ಕೊಂದು, ಮೂರ್ಛೆಯಿಂದ ಸತ್ತಳು ಎಂದ!

7
ಮರಣೋತ್ತರ ಪರೀಕ್ಷೆ ವರದಿಯಿಂದ ಬಯಲಾಯ್ತು ಸಾವಿನ ರಹಸ್ಯ

ಕೊಂದು, ಮೂರ್ಛೆಯಿಂದ ಸತ್ತಳು ಎಂದ!

Published:
Updated:
Deccan Herald

ಬೆಂಗಳೂರು: ತನ್ನಿಂದ ಅಂತರ ಕಾಯ್ದುಕೊಂಡಿದ್ದಕ್ಕೆ ಮಹಿಳೆಯನ್ನು ಕುತ್ತಿಗೆ ಹಿಸುಕಿ ಕೊಂದ ಆತ, ‘ಕಾಯಿಲೆಯಿಂದ ಸತ್ತಿದ್ದಾಳೆ’ ಎಂದು ಮೃತರ ಪೋಷಕರನ್ನು ನಂಬಿಸಿದ್ದ. ಆದರೆ, ವಾರದ ಬಳಿಕ ಬಂದ ಮರಣೋತ್ತರ ಪರೀಕ್ಷೆ ವರದಿಯು ಸಾವಿನ ರಹಸ್ಯವನ್ನು ಬಯಲು ಮಾಡಿತು.

ಜುಲೈ 12ರಂದು ನಡೆದಿದ್ದ ಹೊರಮಾವು ನಿವಾಸಿ ಶಿಲ್ಪಾ ಸಾವಿನ ಪ್ರಕರಣ ಸಂಬಂಧ, ಹೆಣ್ಣೂರು ಪೊಲೀಸರು ಜುಲೈ 28ರಂದು ವೆಂಕಟೇಶ್ ಎಂಬಾತನನ್ನು ಬಂಧಿಸಿದ್ದಾರೆ.

ಶಿಲ್ಪಾ 15 ವರ್ಷಗಳ ಹಿಂದೆ ಬಾಗಲೂರಿನ ವಿನೋದ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿಯ ಸಂಬಂಧಿ ಎಂಬ ಕಾರಣಕ್ಕೆ ವೆಂಕಟೇಶ್‌ನನ್ನು ಶಿಲ್ಪಾ ಸಲುಗೆಯಿಂದ ಮಾತನಾಡಿಸುತ್ತಿದ್ದರು. ಅದನ್ನೇ ತಪ್ಪಾಗಿ ತಿಳಿದುಕೊಂಡ ಆರೋಪಿ, ಅವರನ್ನು ಪ್ರೀತಿಸಲು ಶುರು ಮಾಡಿದ್ದ. ಇತ್ತೀಚೆಗೆ ಪ್ರೇಮ ನಿವೇದನೆಯನ್ನೂ ಮಾಡಿದ್ದ. ಅದಕ್ಕೆ ಒಪ್ಪದ ಅವರು, ಆತನ ಜತೆ ಮಾತನಾಡುವುದನ್ನೇ ನಿಲ್ಲಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಜುಲೈ ಮೊದಲ ವಾರ ಶಿಲ್ಪಾ ಮಕ್ಕಳನ್ನು ಕರೆದುಕೊಂಡು ಹೊರಮಾವಿನ ತವರು ಮನೆಗೆ ತೆರಳಿದ್ದರು. ಅವರ ಪೋಷಕರನ್ನು ಮಾತನಾಡಿಸುವ ಸೋಗಿನಲ್ಲಿ ವೆಂಕಟೇಶ್ ಆಗಾಗ್ಗೆ ಅಲ್ಲಿಗೂ ಹೋಗುತ್ತಿದ್ದ. ಅಂತೆಯೇ ಜುಲೈ 12ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆತ ಮನೆಗೆ ಹೋಗಿದ್ದಾಗ ಶಿಲ್ಪಾ ಪೋಷಕರು ಇರಲಿಲ್ಲ. ಮಕ್ಕಳೂ ಶಾಲೆಗೆ ತೆರಳಿದ್ದರು.

‘ನೀವು ಬೇರೊಬ್ಬ ಯುವಕನ ಜತೆ ಓಡಾಡುತ್ತಿರುವ ವಿಷಯ ನನಗೆ ಗೊತ್ತಾಗಿದೆ. ನನ್ನ ಜತೆ ಸಲುಗೆಯಿಂದ ನಡೆದುಕೊಳ್ಳದಿದ್ದರೆ ಆ ವಿಷಯವನ್ನು ವಿನೋದ್‌ಗೆ ತಿಳಿಸುತ್ತೇನೆ’ ಎಂದಿದ್ದ. ಆ ಮಾತಿಗೆ ಬೆದರದ ಶಿಲ್ಪಾ, ‘ಇನ್ನೆಂದೂ ನಿನ್ನ ಮುಖ ತೋರಿಸಬೇಡ’ ಎಂದು ಬೈದಿದ್ದರು. ಇದೇ ವಿಚಾರವಾಗಿ ವಾಗ್ವಾದ ಜೋರಾಗಿ ಪರಸ್ಪರರು ಕೈ–ಕೈ ಮಿಲಾಯಿಸಿಕೊಂಡಿದ್ದರು. ಈ ಹಂತದಲ್ಲಿ ಆರೋಪಿ ಶಿಲ್ಪಾ ಅವರ ಕುತ್ತಿಗೆ ಹಿಸುಕಿ ಸಾಯಿಸಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

ಸ್ವಲ್ಪ ಸಮಯದ ಬಳಿಕ ಮನೆಗೆ ಮರಳಿದ ಪೋಷಕರು, ನೆಲದ ಮೇಲೆ ಬಿದ್ದಿದ್ದ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ಶಿಲ್ಪಾ ಮೃತಪಟ್ಟಿರುವುದಾಗಿ ಹೇಳಿದ್ದರು. ಇದೇ ವೇಳೆ ಆಸ್ಪತ್ರೆಗೆ ಬಂದ ಆರೋಪಿ ವೆಂಕಟೇಶ್, ‘ಶಿಲ್ಪಾಗೆ ಮೂರ್ಛೆ ರೋಗ ಇತ್ತಲ್ವಾ. ಅದರಿಂದಲೇ ಆಕೆ ಸತ್ತಿದ್ದಾಳೆ ಎಂದು ವೈದ್ಯರು ನನಗೆ ಹೇಳಿದ್ದಾರೆ’ ಎಂದಿದ್ದ. ಆತನ ಮಾತನ್ನು ನಂಬಿದ ಪೋಷಕರು, ಪೊಲೀಸರಿಗೂ ಅದೇ ರೀತಿ ಹೇಳಿಕೆ ಕೊಟ್ಟಿದ್ದರು. ಅದರನ್ವಯ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.

ಇದರ ಬೆನ್ನಲ್ಲೇ ವಿನೋದ್ ಹಾಗೂ ಅವರ ಅಕ್ಕ ಸರೋಜಮ್ಮ, ‘ವೆಂಕಟೇಶ್‌ ಬೆಳಿಗ್ಗೆ ಶಿಲ್ಪಾ ಇದ್ದ ಮನೆ ಹತ್ತಿರ ಓಡಾಡುತ್ತಿದ್ದ ಎಂದು ಪರಿಚಿತರೊಬ್ಬರು ಹೇಳಿದರು. ಆತನೇ ಏನೋ ಮಾಡಿರಬಹುದು ಎಂಬ ಅನುಮಾನವಿದೆ’ ಎಂದು ಸಂಶಯ ವ್ಯಕ್ತಪಡಿಸಿದರು. ಅಷ್ಟರಲ್ಲಿ ವೆಂಕಟೇಶ್ ಕೂಡ ನಾಪತ್ತೆಯಾಗಿದ್ದರಿಂದ ಆತನ ಮೇಲಿನ ಅನುಮಾನ ಹೆಚ್ಚಾಯಿತು ಎಂದು ಪೊಲೀಸರು ಹೇಳಿದರು.

ರಹಸ್ಯ ಬಿಚ್ಚಿಟ್ಟ ವರದಿ: ಮರಣೋತ್ತರ ಪರೀಕ್ಷೆ ನಡೆಸಿದ ಅಂಬೇಡ್ಕರ್ ಆಸ್ಪತ್ರೆ ವೈದ್ಯರು, ‘ಶಿಲ್ಪಾ ಕುತ್ತಿಗೆ ಮೇಲೆ ಗಾಯದ ಗುರುತುಗಳಿವೆ. ಯಾರೋ ಕುತ್ತಿಗೆ ಹಿಸುಕಿ ಸಾಯಿಸಿದ್ದಾರೆ’ ಎಂದು ವರದಿ ಕೊಟ್ಟರು. ಆ ನಂತರ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರು, ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಜುಲೈ 28ರಂದು ವೆಂಕಟೇಶ್‌ನನ್ನು ವಶಕ್ಕೆ ಪಡೆದರು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ‘ಸಾಯಿಸಿದ್ದು ನಾನೇ. ಆದರೆ, ಕೊಲ್ಲುವ ಉದ್ದೇಶ ಇರಲಿಲ್ಲ’ ಎಂದು ಹೇಳಿದ್ದಾನೆ.

ಸಾದರಹಳ್ಳಿ ಗೇಟ್ ನಿವಾಸಿ ವೆಂಕಟೇಶ್, ಚಪ್ಪಡಿ ಕಲ್ಲು ಮಾರಾಟ ಮಾಡುತ್ತಿದ್ದ. ನ್ಯಾಯಾಲಯದ ಸೂಚನೆಯಂತೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೆಣ್ಣೂರು ಪೊಲೀಸರು ತಿಳಿಸಿದ್ದಾರೆ.

‘ಹೆದರಿ ಮಾಹಿತಿ ಮುಚ್ಚಿಟ್ಟ ಪೋಷಕರು’
ಪೊಲೀಸರು ತನ್ನನ್ನು ಹುಡುಕುತ್ತಿರುವಾಗಲೇ ಶಿಲ್ಪಾ ಪೋಷಕರ ಮನೆಗೆ ಬಂದಿದ್ದ ವೆಂಕಟೇಶ್, ‘ಏನೋ ಅಚಾತುರ್ಯದಿಂದ ಅನಾಹುತ ನಡೆದು ಹೋಗಿದೆ. ನನ್ನ ಬಗ್ಗೆ ಪೊಲೀಸರಿಗೆ ಹೇಳಿದರೆ ಜೀವಸಹಿತ ಬಿಡುವುದಿಲ್ಲ’ ಎಂದು ಹೇಳಿ ಹೋಗಿದ್ದ. ಇದರಿಂದ ಹೆದರಿದ ಅವರು, ಆತನ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆತ ಮನೆಗೆ ಬಂದು ಹೋಗಿದ್ದ ವಿಚಾರವನ್ನು ಅವರು ಈಗ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !