ಹನೂರು: ಗಾಂಜಾ ಮಾರಿದ ದುಡ್ಡಿಗಾಗಿ ಬಿತ್ತು ಹೆಣ; ಇಬ್ಬರ ಬಂಧನ

ಸೋಮವಾರ, ಜೂಲೈ 22, 2019
27 °C
ವ್ಯಕ್ತಿಯ ಕತ್ತು ಕೊಯ್ದು ಸುಟ್ಟುಹಾಕಿದ ಪ್ರಕರಣ ಭೇದಿಸಿದ ಹನೂರು ಪೊಲೀಸರು

ಹನೂರು: ಗಾಂಜಾ ಮಾರಿದ ದುಡ್ಡಿಗಾಗಿ ಬಿತ್ತು ಹೆಣ; ಇಬ್ಬರ ಬಂಧನ

Published:
Updated:
Prajavani

ಚಾಮರಾಜನಗರ: ಹನೂರು ತಾಲ್ಲೂಕಿನ ಮಣಗಳ್ಳಿ ಸಮೀಪದ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ವೆಂಕಟಯ್ಯ (60) ಎಂಬುವವರ ಶವ ಪತ್ತೆಯಾದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಗಾಂಜಾ ಮಾರಾಟದಿಂದ ಬಂದ ಹಣದ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಹೇಳಿರುವ ಪೊಲೀಸರು, ಬಂಡಳ್ಳಿ ಗ್ರಾಮದ ಶಫೀವುಲ್ಲಾ ಷರೀಫ್‌ (52) ಮತ್ತು ಆರ್‌.ಎಸ್‌.ದೊಡ್ಡಿ ಗ್ರಾಮದ ಫರಾತ್‌ ಖಾನ್‌ (48) ಎಂಬುವವರನ್ನು ಭಾನುವಾರ ಬಂಧಿಸಿದ್ದಾರೆ. ಶಫೀವುಲ್ಲಾ ಅವರು ವೃತ್ತಿಯಲ್ಲಿ ಟೈಲರ್‌ ಆಗಿದ್ದರೆ, ಫರಾತ್‌ ಗಾರೆ ಕೆಲಸ ಮಾಡುತ್ತಾರೆ.

ವೆಂಕಟಯ್ಯ ಹಾಗೂ ಇಬ್ಬರು ಆರೋಪಿಗಳು ಪರಸ್ಪರ ಪರಿಚಿತರಾಗಿದ್ದು, ಗಾಂಜಾ ಅಕ್ರಮ ಮಾರಾಟ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಎಚ್‌.ಡಿ.ಆನಂದಕುಮಾರ್‌ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.

‘23ರಂದು ಸುಟ್ಟು ಕರಕಲಾಗಿ ಅರೆಬೆಂದ ಸ್ಥಿತಿಯಲ್ಲಿದ್ದ ಶವವನ್ನು ನೋಡಿರುವುದಾಗಿ ಕೆಂಪಯ್ಯನವರು ನೀಡಿದ ಮಾಹಿತಿ ಮೇರೆಗೆ ಮಣಗಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು ಅವರು ಹನೂರು ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆಗೆ ಕೊಳ್ಳೇಗಾಲದ ಡಿವೈಎಸ್‌ಪಿ ಪುಟ್ಟಮಾದಯ್ಯ, ಹನೂರು ಠಾಣೆ ಇನ್‌ಸ್ಪೆಕ್ಟರ್‌ ಮೋಹಿತ್‌ ಸಹದೇವ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು’ ಎಂದು ಆನಂದ ಕುಮಾರ್‌ ಅವರು ತಿಳಿಸಿದರು. 

‘ಕೆಲವು ದಿನಗಳ ಹಿಂದೆಯೇ ಈ ಕೊಲೆ ನಡೆದಿರಬಹುದು ಎಂದು ಸಂಶಯದಿಂದ ತನಿಖೆ ಆರಂಭಿಸಲಾಯಿತು. ಕಾಣೆಯಾದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾಗ ವೆಂಕಟಯ್ಯ ಅವರು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಇದರ ಆಧಾರದಲ್ಲಿ ತನಿಖೆ ಆರಂಭಿಸಲಾಯಿತು’ ಎಂದು ಅವರು ಹೇಳಿದರು. 

ಅಕ್ರಮ ಗಾಂಜಾ ಮಾರಾಟ: ‘ತನಿಖೆ ನಡೆಸುತ್ತಿರುವಾಗ ವೆಂಕಟಯ್ಯ ಹಾಗೂ ಆರೋಪಿಗಳು ಅಕ್ರಮ ಗಾಂಜಾ ಮಾರಾಟ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದು ಬಂತು. ಇಬ್ಬರು ಆರೋಪಿಗಳು ಗಾಂಜಾವನ್ನು ತಂದು ವೆಂಕಟಯ್ಯನಿಗೆ ಕೊಟ್ಟು ಮಾರಾಟ ಮಾಡಲು ಹೇಳುತ್ತಿದ್ದರು. ವೆಂಕಟಯ್ಯ ಅದನ್ನು ಮಾರುತ್ತಿದ್ದರು’ ಎಂದು ಅವರು ಮಾಹಿತಿ ನೀಡಿದರು.

‘ಗಾಂಜಾ ಮಾರಾಟದಿಂದ ಬಂದ ₹ 50 ಸಾವಿರ ಹಣವನ್ನು ಮೃತ ವೆಂಕಟಯ್ಯ ಶಫೀವುಲ್ಲಾ ಖಾನ್‌ಗೆ ಕೊಡಬೇಕಿತ್ತು. ಆದರೆ, ಆರು ತಿಂಗಳಿನಿಂದ ಏನೇನೋ ಕಾರಣ ಹೇಳಿ ಹಣ ಕೊಡುವುದಕ್ಕೆ ವೆಂಕಟಯ್ಯ ಸತಾಯಿಸುತ್ತಿದ್ದರು. ಇದರಿಂದಾಗಿ ಇಬ್ಬರ ನಡುವೆ ಜಗಳ ಆಗಿತ್ತು. ಹಾಗಾಗಿ ಶಫೀವುಲ್ಲಾ ಖಾನ್‌, ಫರಾತ್‌ ಖಾನ್‌ ನೆರವು ಪಡೆದು ವೆಂಕಟಯ್ಯ ಅವರನ್ನು ನಿರ್ದಿಷ್ಟ ಸ್ಥಳಕ್ಕೆ ಬರುವುದಕ್ಕೆ ಹೇಳಿ, ಕತ್ತಿನಿಂದ ಕುತ್ತಿಗೆಗೆ ಹೊಡೆದು ಬಳಿಕ ಕೊಯ್ದು ಬೇರ್ಪಡಿಸಿ ಸ್ವಲ್ಪ ದೂರದಲ್ಲಿ ತಲೆ ಸುಟ್ಟು ಹಾಕಿ, ನಂತರ ದೇಹವನ್ನೂ ಸುಟ್ಟು ಹಾಕಿದ್ದರು’ ಎಂದು ಅವರು ವಿವರಿಸಿದರು. 

ಬೆದರಿಕೆ ಒಡ್ಡಿದ್ದ ಆರೋಪಿಗಳು: ‘ವೆಂಕಟಯ್ಯ ಸಂಬಂಧಿ ರಾಮಚಂದ್ರ ಅವರ ಕಣ್ಣೆದುರೇ ಈ ಕೃತ್ಯ ನಡೆದಿದೆ. ಆರೋಪಿಗಳು ಹೇಳಿದ್ದ ಜಾಗಕ್ಕೆ ವೆಂಕಟಯ್ಯ ಅವರನ್ನು ರಾಮಚಂದ್ರ ತಮ್ಮ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ದೂರದಿಂದ ಅವರು ಈ ಘಟನೆಯನ್ನು ನೋಡಿದ್ದಾರೆ. ಯಾರಿಗಾದರೂ ತಿಳಿಸಿದರೆ ವೆಂಕಟಯ್ಯ ಅವರಿಗೆ ಆದ ಗತಿಯೇ ನಿಮಗೂ ಆಗಲಿದೆ ಎಂದು ಆರೋಪಿಗಳು ರಾಮಚಂದ್ರ ಅವರನ್ನು ಬೆದರಿಸಿದ್ದರು. ಹಾಗಾಗಿ, ಅವರು ದೂರು ಕೊಟ್ಟಿರಲಿಲ್ಲ’ ಎಂದು ಆನಂದಕುಮಾರ್‌ ಹೇಳಿದರು.

ಬಹುಮಾನ ಘೋಷಣೆ: ‘ಈ ಪ್ರಕರಣವನ್ನು ಪೊಲೀಸರ ತಂಡ ಅತ್ಯಂತ ಕಡಿಮೆ ಅವಧಿಯಲ್ಲಿ ಭೇದಿಸಿದೆ. ಹಾಗಾಗಿ ಎಲ್ಲ ಸಿಬ್ಬಂದಿಗೆ ಬಹುಮಾನ ಘೋಷಿಸಲಾಗಿದೆ. ತಂಡದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ನಾಗೇಶ್‌, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಸಿದ್ದೇಶ್‌ ಕುಮಾರ್‌, ಮಲ್ಲಿಕಾರ್ಜುನ, ಕಾನ್‌ಸ್ಟೆಬಲ್‌ಗಳಾದ ಪ್ರದೀಪ್‌ಕುಮಾರ್‌, ಶೆಹನ್‌ಷಾ ಮುಖಂದರ್‌, ರಾಜು, ಭಗೀರಥ, ವಿನಯ್‌ ಇದ್ದರು’ ಎಂದು ಹೇಳಿದರು.

18ಕ್ಕೆ ನಾಪತ್ತೆ, 20ಕ್ಕೆ ದೂರು ದಾಖಲು

ಜೂನ್‌ 18ರಂದು ಹೊರಗಡೆ ಹೋಗಿ ಬರುವುದಾಗಿ ಹೇಳಿ ಮನೆ ಬಿಟ್ಟಿದ್ದ ವೆಂಕಟಯ್ಯ, ರಾತ್ರಿ 11 ಗಂಟೆಯಾದರೂ ಬಂದಿರಲಿಲ್ಲ. ಸಂಬಂಧಿಕರ ಮನೆ ಹಾಗೂ ಗ್ರಾಮದ ಸುತ್ತಮುತ್ತ ಹುಡುಕಾಟ ನಡೆಸಿದರೂ ಪತ್ತೆಯಾಗದೆ ಇದ್ದುದರಿಂದ  ಜೂನ್‌ 20ರಂದು ಅವರ ಮಗ ಹರೀಶ್ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. 

ಜೂನ್‌ 23ರಂದು ಕುರಿ ಮೇಯಿಸಲು ಹೋದವರು ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಕಂಡು ಗ್ರಾಮಸ್ಥರಿಗೆ ತಿಳಿಸಿದ್ದರು. ವೆಂಕಟಯ್ಯ ಅವರ ಪತ್ನಿ ಶವದ ಬಳಿ ಇದ್ದ ಬಟ್ಟೆ ಹಾಗೂ ಕಾಲನ್ನು ನೋಡಿ ತನ್ನ ಗಂಡ ಎಂಬುದನ್ನು ದೃಢಪಡಿಸಿದ್ದರು. 

‘ಬೆಂಗಳೂರಿನಲ್ಲಿ ಮಾರಾಟ’

‘ಆರೋಪಿಗಳು ಮತ್ತು ವೆಂಕಟಯ್ಯ ಎಷ್ಟು ಸಮಯದಿಂದ ಗಾಂಜಾ ಮಾರಾಟ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಇವರು ವೆಂಕಟಯ್ಯನಿಗೆ ಗಾಂಜಾ ತಲುಪಿಸುತ್ತಿದ್ದರು. ಅವರು ಅದನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂಬ ಸಂಗತಿ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು’ ಎಂದು ಆನಂದಕುಮಾರ್‌ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಹನೂರು ಭಾಗದಲ್ಲಿ ಗಾಂಜಾ ಬೆಳೆಯುವುದು ಮತ್ತು ಮಾರಾಟ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೆಚ್ಚಿನ ಪ್ರಕರಣಗಳು ಅರಣ್ಯ ಪ್ರದೇಶದಲ್ಲಿ ಬೆಳೆದ ಗಾಂಜಾವನ್ನು ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ನೆರವನ್ನು ಪಡೆದು, ದಂಧೆಯನ್ನು ಮಟ್ಟಹಾಕಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !