ಚೌಕಿ ನರಸಿಂಹನ ಕೊಲೆ ಪ್ರಕರಣ: 22 ಸಲ ಇರಿದು ಕೊಂದವನ ಕಾಲಿಗೆ ಗುಂಡೇಟು

ಬುಧವಾರ, ಏಪ್ರಿಲ್ 24, 2019
28 °C
ಮಂಡ್ಯದಲ್ಲಿ ಅಡಗಿದ್ದ ಹಂತಕರು * ಬೈಕ್‌ ವಿಚಾರಕ್ಕೆ ನಡೆದಿದ್ದ ಜಗಳ

ಚೌಕಿ ನರಸಿಂಹನ ಕೊಲೆ ಪ್ರಕರಣ: 22 ಸಲ ಇರಿದು ಕೊಂದವನ ಕಾಲಿಗೆ ಗುಂಡೇಟು

Published:
Updated:
Prajavani

ಬೆಂಗಳೂರು: ಅನ್ನಪೂರ್ಣೇಶ್ವರಿನಗರ ಮುಖ್ಯರಸ್ತೆಯಲ್ಲಿ ಏ.2ರ ರಾತ್ರಿ ನರಸಿಂಹ ಅಲಿಯಾಸ್ ಚೌಕಿ (25) ಎಂಬಾತನನ್ನು ಚಾಕುವಿನಿಂದ 22 ಸಲ ಇರಿದು ಕೊಲೆ ಮಾಡಿದ್ದ ಆರೋಪಿಗಳ ಪೈಕಿ ಸಚಿನ್ (22) ಎಂಬಾತನ ಕಾಲಿಗೆ ರಾಜಗೋಪಾಲನಗರ ಠಾಣೆ ಇನ್‌ಸ್ಪೆಕ್ಟರ್ ಗುಂಡು ಹೊಡೆದಿದ್ದಾರೆ.

ಈ ಪ್ರಕರಣ ಪ್ರಮುಖ ಆರೋಪಿ ಕಾರ್ತಿಕ್, ಏ.8ರಂದೇ ನ್ಯಾಯಾಲಯಕ್ಕೆ ಶರಣಾಗಿದ್ದ. ತಲೆಮರೆಸಿಕೊಂಡಿದ್ದ ಸಚಿನ್ ಹಾಗೂ ಹಿತೇಶ್‌ನನ್ನು ಪೊಲೀಸರು ಬುಧವಾರ ಮಂಡ್ಯದಲ್ಲಿ ಸೆರೆ ಹಿಡಿದು ನಗರಕ್ಕೆ ಕರೆತಂದಿದ್ದರು.

‘ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ಪೀಣ್ಯದ ಶಿವಪುರ ಕೆರೆ ಬಳಿ ಎಸೆದಿರುವುದಾಗಿ ಆರೋಪಿಗಳು ಹೇಳಿದ್ದರು. ಹೀಗಾಗಿ, ಅವುಗಳನ್ನು ಜಪ್ತಿ ಮಾಡಲು ಸಿಬ್ಬಂದಿ ಗುರುವಾರ ಬೆಳಿಗ್ಗೆ ಸಚಿನ್ ಹಾಗೂ ಹಿತೇಶ್‌ನನ್ನು ಅಲ್ಲಿಗೆ ಕರೆದೊಯ್ದಿದ್ದರು. ಈ ವೇಳೆ ಸಚಿನ್, ಕಾನ್‌ಸ್ಟೆಬಲ್‌ಗಳಾದ ಜಯಶಂಕರ್ ಹಾಗೂ ಪ್ರಕಾಶ್ ನಾಯಕ್ ಅವರನ್ನು ತಳ್ಳಿ ಓಡಲಾರಂಭಿಸಿದ. ಬೆನ್ನಟ್ಟಿದಾಗ ಸಿಬ್ಬಂದಿ ಮೇಲೆ ಕಲ್ಲುಗಳನ್ನೂ ತೂರಿದ. ಈ ಹಂತದಲ್ಲಿ ಇನ್‌ಸ್ಪೆಕ್ಟರ್ ದಿನೇಶ್ ಪಾಟೀಲ ಆತನ ಕಾಲಿಗೆ ಗುಂಡು ಹೊಡೆದರು’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

ಬೈಕ್‌ಗಾಗಿ ಕಾದಾಟ: ತನ್ನ ಬಳಿ ಇದ್ದ ‘ಬಜಾಜ್ ಡಿಸ್ಕವರಿ’ ಬೈಕನ್ನು ಕಾರ್ತಿಕ್ ಎರಡು ವರ್ಷಗಳ ಹಿಂದೆ ನಂಜೇಶ್ ಎಂಬುವರ ಬಳಿ ಅಡವಿಟ್ಟು ₹ 14 ಸಾವಿರ ಪಡೆದುಕೊಂಡಿದ್ದ. ಇತ್ತೀಚೆಗೆ ಪಾರ್ಶ್ವವಾಯು ಕಾಯಿಲೆಗೆ ಗುರಿಯಾದ ನಂಜೇಶ್, ತಮ್ಮ ಸ್ನೇಹಿತನಾದ ನರಸಿಂಹನಿಗೆ ಆ ಬೈಕ್ ಕೊಟ್ಟಿದ್ದರು. ‘ಇದನ್ನು ನೀನೇ ಓಡಿಸು. ನಾನು ಕರೆದಾಗ ಮನೆಗೆ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗು’ ಎಂದೂ ಆತನಿಗೆ ಹೇಳಿದ್ದರು.

ಅಂತೆಯೇ ತನ್ನ ಕೆಲಸಗಳಿಗೆ ಆ ಬೈಕ್ ಬಳಸುತ್ತಿದ್ದ ನರಸಿಂಹ, ಏ.2ರ ರಾತ್ರಿ ಇಬ್ಬರು ಸ್ನೇಹಿತರ ಜತೆ ನಂದಿನಿ ಲೇಔಟ್‌ನ ‘ಸಿಕೆಎಂ ಬಾರ್‌’ಗೆ ತೆರಳಿದ್ದ. ಅಲ್ಲಿ ಕಾರ್ತಿಕ್‌ನ ಗ್ಯಾಂಗ್ ಸಹ ಇತ್ತು. ತನ್ನ ಬೈಕನ್ನು ನೋಡಿದ ಕಾರ್ತಿಕ್, ‘₹ 7 ಸಾವಿರ ಕೊಡುತ್ತೇನೆ. ಬೈಕ್ ವಾಪಸ್ ಕೊಡು’ ಎಂದಿದ್ದ. ಅದಕ್ಕೆ ಒಪ್ಪದ ನರಸಿಂಹ, ‘ನೀನು ಏನಿದ್ದರೂ ನಂಜೇಶ್ ಬಳಿ ಮಾತನಾಡು. ಅವರು ಹೇಳಿದರೆ ಬೈಕ್ ಕೊಡುತ್ತೇನೆ’ ಎಂದು ಹೇಳಿದ್ದ. ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು.

ಆಗ ನರಸಿಂಹ, ‘ಇದೇ 24ರಂದು ನಿನ್ನ ಮದುವೆ ಅಂತೆ. ಅದು ಹೇಗೆ ಮದುವೆ ನಡೆಯುತ್ತದೆ ನಾನೂ ನೋಡುತ್ತೇನೆ. ಕಲ್ಯಾಣ ಮಂಟಪಕ್ಕೇ ನುಗ್ಗಿ ಕತ್ತರಿಸಿ ಹಾಕುತ್ತೇನೆ’ ಎಂದು ಕಾರ್ತಿಕ್‌ಗೆ ಧಮ್ಕಿ ಹಾಕಿದ್ದ. ಇದರಿಂದ ಕುಪಿತಗೊಂಡ ಆತ, ನರಸಿಂಹನನ್ನು ಮುಗಿಸಲು ಆ ಕ್ಷಣದಲ್ಲೇ ಸಂಚು ರೂಪಿಸಿದ್ದ.

ಸ್ವಲ್ಪ ಸಮಯದ ಬಳಿಕ ಸ್ನೇಹಿತರು ಮನೆಗೆ ತೆರಳಿದ್ದರಿಂದ ನರಸಿಂಹ ಒಂಟಿಯಾಗಿದ್ದ. ಆಗ ತಾನೇ ಹೋಗಿ ಆತನನ್ನು ಮಾತನಾಡಿಸಿದ್ದ ಕಾರ್ತಿಕ್, ‘ನನ್ನಿಂದ ತಪ್ಪಾಯಿತು. ಇಬ್ಬರೂ ರಾಜಿ ಆಗಿಬಿಡೋಣ’ ಎಂದು ನಂಬಿಸಿ ಮತ್ತೆ ಕುಡಿಸಿದ್ದ. ಆ ನಂತರ ರಾತ್ರಿ 11.30ರ ಸುಮಾರಿಗೆ ಎಲ್ಲರೂ ಬಾರ್‌ನಿಂದ ಹೊರ ಬಂದಿದ್ದರು.

ತಾನು ತಂದಿದ್ದ ‘ಡಿಯೊ’ ಸ್ಕೂಟರನ್ನು ಹಿತೇಶ್‌ಗೆ ಕೊಟ್ಟ ಕಾರ್ತಿಕ್, ‘ನನ್ನನ್ನು ಲಗ್ಗೆರೆ ಬಳಿ ಬಿಡು’ ಎಂದು ನರಸಿಂಹನ ಬೈಕ್ ಹತ್ತಿ ಕುಳಿತಿದ್ದ. ಅವರಿಬ್ಬರೂ ಲಗ್ಗೆರೆ ಕಡೆ ಹೊರಟಾಗ, ಕಾರ್ತಿಕ್‌ನ ಸೂಚನೆಯಂತೆ ಹಿತೇಶ್ ಹಾಗೂ ಸಚಿನ್ ಹಿಂಬಾಲಿಸಿ ಬಂದಿದ್ದರು.

ಮತ್ತೆ ಕುಡಿಸಿದರು: ಲಗ್ಗೆರೆ ಮುಖ್ಯರಸ್ತೆಯ ‘ವಾಯುನಂದನ’ ಬಾರ್‌ನಲ್ಲಿ ನರಸಿಂಹನಿಗೆ ಮತ್ತೆ ಕುಡಿಸಿದ ಕಾರ್ತಿಕ್, ಆ ನಂತರ 12.15ರ ಸುಮಾರಿಗೆ ಅನ್ನಪೂರ್ಣೇಶ್ವರಿನಗರಕ್ಕೆ ಕರೆದೊಯ್ದು ಹೊಟ್ಟೆ ಹಾಗೂ ಎದೆಗೆ 22 ಸಲ ಇರಿದಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಯ ಸುಳಿವು ಆಧರಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಇದರ ಬೆನ್ನಲ್ಲೇ ಕಾರ್ತಿಕ್, ನ್ಯಾಯಾಲಯಕ್ಕೆ ಶರಣಾಗಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !