ಕಾಂಗ್ರೆಸ್‌ ಯೋಜನೆಗಳಿಗೆ ಮೋದಿಯಿಂದ ಹೊಸ ಬಣ್ಣ: ‘ಮುಖ್ಯಮಂತ್ರಿ’ ಚಂದ್ರು

ಗುರುವಾರ , ಏಪ್ರಿಲ್ 25, 2019
31 °C

ಕಾಂಗ್ರೆಸ್‌ ಯೋಜನೆಗಳಿಗೆ ಮೋದಿಯಿಂದ ಹೊಸ ಬಣ್ಣ: ‘ಮುಖ್ಯಮಂತ್ರಿ’ ಚಂದ್ರು

Published:
Updated:
Prajavani

ಚಾಮರಾಜನಗರ: ‘ಕಾಂಗ್ರೆಸ್‌ ಸರ್ಕಾರದ ಯೋಜನೆಗಳಿಗೆ ಹೊಸ ನಾಮಕರಣ ಮಾಡಿ ಜನರನ್ನು ನಂಬಿಸುವ ಜೊತೆಗೆ ತಮ್ಮದೇ ಯೋಜನೆ ಎನ್ನುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಹಸಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅವರು ನಮ್ಮ ನ್ಯೂನತೆಗಳನ್ನು ಮಾತ್ರ ಎತ್ತಿ ಹಿಡಿಯಬೇಕು. ಏನೂ ಕೆಲಸ ಮಾಡಿಲ್ಲ ಎನ್ನುವುದು ಸರಿಯಲ್ಲ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ‘ಮುಖ್ಯಮಂತ್ರಿ’ ಚಂದ್ರು ಅವರು ಶುಕ್ರವಾರ ಹೇಳಿದರು.

‘ಕಾಂಗ್ರೆಸ್‌ ಯೋಜನೆ, ಸಾಧನೆಗಳಿಗೆ ಹೊಸ ಬಣ್ಣ ಬಳಿದು ಮೋದಿ ಸುಳ್ಳುಗಳ ಸರಮಾಲೆ ಪೋಣಿಸುತ್ತಿದ್ದಾರೆ. ನಮ್ಮ ಸರ್ಕಾರ ಯಾವುದೇ ಕೆಲಸ ಮಾಡಿಲ್ಲ, ಯೋಜನೆಗಳನ್ನು ಜಾರಿಗೆ ತಂದಿಲ್ಲ ಎನ್ನುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆಯ ಮೋದಿ ಅವರು ಕಾಂಗ್ರೆಸ್‌ನ ಅನೇಕ ಯೋಜನೆಗಳ ಹೆಸರು ಬದಲಿಸಿ ನಮ್ಮದೇ ಯೋಜನೆ ಎಂದು ಬೀಗುತ್ತಿದ್ದಾರೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

’ಸ್ವಾತಂತ್ರ್ಯ ನಂತರ ದೇಶದಲ್ಲಿ ಅನೇಕ ಹೊಸ ಹೊಸ ಜನಪರ ಯೋಜನೆಗಳಿಗೆ ಕಾಂಗ್ರೆಸ್‌ ನಾಂದಿ ಹಾಡಿತು. ದೇಶದಲ್ಲಿ ಶೇ 12ರಷ್ಟಿದ್ದ ಸಾಕ್ಷರತಾ ಪ್ರಮಾಣವನ್ನು ನಮ್ಮ ಪಕ್ಷ ಶೇ 80ಕ್ಕೆ ತಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ, ವಿದ್ಯಾಸಿರಿ, ಕೃಷಿಭಾಗ್ಯ, ಅನಿಲ ಭಾಗ್ಯ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು’ ಎಂದರು.

‘ನಮ್ಮ ನಿರ್ಮಲ ಭಾರತ ಬಿಜೆಪಿಯ ಸ್ವಚ್ಛ ಭಾರತ ಆಗಿದೆ. ರಾಷ್ಟ್ರೀಯ ಕೃಷಿ ಯೋಜನೆ ಕೃಷಿ ವಿಕಾಸ್‌ ಆಗಿದೆ. ಇಂತಹ ಅನೇಕ ಕಾರ್ಯಕ್ರಮಗಳಿಗೆ ಮರು ನಾಮಕರಣ ಮಾಡಲಾಗಿದೆ. ದೇಶದಲ್ಲಿ 20 ಲಕ್ಷಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿಯಾಗಿಲ್ಲ. ಬುಲೆಟ್‌ ರೈಲು ತರಲಾಗದ ಮೋದಿ, ಅದೇ ರೈಲನ್ನು ಮತದಾರರ ಮುಂದೆ ಬಿಡುತ್ತಿದ್ದಾರೆ. ದೇಶದ ಹಣದ ಮೌಲ್ಯ ವಿದೇಶಿ ಡಾಲರ್‌ ಎದುರು ಕುಸಿತ ಕಂಡಿದೆ’ ಎಂದರು.

ಪ್ರಜಾತಂತ್ರ ವ್ಯವಸ್ಥೆ ಕೆಡುತ್ತದೆ: ‘ಸಂವಿಧಾನ ಬದಲಾಯಿಸಿ ಮನುಸ್ಮೃತಿ ಸರ್ವಾಧಿಕಾರಿ ದೋರಣೆ ತರಬೇಕು ಎನ್ನುವ ಆರ್‌ಎಸ್‌ಎಸ್‌ನ ಮುಖವಾಡವಾಗಿ ಕಾರ್ಯನಿರ್ವಹಿಸುವ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದರೆ ಪ್ರಜಾತಂತ್ರ ವ್ಯವಸ್ಥೆ ಕೆಡುತ್ತದೆ. ಸೈನಿಕರ ಹೆಸರಿನಲ್ಲಿ ಮತ ಕೇಳುವ ಮೋದಿ ಅವರು ರಕ್ಷಣಾ ಇಲಾಖೆಗೆ ರಾಜಕೀಯ ತುರುಕುತ್ತಿದ್ದಾರೆ. ಅಲ್ಲದೆ, ನನ್ನನ್ನು ನೋಡಿ ಮತ ಹಾಕಿ ಎನ್ನುತ್ತ ಮತದಾರರ ಎದುರು ಮತ ಯಾಚನೆ ಮಾಡುತ್ತಿದ್ದಾರೆ. ಇದು ರಾಜ್ಯದ ಬಿಜೆಪಿ ಅಭ್ಯರ್ಥಿಗಳಿಗೆ ಅವಮಾನ ಮಾಡಿದಂತೆ. ಇವರ ಪ್ರಕಾರ ಅಭ್ಯರ್ಥಿಗಳು ಯೋಗ್ಯರಲ್ಲವೇ’ ಎಂದು ಪ್ರಶ್ನಿಸಿದರು.

‘ಮತದಾರರು ನಿಮ್ಮ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿರುವವರನ್ನು ತಮ್ಮ ವಿವೇಚನೆಯಿಂದ ಗುರುತಿಸಬೇಕು. ಅವರನ್ನೇ (ಧ್ರುವನಾರಾಯಣ) ಮತ್ತೊಮ್ಮೆ ಸಂಸದರನ್ನಾಗಿ ಆಯ್ಕೆ ಮಾಡಿ ಹೆಚ್ಚಿನ ಅಭಿವೃದ್ಧಿಗೆ ಮುಂದಾಗಬೇಕು. ಮೈತ್ರಿ ಅಭ್ಯರ್ಥಿ ಧ್ರುವನಾರಾಯಣ ಅವರಿಗೆ ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಹಿರಿಯ ಮುಖಂಡರಾದ ಜಯರಾಂ, ರುದ್ರಪ್ಪ ಇದ್ದರು.  

‘ಮೇ 23ರ ಬಳಿಕ ದೊಡ್ಡ ಆಂದೋಲನ’

‘1ನೇ ತರಗತಿಯಿಂದ 10ನೇ ತರಗತಿವರೆಗೆ ಇಂಗ್ಲಿಷ್‌ ಅನ್ನು ಭಾಷಾ ವಿಷಯವಾಗಿ ಕಲಿಸಬೇಕು ಎನ್ನುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನಿಲುವು ಸರಿಯಲ್ಲ. ಈ ಬಗ್ಗೆ ಮಾತುಕತೆಗಳು ನಡೆಯುತ್ತಿದೆ. ಇಂಗ್ಲಿಷ್‌ ವಿಷಯವಾಗಿ ಕಲಿಕೆಯಾಗಲಿ. ಆದರೆ, ಭಾಷೆಯಾಗಿ ಬೇಡ ಎನ್ನುವುದು ನಮ್ಮ ನಿಲುವು. ಅಲ್ಲದೇ, ಹಿಂದಿ ಹಾಗೂ ಇಂಗ್ಲಿಷ್‌ ಕಡ್ಡಾಯವಾಗಿ ಬ್ಯಾಂಕುಗಳಲ್ಲಿ ಹೇರುತ್ತಿರುವುದು ಸರಿಯಲ್ಲ. ಸಂವಿಧಾನದಲ್ಲಿರುವ 22 ಭಾಷೆಗಳಿಗೂ ಅಸ್ತಿತ್ವ ಕೊಡಬೇಕು. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಿಂತನೆ ನಡೆಸುತ್ತಿದೆ. ಮೇ 23ರ ಬಳಿಕ ಕನ್ನಡ ಪರವಾಗಿ ದೊಡ್ಡ ಆಂದೋಲನ ನಡೆಸಲಾಗುವುದು’ ಎಂದು  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಹೇಳಿದರು.

 

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !