ಶನಿವಾರ, ನವೆಂಬರ್ 23, 2019
17 °C
ನಗರಸಭೆ: ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿಗೆ ಹೈಕೋರ್ಟ್‌ ತಡೆ, ಆಯ್ಕೆ ನನೆಗುದಿಗೆ

ವರ್ಷ ಕಳೆದರೂ ಅಧಿಕಾರ ಹಿಡಿಯುವ ಭಾಗ್ಯ ಸಿಕ್ಕಿಲ್ಲ ಈ ನಗರಸಭೆ ಚುನಾಯಿತರಿಗೆ

Published:
Updated:
Prajavani

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳಿಗೆ ಚುನಾವಣೆ ನಡೆದು, ಜನಪ್ರತಿನಿಧಿಗಳು ಆಯ್ಕೆಯಾಗಿ ಒಂದು ವರ್ಷ ಕಳೆದರೂ ಅಧಿಕಾರ ಹಿಡಿಯುವ ಭಾಗ್ಯ ಇನ್ನೂ ಅವರಿಗೆ ಸಿಕ್ಕಿಲ್ಲ. 

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವುದರಿಂದ, ನಗರಸಭೆಗಳಿಗೆ ಆಯ್ಕೆಯಾದವರಿಗೆ  ಅಧಿಕಾರದಿಂದ ಇನ್ನೂ ವಂಚಿತರಾಗಿದ್ದಾರೆ. ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ಅಧಿಕಾರಿಗಳ ಆಡಳಿತವೇ ಮುಂದುವರಿದಿದೆ. ಇದರಿಂದ ನಗರಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ. 

ತಲಾ 31 ಸದಸ್ಯ ಬಲದ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳಿಗೆ 2018ರ ಆಗಸ್ಟ್‌ 31ರಂದು ಚುನಾವಣೆ ನಡೆದಿತ್ತು. ಸೆಪ್ಟೆಂಬರ್‌ 3ರಂದು ಫಲಿತಾಂಶ ‍ಪ್ರಕಟವಾಗಿತ್ತು.‌ ಸರ್ಕಾರ ಮೊದಲು ಪ್ರಕಟಿಸಿದ್ದ ಮೀಸಲಾತಿ ಪಟ್ಟಿಯನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ಏಕ ಸದಸ್ಯ ಪೀಠವು ಪಟ್ಟಿಗೆ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಇನ್ನೂ ಕೆಲವರು ಮೇಲ್ಮನವಿ ಸಲ್ಲಿಸಿದ್ದರು. ಹಾಗಾಗಿ, ‌ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನನೆಗುದಿಗೆ ಬಿದ್ದಿದೆ. 

ಸರ್ಕಾರ ಹೊರಡಿಸಿರುವ ಮೀಸಲಾತಿ ಪಟ್ಟಿ ಪ್ರಕಾರ, ಚಾಮರಾಜನಗರ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕೊಳ್ಳೇಗಾಲದಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ–ಎ ಗೆ ಮೀಸಲಿಡಲಾಗಿದೆ.

ಅಭಿವೃದ್ಧಿಗೆ ಹಿನ್ನಡೆ: ಹೈಕೋರ್ಟ್‌ನಲ್ಲಿ ಪ್ರಕರಣ ಇನ್ನೂ ಇತ್ಯರ್ಥವಾಗದೆ ಇರುವುದರಿಂದ ಎರಡೂ ನಗರಸಭೆಗಳ ಅಧಿಕಾರ ಇನ್ನೂ ಚುನಾಯಿತ ಪ್ರತಿನಿಧಿಗಳಿಗೆ ಸಿಕ್ಕಿಲ್ಲ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗದೆ ಇರುವುದರಿಂದ ಸಾಮಾನ್ಯಸಭೆ ನಡೆಯುತ್ತಿಲ್ಲ. ಅನುದಾನದ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. ವಾರ್ಡ್‌ಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ಗೆದ್ದರೂ ಏನೂ ಮಾಡಲು ಸಾಧ್ಯವಾಗದಿರುವ ಸ್ಥಿತಿ ಇದೆ ಎಂದು ಹೇಳುತ್ತಾರೆ ಸದಸ್ಯರು.

‘ಗೆದ್ದರೂ ಒಂದು ವರ್ಷದಿಂದ ಅಧಿಕಾರ ಇಲ್ಲದಂತಹ ಸ್ಥಿತಿ ಇದೆ. ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಏನೂ ಮಾಡದಂತಾಗಿದೆ. ಹೈಕೋರ್ಟ್‌ ಮೆಟ್ಟಿಲೇರಿರುವವರನ್ನು ಬಿಟ್ಟು ಉಳಿದ ಕಡೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರ ಮೂಲಕ ಎರಡು ಬಾರಿ ಮನವಿ ಮಾಡಿದ್ದೇವೆ’ ಎಂದು ಚಾಮರಾಜನಗರದ 9ನೇ ವಾರ್ಡ್‌ ಸದಸ್ಯ ಎಸ್‌ಡಿಪಿಐನ ‌ಎಂ.ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೌನ್ಸಿಲ್‌ ರಚನೆಯಾಗದೆ ಇರುವುದರಿಂದ ಚುನಾಯಿತ ಪ್ರತಿನಿಧಿಗಳ ಕೈಯಲ್ಲಿ ಏನೂ ಇಲ್ಲ. ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಪ್ರತಿಯೊಂದಕ್ಕೂ ಜಿಲ್ಲಾಧಿಕಾರಿ ಅವರನ್ನು ಅವಲಂಬಿಸಬೇಕಾಗುತ್ತದೆ. ಜನಪ್ರತಿನಿಧಿಗಳಿಗೆ ಅಧಿಕಾರ ಸಿಕ್ಕಿದರೆ, ಸಾಮಾನ್ಯ ಸಭೆಯಲ್ಲಿ ಹೊಸ ಹೊಸ ಯೋಜನೆಗಳಿಗೆ ನಿರ್ಣಯ ತೆಗೆದುಕೊಂಡು ಅನುಷ್ಠಾನಗೊಳಿಸಬಹುದು. ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲೂ ಅನುಕೂಲವಾಗುತ್ತದೆ. ಈಗ ನಮ್ಮ ವಾರ್ಡ್‌ಗಳಿಗೆ ಬರುವ ಅನುದಾನವನ್ನು ಸರಿಯಾಗಿ ಪಡೆಯುವುದಕ್ಕೇ ಆಗುತ್ತಿಲ್ಲ’ ಎಂದು ಅವರು ಹೇಳಿದರು. 

ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂಬುದು ‌ಎಲ್ಲ ಸದಸ್ಯರ ಒತ್ತಾಯ.

ಯಾರಿಗೂ ಇಲ್ಲ ಬಹುಮತ 

ತಲಾ 31 ಸದಸ್ಯ ಬಲದ ಎರಡೂ ನಗರಸಭೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಅಧಿಕಾರ ಹಿಡಿಯಲು ಪಕ್ಷಗಳು ಮೈತ್ರಿ ಮಾಡಿಕೊಳ್ಳಲೇಬೇಕಾಗಿದೆ.

ಚಾಮರಾಜನಗರದಲ್ಲಿ 15 ವಾರ್ಡ್‌ಗಳಲ್ಲಿ ಜಯ ಗಳಿಸಿರುವ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರಳ ಬಹುಮತಕ್ಕೆ ಅದಕ್ಕೆ ಇನ್ನೂ ಒಂದು ಮತದ ಅವಶ್ಯಕತೆ ಇದೆ.

ಕಾಂಗ್ರೆಸ್‌ 8 ವಾರ್ಡ್‌ಗಳಲ್ಲಿ, ಎಸ್‌ಡಿಪಿಐ 6ರಲ್ಲಿ ಮತ್ತು ಬಿಎಸ್‌ಪಿ ಒಂದು ವಾರ್ಡ್‌ನಲ್ಲಿ ಗೆದ್ದಿವೆ. ಅಧಿಕಾರದ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದು ಕುತೂಹಲ ರಾಜಕೀಯ ವಲಯದಲ್ಲಿದೆ. 

ಅತ್ತ ಕೊಳ್ಳೇಗಾಲ ನಗರಸಭೆಯಲ್ಲಿ ಸರಳ ಬಹುಮತಕ್ಕೆ 16 ಸದಸ್ಯರ ಬೆಂಬಲ ಬೇಕು. ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಈ ಬಾರಿ 11 ವಾರ್ಡ್‌ಗಳಲ್ಲಿ ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಎಸ್‌ಪಿ 9ರಲ್ಲಿ, ಬಿಜೆಪಿ 7ರಲ್ಲಿ ಹಾಗೂ ಪಕ್ಷೇತರರು ನಾಲ್ಕು ವಾರ್ಡ್‌ಗಳಲ್ಲಿ ಜಯಿಸಿದ್ದಾರೆ.

ಕಾಂಗ್ರೆಸ್‌ಗೆ ಒಂದು ನಷ್ಟ: ವಾರ್ಡ್‌ 19ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಸುಧಾ ಅವರು ಕೆಲವು ತಿಂಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಗೆದ್ದಿರುವ 31 ಮಂದಿಯಲ್ಲಿ ಅವರೊಬ್ಬರೇ ಹಿಂದುಳಿದ ವರ್ಗ ಬಿ–ಗೆ ಸೇರಿದ್ದ ಮಹಿಳೆಯಾಗಿದ್ದರು. ಹಾಗಾಗಿ, ಯಾರಿಗೆ ಬಹುಮತ ಇದ್ದರೂ ಮೀಸಲಾತಿ ಪ್ರಕಾರ, ಅವರೇ ಅಧ್ಯಕ್ಷರಾಗುತ್ತಿದ್ದರು. ಈಗ ಆ ವಾರ್ಡ್‌ಗೆ ಮರುಚುನಾವಣೆ ನಡೆಯಬೇಕಾಗಿದೆ. 

ಪ್ರತಿಕ್ರಿಯಿಸಿ (+)