ಭಾನುವಾರ, ಡಿಸೆಂಬರ್ 8, 2019
25 °C
ಕನಿಷ್ಠ ಬೆಂಬಲ ಬೆಲೆ ₹200 ಹೆಚ್ಚಳ, ಈ ಹಿಂದೆ ಗರಿಷ್ಠ ಮಿತಿ 75 ಕ್ವಿಂಟಲ್‌

ಭತ್ತ ಖರೀದಿ ಮಿತಿ 40 ಕ್ವಿಂಟಲ್‌ಗೆ ಇಳಿಕೆಗೆ ಆಕ್ಷೇಪ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸಣ್ಣ ರೈತರಿಂದ ಭತ್ತ ಖರೀದಿಸುವ ಗರಿಷ್ಠ ಮಿತಿಯನ್ನು 40 ಕ್ವಿಂಟಲ್‌ಗೆ ಇಳಿಸಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಗಾರು ಹಂಗಾಮಿನ ಭತ್ತವನ್ನು ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಖರೀದಿಸುವ ಪ್ರಕ್ರಿಯೆ ಬುಧವಾರ ಆರಂಭವಾಗಿದ್ದು, ಸಂತೇಮರಹಳ್ಳಿ ಮತ್ತು ಕೊಳ್ಳೇಗಾಲದಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಪೂರಕ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳುವ ರೈತರಿಂದ ನೇರವಾಗಿ ಜಿಲ್ಲಾಡಳಿತ ಭತ್ತವನ್ನು ಖರೀದಿಸಲಿದೆ. ಕ್ವಿಂಟಲ್‌ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ₹1,770 (ಎ ದರ್ಜೆ ಭತ್ತ) ಮತ್ತು ₹1,750 (ಸಾಮಾನ್ಯ ಭತ್ತ) ನಿಗದಿ ಪಡಿಸಲಾಗಿದೆ.

2017–18ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಒಬ್ಬ ರೈತನಿಂದ ಭತ್ತ ಖರೀದಿಸುವ ಮಿತಿ 75 ಕ್ವಿಂಟಲ್‌ ಇತ್ತು. ಆಗಸ್ಟ್‌ನಲ್ಲಿ ನಡೆದಿದ್ದ ಖರೀದಿ ‍ಪ್ರಕ್ರಿಯೆಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಯಾವೊಬ್ಬ ರೈತನೂ ಸರ್ಕಾರಕ್ಕೆ ಭತ್ತ ಮಾರಾಟ ಮಾಡಿರಲಿಲ್ಲ.

ಈ ಬಾರಿ ಭತ್ತ ಖರೀದಿಸುವ ಗರಿಷ್ಠ ಮಿತಿಯನ್ನು 40 ಕ್ವಿಂಟಲ್‌ಗೆ ಇಳಿಸಲಾಗಿದೆ. ಇದರಿಂದ ಬೆಳೆಗಾರರಿಗೆ ತೊಂದರೆಯಾಗುತ್ತದೆ ಎಂಬುದು ರೈತರ ದೂರು.

‘ಸರ್ಕಾರ ಖರೀದಿ ಮಿತಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಬೇಕೇ ವಿನಃ, ಕಡಿಮೆ ಮಾಡಬಾರದು. ಎರಡು ವರ್ಷಗಳಿಂದ ನಮ್ಮಲ್ಲಿ ಭತ್ತ ಇರಲಿಲ್ಲ. ಈ ಬಾರಿ ಫಸಲು ಚೆನ್ನಾಗಿದೆ. ಇಳುವರಿಯೂ ಉತ್ತಮವಾಗಿದೆ. ಹೀಗಿರುವಾಗ ಖರೀದಿ ಮಿತಿಯನ್ನು ಹಿಂದೆ ಇದ್ದುದಕ್ಕಿಂತಲೂ ಕಡಿಮೆ ಮಾಡಿದರೆ ಬೆಳೆಗಾರರಿಗೆ ತೊಂದರೆ ಆಗುತ್ತದೆ’ ಎಂದು ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ರೈತ ಆರ್‌.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರದ ನಿರ್ಧಾರ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಆರ್‌. ರಾಚಪ್ಪ, ‘ಕನಿಷ್ಠ ಬೆಂಬಲ ಬೆಲೆ ಕೇಂದ್ರ ಸರ್ಕಾರದ ಯೋಜನೆ. ಬೆಲೆ ನಿಗದಿ, ಖರೀದಿ ಪ್ರಮಾಣದ ನಿಗದಿ.. ಎಲ್ಲವನ್ನೂ ಕೇಂದ್ರವೇ ನಿರ್ಧರಿಸುತ್ತದೆ. ನಾವು ಅದನ್ನು ಜಾರಿಗೊಳಿಸುತ್ತೇವೆ ಅಷ್ಟೆ’ ಎಂದು ಹೇಳಿದರು.

‘ಸಣ್ಣ ರೈತರಿಂದ ಮಾತ್ರ ಖರೀದಿಸಬೇಕು ಎಂಬ ಸೂಚನೆ ಇದೆ. ಆದರೂ, ಗರಿಷ್ಠ ಮಿತಿ 60–70 ಕ್ವಿಂಟಲ್‌ವರೆಗೆ ಇದ್ದರೆ, ರೈತರಿಗೆ ಅನುಕೂಲವಾಗಬಹುದು’ ಎಂದು ಅವರು ಹೇಳಿದರು.

ಖರೀದಿ ವ್ಯವಸ್ಥೆ ಬದಲು: ಈ ಬಾರಿ ಭತ್ತ ಖರೀದಿ ವ್ಯವಸ್ಥೆಯನ್ನೂ ಬದಲಿಸಲಾಗಿದೆ. ಜಿಲ್ಲಾಡಳಿತ ತೆರೆದಿರುವ ಖರೀದಿ ಕೇಂದ್ರಗಳ ಬದಲಾಗಿ, ಮೊದಲೇ ನಿಗದಿ ಪಡಿಸಿರುವ ಅಕ್ಕಿ ಗಿರಣಿಗಳ ಮೂಲಕ ಭತ್ತ ಖರೀದಿಸಲಾಗುತ್ತದೆ. ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟ ಮಾಡಲಿರುವ ರೈತರ ಹೆಸರನ್ನು ನೋಂದಣಿ ಮಾತ್ರ ಮಾಡಲಾಗುತ್ತದೆ. ರೈತರು ಈ ಕೇಂದ್ರಗಳಿಗೆ ಭತ್ತದ ಮಾದರಿಯನ್ನು ತೆಗೆದುಕೊಂಡು ಹೋಗಿ, ದಾಖಲೆಗಳನ್ನು ನೀಡಿ ನೋಂದಣಿ ಮಾಡಿಸಬೇಕು. ತಮ್ಮಲ್ಲಿ ಎಷ್ಟು ಭತ್ತ ಇದೆ ಎಂಬುದನ್ನು ನಮೂದಿಸಬೇಕು. ಈ ಪ್ರಕ್ರಿಯೆ ಮುಗಿದ ಬಳಿಕ ರೈತರು ನೇರವಾಗಿ ನಿಗದಿತ ಅಕ್ಕಿ ಗಿರಣಿಗಳಿಗೆ ಭತ್ತವನ್ನು ತೆಗೆದುಕೊಂಡು ಹೋಗಬೇಕು. ಬುಧವಾರದಿಂದ ಡಿ.15ರವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ. 16ರಿಂದ 31ರವರೆಗೆ ಅಕ್ಕಿ ಗಿರಣಿಗಳಲ್ಲಿ ಖರೀದಿ ನಡೆಯಲಿದೆ.

ಜಿಲ್ಲೆಯಲ್ಲಿ ಎಂಟು ಅಕ್ಕಿ ಗಿರಣಿಗಳನ್ನು ಗುರುತಿಸಲಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ ಏಳು ಗಿರಣಿಗಳಿದ್ದರೆ, ಚಾಮರಾಜನಗರದಲ್ಲಿ ಒಂದು ಗಿರಣಿ ಇದೆ ಎಂದು ರಾಚಪ್ಪ ಮಾಹಿತಿ ನೀಡಿದರು.

‘ಖರೀದಿ ವ್ಯವಸ್ಥೆ ಬದಲಾವಣೆಯಿಂದ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ. ಭತ್ತ ಖರೀದಿ ಬಳಿಕ ಅದರ ಹೊಟ್ಟನ್ನು (ಹಲ್ಲಿಂಗ್‌) ತೆಗೆಯಬೇಕಾಗುತ್ತದೆ. ಹಾಗಾಗಿ, ಅಕ್ಕಿ ಗಿರಣಿಗಳ ಮೂಲಕ ಖರೀದಿಸಲು ನಿರ್ಧರಿಸಲಾಗಿದೆ. ಆ ಬಳಿಕ ನಾವೇ ಅದನ್ನು ದಾಸ್ತಾನು ಮಾಡುತ್ತೇವೆ’ ಎಂದು ಹೇಳಿದರು.

ಬೆಂಬಲ ಬೆಲೆ ಹೆಚ್ಚಳ
ಹಿಂದಿನ ಸಲಕ್ಕೆ ಹೋಲಿಸಿದರೆ ಈ ಬಾರಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹200 ಹೆಚ್ಚಳವಾಗಿದೆ. ಆಗಸ್ಟ್‌ನಲ್ಲಿ ಜಾರಿಯಲ್ಲಿದ್ದ ಬೆಂಬಲ ಬೆಲೆ ಯೋಜನೆಯಲ್ಲಿ ಕ್ವಿಂಟಲ್‌ ಭತ್ತಕ್ಕೆ ₹1,550 ನಿಗದಿ ಪಡಿಸಲಾಗಿತ್ತು. ಈ ಬಾರಿ ₹1,750 ಹೆಚ್ಚಿಸಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲೂ ಇದೇ ದರವಿದೆ. ₹1,700– ₹1,750ಕ್ಕೆ ಗಿರಣಿಗಳು ರೈತರಿಂದ ಭತ್ತ ಖರೀದಿಸುತ್ತಿವೆ ಎಂದು ಹೇಳುತ್ತಾರೆ ಬೆಳೆಗಾರರು.

ಅನುಕೂಲ: ಸರ್ಕಾರವೇ ಈ ಬಾರಿ ₹1,750 ನಿಗದಿಪಡಿಸಿರುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳುತ್ತಾರೆ ಅಧಿಕಾರಿಗಳು. ಅಕ್ಕಿ ಗಿರಣಿಗಳು ರೈತರಿಂದ ಇದಕ್ಕಿಂತ ಹೆಚ್ಚಿನ ದರದಲ್ಲೇ ಖರೀದಿಸಬೇಕಾಗುತ್ತದೆ ಎಂಬುದು ಅವರ ವಾದ.

ರೈತ ಮುಖಂಡರು ಕೂಡ ಇದನ್ನು ಒಪ್ಪುತ್ತಾರೆ. ಸರ್ಕಾರ ಒಂದು ಮೊತ್ತವನ್ನು ನಿಗದಿಪಡಿಸಿರುವುದರಿಂದ ಹೊರಗಿನವರು ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಭತ್ತವನ್ನು ಖರೀದಿಸುವುದಿಲ್ಲ. ಇದರಿಂದ ರೈತರಿಗೆ ನೆರವಾಗಲಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕನಿಷ್ಠ 60–70 ಕ್ವಿಂಟಲ್‌ ಖರೀದಿಸಬೇಕು’
‘ಸಣ್ಣ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆ ಯೋಜನೆ ಜಾರಿಗೆ ತಂದಿದೆ. 5 ಎಕರೆವರೆಗೆ ಜಮೀನು ಹೊಂದಿರುವವರೆಲ್ಲರೂ ಸಣ್ಣ ರೈತರೇ. ಎಕರೆಗೆ 20 ಕ್ವಿಂಟಲ್‌ ಇಳುವರಿ ಬಂದರೂ, 5 ಎಕರೆಗೆ  100 ಕ್ವಿಂಟಲ್‌ ಭತ್ತ ಆಯಿತು. ಖರೀದಿಯ ಗರಿಷ್ಠ ಮಿತಿಯನ್ನು ಕನಿಷ್ಠ ಪಕ್ಷ  60ರಿಂದ 70 ಕ್ವಿಂಟಲ್‌ ಆದರೂ ನಿಗದಿಪಡಿಸಬೇಕು. ಇಲ್ಲದಿದ್ದರೆ ರೈತರಿಗೆ ದೊಡ್ಡ ಲಾಭವಾಗುವುದಿಲ್ಲ’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹೇಳಿದರು.

‘ತೇವಾಂಶ ಇಷ್ಟೇ ಇರಬೇಕು. ನಿರ್ದಿಷ್ಟ ಚೀಲದಲ್ಲೇ ತರಬೇಕು... ಹೀಗೆ ಭತ್ತ ಖರೀದಿಗೆ ಹಲವು ಷರತ್ತುಗಳನ್ನು ಒಡ್ಡಲಾಗುತ್ತಿದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಬಹುತೇಕ ರೈತರು ಭತ್ತವನ್ನು ಒಣಗಿಸುವ ವ್ಯವಸ್ಥೆ ಹೊಂದಿಲ್ಲ. ಅಂತಹವರು ಏನು ಮಾಡಬೇಕು? ಸರ್ಕಾರವು ನಿಯಮಗಳನ್ನು ಸರಳೀಕರಿಸಬೇಕು’ ಎಂದು ಆಗ್ರಹಿಸಿದರು.

ಭತ್ತ ಖರೀದಿಗೆ ಜಿಲ್ಲೆಯಲ್ಲಿ ನಿಗದಿ ಪಡಿಸಿರುವ ಅಕ್ಕಿ ಗಿರಣಿಗಳು

ಎಸ್‌.ಎನ್‌.ಪಿ ಬನ್ನಿ ರೈಸ್‌ ಮಿಲ್, ನಂಜನಗೂಡು ರಸ್ತೆ, ಚಾಮರಾಜನಗರ
ಮಹದೇಶ್ವರ ಅಕ್ಕಿ ಗಿರಣಿ, ಲಿಂಗಣಾಪುರ, ಕೊಳ್ಳೇಗಾಲ
ವಿಜಯಲಕ್ಷ್ಮಿ ಅಕ್ಕಿ ಗಿರಣಿ, ಕೊಳ್ಳೇಗಾಲ
ಬಸವೇಶ್ವರ ಅಕ್ಕಿ ಗಿರಣಿ, ಬೆಂಗಳೂರು ರಸ್ತೆ, ಕೊಳ್ಳೇಗಾಲ
ವಾರು ಅಕ್ಕಿ ಗಿರಣಿ, ಮುಡಿಗುಂಡ, ಕೊಳ್ಳೇಗಾಲ
ವೆಂಕಟೇಶ್ವರ ಅಕ್ಕಿ ಗಿರಣಿ, ಮುಡಿಗುಂಡ, ಕೊಳ್ಳೇಗಾಲ
ಚಿರಂತ್‌ ಅಕ್ಕಿ ಗಿರಣಿ, ಎಪಿಎಂಸಿ ರಸ್ತೆ, ಕೊಳ್ಳೇಗಾಲ
ಶಂಭುಲಿಂಗೇಶ್ವರ ಅಕ್ಕಿ ಗಿರಣಿ, ಚಿಲಕವಾಡಿ 
ಎ.ಪಿ. ರೈಸ್‌ ಮಿಲ್‌, ಕಿನಕನಹಳ್ಳಿ ಗೇಟ್‌, ಕುಂತೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು