ಬುಧವಾರ, ಆಗಸ್ಟ್ 21, 2019
28 °C

ಕೊಲೆ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ

Published:
Updated:
Prajavani

ಚಾಮರಾಜನಗರ: ಶಿಕ್ಷಕ ರಂಗಸ್ವಾಮಿ ಅವರ ಕೊಲೆ ಪ್ರಕರಣದ ಆರೋಪಿಗಳಾದ ಬಸವರಾಜೇಶ್ವರಿ, ರಘು ಹಾಗೂ ಸಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಕೊಲೆ ಪ್ರಕರಣದ ವಿವರಗಳನ್ನು ನೀಡಿದರು. 

‘ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ನಾಲ್ಕು ದಿನಗಳಲ್ಲಿ ತನಿಖಾಧಿಕಾರಿಗಳು ಪ್ರಕರಣ ಭೇದಿಸಿದ್ದಾರೆ. ಅವರಿಗೆ ನಗದು ಬಹುಮಾನ ನೀಡಲಾಗು‌ವುದು’ ಎಂದು ಅವರು ಹೇಳಿದರು. 

ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದರು: ‘ರಾಜೇಶ್ವರಿ ಹಾಗೂ ರಂಗಸ್ವಾಮಿ ನಡುವೆ ಅನೈತಿಕ ಸಂಬಂಧ ಇತ್ತು. ರಾಜೇಶ್ವರಿಯ ಅಶ್ಲೀಲ ವಿಡಿಯೊ ತೆಗೆದು ಆಕೆಯನ್ನು ಲೈಂಗಿಕಕ್ರಿಯೆಗೆ ರಂಗಸ್ವಾಮಿ ಪೀಡಿಸುತ್ತಿದ್ದರು. ಈ ವಿಷಯವನ್ನು ರಾಜೇಶ್ವರಿ ಅವರು ರಘು ಹಾಗೂ ಸಿದ್ದು ಅವರಿಗೆ ತಿಳಿಸಿದ್ದರು. ಮೂವರೂ ಸೇರಿ ಹೆಲ್ಮೆಟ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಕಾರು ಚಲಾಯಿಸುವಾಗ ಬೆಂಕಿ ಹತ್ತಿಕೊಂಡು ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ರಂಗಸ್ವಾಮಿ ಅವರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲಾಗಿತ್ತು’ ಎಂದು ಅವರು ವಿವರಿಸಿದರು.

ತನಿಖಾ ತಂಡದಲ್ಲಿ ಗುಂಡ್ಲುಪೇಟೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಚ್‌.ಎನ್‌.ಬಾಲಕೃಷ್ಣ, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಲೋಹಿತ್‌ ಕುಮಾರ್, ಚಿಕ್ಕರಾಜಶೆಟ್ಟಿ, ಸಿಬ್ಬಂದಿ ಎಂ.ಗಣೇಶ್, ಶಿವರಾಜು, ಸಿದ್ದರಾಮು, ವಿಶ್ವ, ರಾಜು, ನಾಗೇಶ್, ನಾಗೇಂದ್ರ, ಜಗದೀಶ್, ಗುರುಪ್ರಸಾದ್, ಆರ್.ಸ್ವಾಮಿ, ಕುಮಾರ, ಲತಾ, ಬಂಗಾರಮ್ಮ ಅವರು ಇದ್ದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಡಿವೈಎಸ್‌ಪಿ ಜೆ.ಮೋಹನ್‌ ಇದ್ದರು. 

Post Comments (+)