ಭಾನುವಾರ, ನವೆಂಬರ್ 17, 2019
24 °C

ಮಚ್ಚಿನಿಂದ ಕೊಚ್ಚಿ ಕ್ಯಾಂಟರ್ ಚಾಲಕನ ಕೊಲೆ

Published:
Updated:

ಬೆಂಗಳೂರು: ಬೈಕ್‍ಗಳಲ್ಲಿ ಬೆನ್ನಟ್ಟಿ ಬಂದ ದುಷ್ಕರ್ಮಿಗಳು ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದ ಕ್ಯಾಂಟರ್ ಚಾಲಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಸುಂಕದಕಟ್ಟೆಯ ಹೆಗ್ಗನಹಳ್ಳಿ ಕ್ರಾಸ್‍ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಕೆಬ್ಬೆಹಳ್ಳದ ಮಹೇಶ್‌ಕುಮಾರ್ (35) ಕೊಲೆಯಾದ ವ್ಯಕ್ತಿ. ಆರು ವರ್ಷಗಳ ಹಿಂದೆ ಕೊಲೆ ಕೃತ್ಯವೊಂದರಲ್ಲಿ ಭಾಗಿಯಾದ ಆರೋಪದಲ್ಲಿ ಜೈಲಿಗೆ ಹೋಗಿದ್ದ ಮಹೇಶ್‌ಕುಮಾರ್ ಬಿಡುಗಡೆಯಾಗಿದ್ದ. ಬಳಿಕ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಕ್ಯಾಂಟರ್ ಚಾಲಕನಾಗಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಹಳೆ ದ್ವೇಷ ಈ ಕೃತ್ಯಕ್ಕೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕ್ಯಾಂಟರ್ ಚಾಲಕನಾಗಿದ್ದ ಮಹೇಶ್‍ಕುಮಾರ್ ರಾತ್ರಿ 10.15ರ ವೇಳೆ ಕೆಲಸ ಮುಗಿಸಿಕೊಂಡು ರಾಜಗೋಪಾಲನಗರದಲ್ಲಿ ಕ್ಯಾಂಟರ್‍ ನಿಲ್ಲಿಸಿ ಸ್ಕೂಟರ್‍ನಲ್ಲಿ ಮನೆಗೆ ಹೋಗುತ್ತಿದ್ದಾಗ ಎರಡು ಬೈಕ್‍ಗಳಲ್ಲಿ ನಾಲ್ವರು ಹಿಂಬಾಲಿಸಿಕೊಂಡು ಬಂದಿದ್ದಾರೆ.

ತನ್ನನ್ನು ಹಿಂಬಾಲಿಸಿ ಬರುತ್ತಿರುವುದನ್ನು ಕಂಡ ಮಹೇಶ್‍ ಕುಮಾರ್, ವೇಗವಾಗಿ ಸ್ಕೂಟರ್ ಚಲಾಯಿಸಿದರೂ ಹೆಗ್ಗನಹಳ್ಳಿ ಕ್ರಾಸ್ ಬಳಿ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಸ್ಕೂಟರ್ ನಿಲ್ಲಿಸಿದ ದುಷ್ಕರ್ಮಿಗಳು, ಮಹೇಶ್‍ಕುಮಾರ್ ಮೇಲೆ ಹಲ್ಲೆ ನಡೆಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

 

ಪ್ರತಿಕ್ರಿಯಿಸಿ (+)