ಶಾಸಕರ ಸಂಬಂಧಿ ಜೊತೆ ಮದುವೆ; ರೌಡಿ ಹತ್ಯೆ

7
ಯುವತಿ ಜೊತೆಗಿದ್ದ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದ ಮನು; ಮರ್ಯಾದೆ ಹತ್ಯೆ ಶಂಕೆ

ಶಾಸಕರ ಸಂಬಂಧಿ ಜೊತೆ ಮದುವೆ; ರೌಡಿ ಹತ್ಯೆ

Published:
Updated:
Prajavani

ಬೆಂಗಳೂರು: ಶಾಸಕರೊಬ್ಬರ ತಮ್ಮನ ಮಗಳ ಜೊತೆಯಲ್ಲಿ ಮದುವೆ ಆಗಿರುವುದಾಗಿ ಹೇಳಿ ಫೇಸ್‌ಬುಕ್‌ನಲ್ಲಿ ವಿಡಿಯೊ ಹರಿಬಿಟ್ಟಿದ್ದ ರೌಡಿ ಮನು ಎಂಬಾತನನ್ನು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಮಂಗಳವಾರ ಕೊಲೆ ಮಾಡಲಾಗಿದೆ.

ನಗರದ ಕಾಮಾಕ್ಷಿಪಾಳ್ಯ ನಿವಾಸಿಯಾಗಿದ್ದ ಮನು, ಶಾಸಕರೊಬ್ಬರ ಸಹೋದರರಾದ ಕಾಮಾಕ್ಷಿಪಾಳ್ಯದ ಬಸವರಾಜ್ ಎಂಬುವರ ಮನೆಯಲ್ಲಿ ಕೆಲಸಕ್ಕಿದ್ದ. ಅವರ 18 ವರ್ಷದ ಮಗಳು ಹಾಗೂ ಮನು, ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಹೋಗಿ ಮದುವೆ ಆಗಿದ್ದರು.

ಪತ್ತೆ ದೂರು: ಬಸವರಾಜ್ ಅವರ ಮಗಳು, ಕಳೆದ ಅಕ್ಟೋಬರ್ 22ರಂದು ಕಾಲೇಜಿಗೆ ಹೋಗಿ ಮನೆಗೆ ವಾಪಸ್‌ ಬಂದಿರಲಿಲ್ಲ.  ಮಗಳು ನಾಪತ್ತೆಯಾಗಿರುವ ಬಗ್ಗೆ ತಂದೆಯೇ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಬಸವರಾಜ್‌ ಅವರ ಮಗಳ ಜೊತೆಯಲ್ಲೇ ಕಾಣಿಸಿಕೊಂಡಿದ್ದ ಮನು, ‘ನಾನು ಈಕೆಯನ್ನು ಮದುವೆಯಾಗಿದ್ದೇನೆ’ ಎಂದು ಹೇಳಿಕೊಂಡು ಫೇಸ್‌ಬುಕ್‌ನಲ್ಲಿ ವಿಡಿಯೊ ಹರಿಬಿಟ್ಟಿದ್ದ. 

‘ನಾನು ಇವಳನ್ನು ಅಪಹರಣ ಮಾಡಿಕೊಂಡು ಬಂದಿಲ್ಲ’ ಎಂದು ಆತ ಹೇಳಿದ್ದ. ಆ ಬಗ್ಗೆ ಮಾತನಾಡಿದ್ದ ಯುವತಿ, ‘ಇಷ್ಟಪಟ್ಟೇ ಇವನ ಜೊತೆ ಬಂದಿದ್ದೇನೆ. ಮದುವೆಯನ್ನೂ ಆಗಿದ್ದೇನೆ. ನನ್ನನ್ನು ಯಾರೂ ಅಪಹರಣ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಳು.

‘ಹುಡುಗಿ ಮನೆಯವರು ನನ್ನನ್ನು ಕೊಲೆ ಮಾಡಿಸಲು ಓಡಾಡುತ್ತಿದ್ದಾರೆ. ಪೊಲೀಸರು ಅವರಿಗೆ ಸಹಕಾರ ನೀಡುತ್ತಿದ್ದಾರೆ. 

ಎಲ್ಲೋ ಒಂದು ಕಡೆ ನಾವಿಬ್ಬರು ಜೀವನ ಮಾಡಿಕೊಂಡು ಸುಖವಾಗಿ ಇರುತ್ತೇವೆ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ’ ಎಂದು ಮನು ಕೋರಿದ್ದ.

ಆ ವಿಡಿಯೊ ಗಮನಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು, ಮನುಗಾಗಿ ಹುಡುಕಾಟ ನಡೆಸುತ್ತಿದ್ದರು. ಅಷ್ಟರಲ್ಲೇ ಆತ ಕೊಲೆಯಾಗಿದ್ದು, ಇದೊಂದು ಮರ್ಯಾದೆ ಹತ್ಯೆ ಇರಬಹುದು ಎಂಬ ಅನುಮಾನ ಪೊಲೀಸರಿಗೆ ಬಂದಿದೆ. 

‘ಕೊರಟಗೆರೆ ತಾಲ್ಲೂಕಿನ ಜಟ್ಟಿ ಅಗ್ರಹಾರ ಹಾಗೂ ಥರಟಿ ಗ್ರಾಮದ ನಡುವಿನ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಕೊಲೆ ಮಾಡಲಾಗಿದ್ದು, ಆತ ಬೆಂಗಳೂರಿನ ಮನು ಎಂಬ ಮಾಹಿತಿ ಇದೆ. ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಅವರ ಶವವನ್ನು ಗುರುತಿಸಿದ ಬಳಿಕವೇ ಹೆಸರು ಖಾತ್ರಿಯಾಗಲಿದೆ’ ಎಂದು ತುಮಕೂರು ಹೆಚ್ಚುವರಿ ಎಸ್ಪಿ ಶೋಭಾರಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುವಕನ ಕೈಗಳನ್ನು ಹಗ್ಗದಿಂದ ಕಟ್ಟಲಾಗಿದೆ. ತಲೆ, ಮುಖ, ಕುತ್ತಿಗೆಗೆ ಲಾಂಗುಗಳಿಂದ ಹೊಡೆಯಲಾಗಿದೆ. ಶವದ ಸಮೀಪದಲ್ಲೇ ಇದ್ದ ಪೊದೆಯಲ್ಲಿ 2 ಲಾಂಗ್‌ಗಳು ಹಾಗೂ ಒಂದು ಚಾಕು ಪತ್ತೆಯಾಗಿದೆ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !