ಹೋಟೆಲ್ ಮುಂದೆ ರೌಡಿಯ ಬರ್ಬರ ಹತ್ಯೆ

7
ಮೇಡಹಳ್ಳಿಯಲ್ಲಿ ಘಟನೆ

ಹೋಟೆಲ್ ಮುಂದೆ ರೌಡಿಯ ಬರ್ಬರ ಹತ್ಯೆ

Published:
Updated:
ಮಂಜುನಾಥ್

ಬೆಂಗಳೂರು: ಹಳೆ ಮದ್ರಾಸ್ ರಸ್ತೆಯ ಮೇಡಹಳ್ಳಿಯಲ್ಲಿರುವ ‘ಹೆವೆನ್’ ಹೋಟೆಲ್ ಬಳಿ ದುಷ್ಕರ್ಮಿಗಳು ರೌಡಿ ಮಂಜುನಾಥ್ ಅಲಿಯಾಸ್ ವಾಟರ್ ಮಂಜ (32) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದೆ. ‘ಹಣಕಾಸಿನ ವಿಚಾರವಾಗಿ ಅಯ್ಯಪ್ಪನಗರ ನಿವಾಸಿ ಚರಣ್‌ರಾಜ್ ಜತೆ ಮಂಜ ಜಗಳವಾಡಿಕೊಂಡಿದ್ದ. ಅದೇ ದ್ವೇಷದಲ್ಲಿ ಆತ ತನ್ನ ಸ್ನೇಹಿತರಾದ ಮುರಳಿ ಹಾಗೂ ರಘು ಜತೆ ಸೇರಿ ಮಗನನ್ನು ಕೊಲೆ ಮಾಡಿದ್ದಾನೆ’ ಎಂದು ಮೃತನ ತಾಯಿ ರತ್ನಮ್ಮ ಆರೋಪಿಸಿದ್ದಾರೆ.

ಮನೆ ಹಾಗೂ ಹೋಟೆಲ್‌ಗಳಿಗೆ ಕುಡಿಯುವ ನೀರಿನ ಕ್ಯಾನ್‌ಗಳನ್ನು ಸರಬರಾಜು ಮಾಡುತ್ತಿದ್ದ ಮಂಜ, ತಾಯಿ, ಪತ್ನಿ ಹಾಗೂ ಒಂದೂವರೆ ವರ್ಷದ ಮಗನ ಜತೆ ಪ್ರಿಯಾಂಕನಗರದಲ್ಲಿ ನೆಲೆಸಿದ್ದ. ಅಪರಾಧ ಚಟುವಟಿಕೆ ಹಿನ್ನೆಲೆಯಲ್ಲಿ ಈತನ ವಿರುದ್ಧ ಕೆ.ಆರ್.ಪುರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು.

ನಿವೇಶನ ಖರೀದಿಸಿದ್ದ: ನಾಲ್ಕು ವರ್ಷಗಳ ಹಿಂದೆ ಈತ ಚರಣ್‌ನಿಂದ ₹ 15 ಲಕ್ಷ ಮೌಲ್ಯದ ನಿವೇಶನ ಖರೀದಿಸಿದ್ದ. ಆಗ ಅರ್ಧ ಹಣವನ್ನಷ್ಟೇ ಕೊಟ್ಟು, ಆ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದ. ಬಾಕಿ ಹಣ ನೀಡಿ ನಿವೇಶನ ನೋಂದಣಿ ಮಾಡಿಸಿಕೊಳ್ಳುವಂತೆ ಚರಣ್ ಇತ್ತೀಚೆಗೆ ಮಂಜನಿಗೆ ತಾಕೀತು ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.‌

ಇದೇ ವಿಚಾರವಾಗಿ ಕೆಲ ದಿನಗಳಿಂದ ಪರಸ್ಪರರ ನಡುವೆ ವಾಗ್ವಾದ ನಡೆಯುತ್ತಿತ್ತು. ಬುಧವಾರ ರಾತ್ರಿ ಸಂಬಂಧಿಯ ಮದುವೆಗೆ ಹೋಗಿ ವಾಪಸಾಗುತ್ತಿದ್ದ ಮಂಜನನ್ನು ಅಯ್ಯಪ್ಪನಗರದಲ್ಲಿ ಅಡ್ಡಗಟ್ಟಿದ್ದ ಆರೋಪಿ, ಬಾಕಿ ಹಣ ನೀಡುವಂತೆ ಕೇಳಿದ್ದ. ಅದಕ್ಕೆ ಆತ, ‘ನನ್ನ ಬಳಿ ಸದ್ಯ ಹಣವಿಲ್ಲ. ಕೊಡುವವರೆಗೆ ತಾಳ್ಮೆಯಿಂದ ಇರು. ಕಾಯುವುದಕ್ಕೆ ಆಗಲ್ಲ ಅಂದರೆ ನಾನೇನು ಮಾಡೋಕಾಗಲ್ಲ’ ಎಂದು ಪ್ರತಿಕ್ರಿಯಿಸಿದ್ದ.

ಇದರಿಂದ ಕುಪಿತಗೊಂಡ ಚರಣ್, ಸ್ವಲ್ಪ ಸಮಯದ ನಂತರ ಸ್ನೇಹಿತ ರಘುನನ್ನು ಕರೆದುಕೊಂಡು ಪುನಃ ಮಂಜನ ಮನೆ ಹತ್ತಿರ ಹೋಗಿದ್ದ. ‘ಹಣ ಇಲ್ಲದಿದ್ದರೆ, ನಿವೇಶನವನ್ನು ಮತ್ತೆ ನಮಗೇ ಮಾರಾಟ ಮಾಡು’ ಎಂದು ಹೇಳಿದ್ದ. ಮಂಜ ಅದಕ್ಕೂ ಒಪ್ಪದಿದ್ದಾಗ ಪರಸ್ಪರರ ನಡುವೆ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಆತನ ತಾಯಿಯೇ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದರು ಎಂದು ಗೊತ್ತಾಗಿದೆ.

ರಾತ್ರಿಯೇ ಸಂಚು: ಈ ಗಲಾಟೆಯಿಂದ ಕುಪಿತಗೊಂಡ ಚರಣ್, ಎದುರಾಳಿಯನ್ನು ಕೊಲ್ಲಲು ರಾತ್ರಿಯೇ ಸಂಚು ರೂಪಿಸಿದ್ದಾನೆ.  ಆರೋಪಿಗಳು ಗುರುವಾರ ಮಧ್ಯಾಹ್ನ ಮಂಜನ ಟೆಂಪೊವನ್ನು ಬೈಕ್‌ಗಳಲ್ಲಿ ಹಿಂಬಾಲಿಸಿದ್ದಾರೆ. ಆತ ಹೆವೆನ್‌ ಹೋಟೆಲ್‌ಗೆ ಕ್ಯಾನ್‌ಗಳನ್ನು ಪೂರೈಸಿ ಹೊರಬರುತ್ತಿದ್ದಂತೆಯೇ, ಮಚ್ಚು–ಲಾಂಗುಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ರಕ್ಷಣೆಗೆ ಬಂದ ಹೋಟೆಲ್‌ ಮಾಲೀಕರು ಹಾಗೂ ನೌಕರರಿಗೂ ಬೆದರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !