿ ಮುಗಿಸುವ ಗುರಿ ಇದೆ. ತಡವಾದರೂ 2021ಕ್ಕೆ ಮುಗಿಸುವುದು ಖಚಿತ. ಬಳಿಕ ‘ವಂದೇ ಭಾರತ’– ಸೆಮಿ ಹೈಸ್ಪೀಡ್‌ ರೈಲು ಓಡಿಸುವ ಉದ್ದೇಶ ಇದೆ. ಆ ಮೂಲಕ ಬೆಂಗಳೂರು– ಹುಬ್ಬಳ್ಳಿ ನಡುವಿನ ಪ್ರಯಾಣದ ಅವಧಿಯನ್ನು ಇಳಿಸಿ, ಈ ಭಾಗದ ಅಭಿವೃದ್ಧಿಗೆ ನೆರವಾಗಲಿದೆ’ ಎಂದು ಅವರು ಹೇಳಿದರು. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಈ ಪರಿ ಭರ್ಜರಿ ಗೆಲುವಿನ ನಿರೀಕ್ಷೆ ಇತ್ತೇ?

ಖಂಡಿತ ಇತ್ತು. ಗೆಲುವಿನ ವಿಷಯದಲ್ಲಿ ಅನುಮಾನ ಇರಲಿಲ್ಲ. ಆದರೆ, ಗೆಲುವಿನ ಅಂತರ ಎಷ್ಟು ಎನ್ನುವುದಷ್ಟೇ ತಿಳಿದುಕೊಳ್ಳಬೇಕಿತ್ತು. ನನಗೆ ಹೆಮ್ಮೆ ಆಗುತ್ತದೆ. ನನ್ನ ಕೆಲಸ ಹಾಗೂ ಮೋದಿ ವರ್ಚಸ್ಸು ನನಗೆ 2.05 ಲಕ್ಷ ಮತಗಳ ಅಂತರದ ಗೆಲುವನ್ನು ತಂದುಕೊಟ್ಟಿದೆ. ಇದು ನನ್ನ ಜವಾಬ್ದಾರಿ ಕೂಡ ಹೆಚ್ಚಿಸಿದೆ.

* ಆದರೆ, ಚುನಾವಣಾ ಪೂರ್ವದಲ್ಲಿನ ನಿಮ್ಮ ಓಡಾಟ/ಮಾತು ನೀವು ಹೆದರಿದಂತೆ ತೋರುತ್ತಿತ್ತು. ಸೋಲುವ ಭೀತಿ ಇತ್ತೇ?

ಹಾಗೇನೂ ಇಲ್ಲ. ಎಂತಹದ್ದೇ ಸಂದರ್ಭ ಇರಲಿ, ಚುನಾವಣೆಗಳನ್ನು ನಾನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಅದರರ್ಥ ನಾನು ಸೋಲುತ್ತೇನೆ ಅಂದಲ್ಲ. ಚುನಾವಣೆಯನ್ನು ಗಂಭೀರವಾಗಿಯೇ; ಹೆಚ್ಚು ಯೋಜನಾಬದ್ಧವಾಗಿ ಎದುರಿಸುವುದು ನನ್ನ ಕಾರ್ಯಶೈಲಿ. ಒಂದು ನೆನಪಿರಲಿ, ಒಮ್ಮೆ ಸೋತರೆ ಚೇತರಿಸಿಕೊಳ್ಳುವುದು ಬಹಳ ಕಷ್ಟ.

* ನಿಮ್ಮ ಮೇಲೆ ಹೆಚ್ಚು ಭರವಸೆ ಇಟ್ಟು ಜನ ವೋಟ್‌ ಹಾಕಿದ್ದಾರೆ. ಅವರಿಗೆ ಏನು ಕೊಡುಗೆ ಕೊಡುತ್ತೀರಿ?

 ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಅವುಗಳನ್ನು ಹಂತಹಂತವಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ. ಎಲ್ಲದಕ್ಕೂ ರಾಜ್ಯ ಸರ್ಕಾರದ ಸಹಕಾರ ಮುಖ್ಯ. ಎಲ್ಲರನ್ನೂ ಜೊತೆಗೆ ತೆಗೆದುಕೊಂಡು, ಅಭಿವೃದ್ಧಿ ಕಡೆಗೆ ಗಮನ ನೀಡುತ್ತೇನೆ.

* ಐದು ವರ್ಷಗಳಲ್ಲಿ ಏನು ಮಾಡಬೇಕು ಅಂದುಕೊಂಡಿದ್ದೀರಿ?

ಅವಳಿ ನಗರದಲ್ಲಿ ಸಂಚಾರ ದಟ್ಟಣೆ ವಿಪರೀತ ಆಗಿದೆ. ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಸಂಬಂಧ ಕಳೆದ ಬಾರಿಯೂ ಒಂದಷ್ಟು ಯೋಜನೆಗಳನ್ನು ರೂಪಿಸಿದ್ದೆ. ಅವುಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹಾಗೆಯೇ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದ್ದು, ಅದಕ್ಕೂ ಪರಿಹಾರ ಕಲ್ಪಿಸಲಾಗುವುದು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೇಂದ್ರದ ಅನುದಾನ ತರಲಾಗುವುದು. ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಒಂದಷ್ಟು ಹೊಸ ರೈಲುಗಳನ್ನು ಆರಂಭಿಸಲಾಗುವುದು. ಮತ್ತಷ್ಟು ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸುವ ಸಂಬಂಧ ವಿಮಾನಯಾನ ಸಂಸ್ಥೆಗಳ ಜತೆಗೂ ಮಾತುಕತೆ ನಡೆಸಲಾಗುವುದು. ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೂ ಆದ್ಯತೆ ಕೊಡುವ ಉದ್ದೇಶ ಇದೆ.

* ಅವಳಿ ನಗರದ ಬೈಪಾಸ್‌ ವಿಸ್ತರಿಸುವ ಯೋಜನೆ ಎಲ್ಲಿಗೆ ಬಂತು?

ಇದು ಕೂಡ ನನ್ನ ಆದ್ಯತಾ ವಲಯದಲ್ಲಿ ಇದೆ. ಈ ಬೈಪಾಸ್‌ ರಸ್ತೆಯನ್ನು ಕನಿಷ್ಠ ಆರು ಪಥದ ರಸ್ತೆ ಮಾಡುವ ಉದ್ದೇಶ ಇದೆ. ಈ ಸಂಬಂಧ ಹಲವು ಸುತ್ತಿನ ಮಾತುಕತೆ ನಡೆದಿದೆ. ಗಡ್ಕರಿ ಕೂಡ ಹೆಚ್ಚು ಆಸಕ್ತಿ ವಹಿಸಿದ್ದರು. ಆದರೆ, ನೈಸ್‌ ಸಂಸ್ಥೆ ಜತೆ ಮಾಡಿಕೊಂಡಿರುವ ಒಪ್ಪಂದದ ಕಾರಣಕ್ಕೆ ರಸ್ತೆ ವಿಸ್ತರಿಸಲು ಆಗಿಲ್ಲ. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸುತ್ತೇವೆ. ಏನಿಲ್ಲ ಅಂದರೂ 4 ಪಥದ ರಸ್ತೆ ಮಾಡುವುದಂತೂ ಖಚಿತ.

* ನಿಮ್ಮ ಲೀಡ್‌ ಹೆಚ್ಚಾಗಲು ಮುಸ್ಲಿಂ ಮಹಿಳೆಯರು ಕಾರಣ ಅಂತಾರಲ್ಲ. ನಿಜಾನ?

ನಗುತ್ತಾ... ಒಂದಂತೂ ಹೇಳುತ್ತೇನೆ, ಪ್ರಚಾರ ಸಂದರ್ಭದಲ್ಲಿ ಸಿಕ್ಕ ಅನೇಕ ಮುಸ್ಲಿಂ ಮಹಿಳೆಯರು ವೋಟ್‌ ಹಾಕುವ ಭರವಸೆ ನೀಡಿದ್ದರು. ಅಲ್ಲದೆ, ತಾವು ಹೇಳಿದ್ದನ್ನು ನೀವು ನಂಬುವುದಿಲ್ಲ ಎಂದಿದ್ದರು. ಇದೆಲ್ಲವೂ ತಲಾಕ್‌ ನಿಷೇಧಿಸಿದ್ದರ ಪ್ರಭಾವ.

* ಪ್ರತಿಸ್ಪರ್ಧಿ ವಿನಯ ಕುಲಕರ್ಣಿ ಅವರ ಜಾತಿ ಲೆಕ್ಕಾಚಾರ ಕೈ ಕೊಟ್ಟಿದ್ದು ಹೇಗೆ?

ನೋಡಿ, ಈ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ನಡೆಯುವುದಿಲ್ಲವೆಂದು ನೀವೇ ಪ್ರಜಾವಾಣಿಯಲ್ಲಿ ಬರೆದಿದ್ದೀರಿ. ಅದರ ನಡುವೆಯೂ ಅವರು ಹಾಗೆ ಮಾಡಿದರು. ಈ ಕ್ಷೇತ್ರದಲ್ಲಿ ಎಂದೂ ಜಾತಿ ಕೆಲಸ ಮಾಡಿಲ್ಲ. ಅದರ ಹಿಂದೆ ಹೋಗುವುದು ಅಪಾಯ. ಹೀಗಾಗಿ ಜಾತಿ ಹಿಂದೆ ಹೋದವರಿಗೆ ಮತದಾರ ಸರಿಯಾದ ಪಾಠ ಕಲಿಸಿದ್ದಾನೆ.

* ಈ ಬಾರಿಯಾದರೂ ಕೇಂದ್ರದಲ್ಲಿ ಮಂತ್ರಿ ಆಗುವ ಅವಕಾಶ ಏನಾದರೂ ಇದೆಯೇ?

ಏನೂ ಹೇಳಲು ಆಗುವುದಿಲ್ಲ. ಎಲ್ಲವೂ ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದೇನೆ. ಆದರೆ, ಒಂದಂತೂ ಸತ್ಯ, ಸಚಿವನಾಗದಿದ್ದರೂ ಕ್ಷೇತ್ರಕ್ಕೆ ಒಳ್ಳೆ ಕೆಲಸ ಮಾಡುವ ವಿಶ್ವಾಸ ಇದೆ. ಸಚಿವನಾದರೆ ಮತ್ತಷ್ಟು ಉತ್ತಮ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಇಲ್ಲದಿದ್ದರೆ ಬೇಸರ ಏನೂ ಇಲ್ಲ. ಆದರೆ, ಯಾವುದಕ್ಕೂ ಲಾಬಿ ನಡೆಸುವುದಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !