ಮಹಾನಗರ ಪಾಲಿಕೆ ಆದೇಶಕ್ಕಿಲ್ಲ ಕಿಮ್ಮತ್ತು..!

7
ಸುಗಮ ಸಂಚಾರಕ್ಕಾಗಿ ಬೀದಿ ಬದಿಯ ವ್ಯಾಪಾರಿಗಳ ಸ್ಥಳಾಂತರಕ್ಕೆ ಮತ್ತೊಮ್ಮೆ ಆದೇಶ

ಮಹಾನಗರ ಪಾಲಿಕೆ ಆದೇಶಕ್ಕಿಲ್ಲ ಕಿಮ್ಮತ್ತು..!

Published:
Updated:
Deccan Herald

ವಿಜಯಪುರ: ನಗರದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ, ವಿಜಯಪುರ ಮಹಾನಗರ ಪಾಲಿಕೆ ಆಡಳಿತ ಇದೀಗ ಮತ್ತೊಮ್ಮೆ ಬೀದಿ ಬದಿಯ ವ್ಯಾಪಾರಿಗಳ ಸ್ಥಳಾಂತರಕ್ಕೆ ಆದೇಶ ಹೊರಡಿಸಿದ್ದು; ಪರ್ಯಾಯ ಸ್ಥಳಗಳನ್ನು ಗುರುತಿಸಿದೆ. ಇದು ಎಷ್ಟರ ಮಟ್ಟಿಗೆ ? ಅನುಷ್ಠಾನಗೊಳ್ಳುತ್ತದೆ ಎಂಬುದು ಎಲ್ಲೆಡೆ ತೀವ್ರ ಕುತೂಹಲ ಕೆರಳಿಸಿದೆ.

ಸುಗಮ ಸಂಚಾರಕ್ಕಾಗಿ ಈ ಹಿಂದೆ ಸಹ ಪಾಲಿಕೆ ಆಡಳಿತ ಹಲ ಬಾರಿ ಇದೇ ರೀತಿಯ ಆದೇಶ ಹೊರಡಿಸಿದ್ದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈ ಬಾರಿಯಾದರೂ ವ್ಯವಸ್ಥಿತವಾಗಿ ಪಾಲಿಕೆಯ ನೈಜ ಆಶಯ ಈಡೇರಲಿ ಎಂಬುದು ಗುಮ್ಮಟ ನಗರಿಗರ ಆಶಯವಾಗಿದೆ.

‘ಬೀದಿ ಬದಿಯ ವ್ಯಾಪಾರಿಗಳಿಂದ ಸಂಚಾರಕ್ಕೆ ಆಗುತ್ತಿದ್ದ ತೊಂದರೆ ನಿವಾರಿಸಲು ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಸ್ಥಳಾಂತರಕ್ಕೆ ಆದೇಶಿಸಲಾಗಿತ್ತು. ಆಗ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಎಂಟು ಜನ ಬೀದಿ ವ್ಯಾಪಾರಿಗಳು ಮತ್ತು ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗಿದೆ. ಖಂಡಿತವಾಗಿಯೂ ಸೂಕ್ತ ಜಾಗಕ್ಕೆ ವ್ಯಾಪಾರಿಗಳನ್ನು ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘22 ವರ್ಷದಿಂದ ಬೀದಿ ಬದಿಯಲ್ಲೇ ವ್ಯಾಪಾರ ಮಾಡಿಕೊಂಡು ಜೀವನ ನಡೆಸ್ತಾ ಇದೀವಿ. ಒಮ್ಮೇಲೆ ಇಲ್ಲಿಂದ ಬ್ಯಾರೆ ಕಡಿ ಅಂಗಡಿ ತಗೊಂಡು ಹೋಗ ಅಂದ್ರ ಹೆಂಗ್ರಿ. ಜನ್ರು ಓಡಾಡುವ ಪ್ರದೇಶದಲ್ಲಿ ಒಂದಿಷ್ಟು ವ್ಯಾಪಾರ ಆಗ್ತಾದ. ಅದ್ಕ ಸರ್ಕಾರದವ್ರು ಕಲ್ಲ ಹಾಕಿದ್ರ ಹೊಟ್ಟೆ ತುಂಬಿಸ್ಕೋಳ್ಳೋದು ಹೆಂಗ್ರೀ. ನಮ್ಮಿಂದ ಜನ್ರ ಓಡಾಟಕ್ಕೆ ಏನ್ ತೊಂದ್ರೆ ಇಲ್ಲ. ವ್ಯಾಪಾರಕ್ಕೆ ಅಡೆತಡೆ ಆಗದಂತೆ ಅವಕಾಶ ಕಲ್ಪಿಸಿದರೇ ಒಳ್ಳೆಯದು. ಅದನ್ನು ಬಿಟ್ಟು ಜನರು ಓಡಾಡದ ದೂರದ ಪ್ರದೇಶದಲ್ಲಿ ವ್ಯಾಪಾರ ಮಾಡಂದ್ರೆ ಸಮಸ್ಯೆ ಆಗ್ತಾದ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಲಾಲ್‌ಬಿ ಬಾಗವಾನ.

‘ರಸ್ತೆ ಬದಿಯಲ್ಲಿ ಬೀದಿ ವ್ಯಾಪಾರಿಗಳು ಸಾಲು ಸಾಲಾಗಿ ತಳ್ಳುವ ಗಾಡಿಯಲ್ಲೇ ಅಂಗಡಿ ಹಚ್ಚುವುದರಿಂದ ಲಾಲ್‌ ಬಹದ್ದೂರ್‌ ಶಾಸ್ತ್ರೀ ಮಾರುಕಟ್ಟೆಯಲ್ಲಿರುವ ನಮ್ಮ ಬಟ್ಟೆ ಅಂಗಡಿಗೆ ಬರಲು ರಸ್ತೆ ಇಲ್ಲದಕ್ಕೆ ವ್ಯಾಪಾರ ಆಗುತ್ತಿಲ್ಲ. ಪಾಲಿಕೆಯವರು ಕಾಟಾಚಾರಕ್ಕೆ ಎಂಬಂತೆ ಬೀದಿ ವ್ಯಾಪಾರಿಗಳ ಸ್ಥಳಾಂತರಕ್ಕೆ ಆದೇಶ ಹೊರಡಿಸುವ ಬದಲೂ ಅನುಷ್ಠಾನಗೊಳಿಸಿದರೇ ನಮ್ಮ ವ್ಯಾಪಾರಕ್ಕೆ ಒಳ್ಳೆಯದಾಗ್ತಾದ. ಇಲ್ಲಂದ್ರ ನಾವು ಸುಮ್ನೇ ಅಂಗಡಿ ಬಾಡಗಿ ಕಟ್ಟಬೇಕಾಗ್ತಾದ’ ಎಂದು ಬಟ್ಟೆ ವ್ಯಾಪಾರಿ ಬಸವರಾಜ ಗಾಳಿ ಹೇಳಿದರು.
–ಬಾಬುಗೌಡ ರೋಡಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !