ಜಗಳ ಬಿಡಿಸಲು ಹೋದವನ ಹತ್ಯೆ; ಮತ್ತಿಬ್ಬರ ಬಂಧನ

7

ಜಗಳ ಬಿಡಿಸಲು ಹೋದವನ ಹತ್ಯೆ; ಮತ್ತಿಬ್ಬರ ಬಂಧನ

Published:
Updated:

ಬೆಂಗಳೂರು: ಜಗಳ ಬಿಡಿಸಲು ಹೋಗಿದ್ದ ವಿನೋದ್ ಕುಮಾರ್ (35) ಎಂಬುವರಿಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿ ಗೌತಮ್‌ನನ್ನು (22) ಕಾಲಿಗೆ ಗುಂಡು ಹೊಡೆದು ಸೆರೆಹಿಡಿದಿದ್ದ ಯಶವಂತಪುರ ಪೊಲೀಸರು, ಈಗ ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

ಪ್ರಶಾಂತ್ ಅಲಿಯಾಸ್ ಅಡ್ಡು ಹಾಗೂ ಸಲ್ಮಾನ್‌ ಬಂಧಿತರು. ಮೂವರೂ ಆರೋಪಿಗಳು ಸೇರಿಕೊಂಡು ಜ.24ರ ಸಂಜೆ 6.30ರ ಸುಮಾರಿಗೆ ವಿನೋದ್‌ ಹಾಗೂ ಅವರ ಸ್ನೇಹಿತ ಮಾರುತಿ ಮೇಲೆ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ವಿನೋದ್‌, ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.

‘ಮನೆ ಸಮೀಪ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ವಿನೋದ್, ಮಾರುತಿ ಜತೆ ‘ಮಾತಾ ಸ್ಕೂಲ್’ ಬಳಿ ಬೈಕ್‌ನಲ್ಲಿ ಹೊರಟಿದ್ದರು. ಅದೇ ರಸ್ತೆಯಲ್ಲಿ ಸಂತೋಷ್‌ ಎಂಬುವರ ಜೊತೆ ಆರೋಪಿಗಳು ಜಗಳ ಮಾಡುತ್ತಿದ್ದರು. ಅದನ್ನು ನೋಡಿದ ವಿನೋದ್ ಹಾಗೂ ಮಾರುತಿ, ಜಗಳ ಬಿಡಿಸಲು ಹೋಗಿದ್ದರು. ಆಗ ಆರೋಪಿಗಳು, ಮಚ್ಚಿನಿಂದ ಹೊಡೆದಿದ್ದರು’ ಎಂದು ಯಶವಂತಪುರ ಪೊಲೀಸರು ಹೇಳಿದರು.

ವಿನೋದ್ ಪತ್ನಿ ಪ್ರತಿಭಾ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ತಂಡದಲ್ಲಿದ್ದ ಇನ್‌ಸ್ಪೆಕ್ಟರ್‌ ಮುದ್ದುರಾಜ, ಆರ್‌ಎಂಸಿ ಯಾರ್ಡ್ ಸಮೀಪದ ಪೈಪ್‌ಲೈನ್ ರಸ್ತೆಯಲ್ಲಿ ಗೌತಮ್ ಕಾಲಿಗೆ ಗುಂಡು ಹೊಡೆದು ಸೆರೆಹಿಡಿದಿದ್ದರು.

ಪ್ರಶಾಂತ್ ಹಾಗೂ ಸಲ್ಮಾನ್, ತಲೆಮರೆಸಿಕೊಂಡು ಓಡಾಡುತ್ತಿದ್ದರು. ಸ್ನೇಹಿತರು ಹಾಗೂ ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು, ಅವರಿಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !