ಸಂಗೀತ– ನೃತ್ಯ ಪರೀಕ್ಷೆಯಲ್ಲಿ ಅವ್ಯವಸ್ಥೆ

ಬುಧವಾರ, ಜೂನ್ 26, 2019
26 °C

ಸಂಗೀತ– ನೃತ್ಯ ಪರೀಕ್ಷೆಯಲ್ಲಿ ಅವ್ಯವಸ್ಥೆ

Published:
Updated:
Prajavani

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಭಾನುವಾರ ಆಯೋಜಿಸಿದ್ದ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಸ್ಥೆ ಮನೆಮಾಡಿತ್ತು ಎಂದು ಪೋಷಕರು ದೂರಿದ್ದಾರೆ.

‘ಚಾಮರಾಜಪೇಟೆಯಲ್ಲಿದ್ದ ಪರೀಕ್ಷಾ ಕೇಂದ್ರಗಳಲ್ಲಿ ಮಾಹಿತಿ ನೀಡಲು ಅಗತ್ಯ ಸಿಬ್ಬಂದಿ ಇರಲಿಲ್ಲ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯೂ ಇರಲಿಲ್ಲ’ ಎಂದು ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಗಳನ್ನು ಹಾಡುಗಾರಿಕೆ, ವಾದ್ಯ ಸಂಗೀತ ಮತ್ತು ತಾಳವಾದ್ಯದ ಥಿಯರಿ ಪರೀಕ್ಷೆಗೆ ಚಾಮರಾಜಪೇಟೆ ಜನತಾ ವಿದ್ಯಾಲಯಕ್ಕೆ ಕರೆದುಕೊಂಡು ಹೋಗಿದ್ದೆ. ಪರೀಕ್ಷೆ ಎದುರಿಸಲು ಆ ಕೇಂದ್ರಕ್ಕೆ 450 ವಿದ್ಯಾರ್ಥಿಗಳು ಬಂದಿದ್ದರು. ಅವರನ್ನು ಪೋಷಕರು ಕಾರು–ಬೈಕ್‌ಗಳಲ್ಲಿ ಕರೆತಂದಿದ್ದರು. ವಾಹನಗಳನ್ನು ನಿಲ್ಲಿಸಲು ಸಹ ಅಲ್ಲಿ ಜಾಗ ಇರಲಿಲ್ಲ. ಇದರಿಂದ ವಾಹನಗಳ ಸಂಚಾರಕ್ಕೂ ಅಡಚಣೆಯಾಯಿತು’ ಎಂದರು.

‘ವಾಹಿನಿಗಳ ರಿಯಾಲಿಟಿ ಷೋಗಳಿಂದಾಗಿ ಮಕ್ಕಳಿಗೆ ಸಂಗೀತ, ನೃತ್ಯ ಕಲಿಸಲು ಪೋಷಕರು ಮುಂದಾಗುತ್ತಿದ್ದಾರೆ. ಹಾಗಾಗಿ ಮಂಡಳಿ ನಡೆಸುವ ಪರೀಕ್ಷೆಗಳನ್ನು ಎದುರಿಸುವವರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ. ಆದರೆ, ಪರೀಕ್ಷಾ ಮಂಡಳಿ ವ್ಯವಸ್ಥೆಗಳನ್ನು ಸುಧಾರಿಸುತ್ತಿಲ್ಲ’ ಎಂದು ಮತ್ತೊಬ್ಬ ಪೋಷಕರು ದೂರಿದರು.

‘ಸಂಗೀತದ ಪ್ರಾಯೋಗಿಕ ಪರೀಕ್ಷೆಗಳನ್ನು ಎದುರಿಸಲು ಹಾರ್ಮೋನಿಯಂ, ವೀಣೆಯಂತಹ ಸಂಗೀತ ಪರಿಕರಗಳೊಂದಿಗೆ, ಭರತನಾಟ್ಯ ಪ್ರಾಯೋಗಿಕ ಪರೀಕ್ಷೆಗೆ ಅಲಂಕಾರ ಮಾಡಿಕೊಂಡು ಬರಬೇಕಾಗುತ್ತದೆ. ಮಂಡಳಿಯು ಪ್ರಾಯೋಗಿಕ ಪರೀಕ್ಷೆ ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ ನಡೆಯಲಿದೆ ಎಂದು ತಿಳಿಸುತ್ತದೆ. ಅಲಂಕಾರ ಮಾಡಿಕೊಂಡು, ಅದು ಹಾಳಾಗದಂತೆ ಪರೀಕ್ಷೆಗಾಗಿ ಕಾಯುತ್ತ ಕೂರುವ ಸ್ಥಿತಿ ಇದೆ. ಪ್ರತಿ ವಿದ್ಯಾರ್ಥಿಗೆ ದಿನದ ನಿರ್ದಿಷ್ಟ ಸಮಯ ನೀಡಿ, ಪರೀಕ್ಷೆ ನಡೆಸಬೇಕು’ ಎಂದು ನೃತ್ಯ–ಸಂಗೀತ ಶಾಲೆಯೊಂದರ ಶಿಕ್ಷಕಿಯೊಬ್ಬರು ಒತ್ತಾಯಿಸಿದರು.

‘ಆನ್‌ಲೈನ್‌ನಲ್ಲಿ ಪರೀಕ್ಷೆಗಳಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಬೇಕು. ಪ್ರವೇಶ ಪತ್ರಗಳನ್ನು ಒಂದು ತಿಂಗಳ ಮುಂಚೆಯೇ ನೀಡುವ ವ್ಯವಸ್ಥೆ ಮಾಡಬೇಕು’ ಎಂದು ಸಂಗೀತ ಶಿಕ್ಷಕರೊಬ್ಬರು ಮನವಿ ಮಾಡಿದರು.

ಈ ಕುರಿತು ವಿಚಾರಿಸಲು ಪರೀಕ್ಷಾ ಮಂಡಳಿ ನಿರ್ದೇಶಕರಾದ (ಇತರೆ ಪರೀಕ್ಷೆಗಳು) ಕೆ.ಎಸ್‌.ಮಣಿ ಅವರಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗಲಿಲ್ಲ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !