ಬಾರ್‌ನಲ್ಲೇ ಹತ್ಯೆ; ರೌಡಿ ಗೊರಿಲ್ಲಾ ಸೆರೆ

7

ಬಾರ್‌ನಲ್ಲೇ ಹತ್ಯೆ; ರೌಡಿ ಗೊರಿಲ್ಲಾ ಸೆರೆ

Published:
Updated:
Prajavani

ಬೆಂಗಳೂರು: ತಮ್ಮತ್ತ ದುರುಗುಟ್ಟಿ ನೋಡಿದನೆಂದು ಆಟೊ ಚಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಕುಖ್ಯಾತ ರೌಡಿ ಶ್ರೀಧರ್ ಅಲಿಯಾಸ್ ಗೊರಿಲ್ಲಾ, ಆತನ ಸಹಚರರಾದ ಜೆ.ಮಂಜೇಶ್ ಹಾಗೂ ವೆಂಕಟೇಶ್ ಎಂಬುವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿಯ ಎನ್‌ಜಿಇಎಫ್‌ ಲೇಔಟ್‌ನಲ್ಲಿರುವ ‘ಸನ್‌ಶೈನ್’ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಜ.24ರ ರಾತ್ರಿ ಎಚ್‌.ಎಸ್.ರಘು ಎಂಬುವರ ಹತ್ಯೆ ನಡೆದಿತ್ತು. ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಸಿ.ಸಿ ಟಿ.ವಿ ಕ್ಯಾಮೆರಾ ದೃಶ್ಯಾವಳಿಯ ಸುಳಿವು ಆಧರಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೂವರನ್ನೂ ಬಂಧಿಸಿದ್ದಾರೆ.

ಮಲ್ಲತ್ತಹಳ್ಳಿಯ ರಘು, ಆ ದಿನ ರಾತ್ರಿ ಏಳೆಂಟು ಸ್ನೇಹಿತರೊಟ್ಟಿಗೆ ಬಾರ್‌ಗೆ ತೆರಳಿದ್ದರು. ಅಲ್ಲಿ ರೌಡಿ ಗೊರಿಲ್ಲಾನ ತಂಡವೂ ಇತ್ತು. ಕುಡಿದ ಮತ್ತಿನಲ್ಲಿ ರಘು ಗೆಳೆಯನೊಬ್ಬ ಮೊದಲು ಬಾರ್‌ ಕೌಂಟರ್ ಬಳಿ ಆರೋಪಿ ಮಂಜೇಶ್ ಜತೆ ಜಗಳವಾಡಿದ್ದ. ಆಗ ನೌಕರರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದರು. ಇದಾದ ನಂತರ 11.30ರ ಸುಮಾರಿಗೆ ಬಿಲ್ ಪಾವತಿಸಲು ಕೌಂಟರ್ ಬಳಿ ಬಂದ ರಘು ಅವರಿಗೆ, ‘ಏನೋ ಗುರಾಯಿಸ್ತಿದ್ದೀಯಾ’ ಎಂದು ಗೊರಿಲ್ಲಾ ಕೇಳಿದ್ದ. ಆಗ ಮಾತಿನ ಚಕಮಕಿ ನಡೆದು ಮತ್ತೆ ಜಗಳ ಶುರುವಾಗಿತ್ತು.

ಈ ಹಂತದಲ್ಲಿ ಆರೋಪಿಗಳು ರಘು ಹೊಟ್ಟೆಗೆ ಚಾಕುವಿನಿಂದ ತಿವಿದು ಪರಾರಿಯಾಗಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದ ಪೊಲೀಸರಿಗೆ, ರೌಡಿ ಗೊರಿಲ್ಲಾ ಹಾಗೂ ಮಂಜೇಶ್‌ನ ಚಹರೆ ಸ್ಪಷ್ಟವಾಗಿ ಸಿಕ್ಕಿತ್ತು. ಕೆ.ಆರ್.ಪೇಟೆಯಲ್ಲಿರುವ ತನ್ನ ಅಕ್ಕನ‌ ಮನೆಯಲ್ಲಿ ಅಡಗಿದ್ದ ಮಂಜೇಶ್‌ನನ್ನು ಮೊದಲು ವಶಕ್ಕೆ ಪಡೆದ ಪೊಲೀಸರು, ಆತ ನೀಡಿದ ಸುಳಿವು ಆಧರಿಸಿ ಉಳಿದಿಬ್ಬರನ್ನು ಬಂಧಿಸಿದರು.

ಕೊಲೆ, ಕೊಲೆಯತ್ನ, ಹಲ್ಲೆ, ಡಕಾಯಿತಿ ಸೇರಿದಂತೆ ಶ್ರೀಧರ್ ಅಲಿಯಾಸ್ ಗೊರಿಲ್ಲಾ ವಿರುದ್ಧ ವಿಜಯನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ತಾವರೆಕೆರೆ ಹಾಗೂ ಕಾಮಾಕ್ಷಿಪಾಳ್ಯ ಠಾಣೆಗಳಲ್ಲಿ ಈತನ ವಿರುದ್ಧ ರೌಡಿಪಟ್ಟಿ ತೆರೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !