ಕೆಳದಿ ದೇಗುಲದಲ್ಲಿ ಸಂಗೀತಶಾಸನ!

7

ಕೆಳದಿ ದೇಗುಲದಲ್ಲಿ ಸಂಗೀತಶಾಸನ!

Published:
Updated:
Deccan Herald

‘ಆ ಕಲ್ಲಿನ ಮೇಲಿದ್ದ ಸಂಕೇತಾಕ್ಷರಗಳು, ಇದು ಸಂಗೀತಶಾಸ್ತ್ರಕ್ಕೆ ಸೇರಿದ ಶಾಸನ ಎಂಬುದನ್ನು ಖಚಿತಪಡಿಸಿದವು. ಅದರಲ್ಲಿದ್ದ ತಾಳ ಪ್ರಸ್ತಾರ, ನನ್ನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು. ಖಚಿತವಾಗಿ, ಇದು ಸಂಗೀತ, ನೃತ್ಯ, ವಾದ್ಯದ ತಾಳಗಳಿಗೆ ಸಂಬಂಧಿಸಿದ ಮಾಹಿತಿ ನೀಡುವಂಥದ್ದೇ..’

ಸಾಗರ ತಾಲ್ಲೂಕು ಕೆಳದಿಯ ರಾಮೇಶ್ವರ ದೇವಸ್ಥಾನದ ನವರಂಗದಲ್ಲಿ ಒಂಬತ್ತು ಕಂಬಗಳ ಮಧ್ಯೆ ರಂಗಭೋಗದ ನೆಲದಲ್ಲಿ ಗುರುತಿಸಿದ ಅಕ್ಷರಗಳ ಬಗ್ಗೆ ತುಂಬಾ ಉತ್ಸಾಹದಿಂದ ವಿವರಣೆ ನೀಡಿದರು. ಬೆಂಗಳೂರಿನ ಮಹಾರಾಣಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರು ಮತ್ತು ಸಂಗೀತ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ. ಅವರ ಪ್ರಕಾರ ‘ಇದೊಂದು ಅಪರೂಪದ ಸಂಗೀತಶಾಸನ’. ಇದರಲ್ಲಿರುವ ಮಾಹಿತಿ ಸಂಗೀತ, ನೃತ್ಯ ಕ್ಷೇತ್ರದ ತಾಳಗಳ ಅಧ್ಯಯನಕ್ಕೆ ಸಹಕಾರಿಯಾಗಲಿದೆ’.

ಒಂದೆರಡು ತಿಂಗಳ ಹಿಂದೆ ಕೆಳದಿಯಲ್ಲಿ, ಕೆಳದಿ ರಿಸರ್ಚ್ ಫೌಂಡೇಷನ್, ತುಮಕೂರು ವಿಶ್ವವಿದ್ಯಾಲಯ ಮತ್ತು ಸಂಸ್ಕಾರ ಭಾರತಿ ಸಂಸ್ಥೆ ಆಶ್ರಯದಲ್ಲಿ ‘ತಾಳೆಗರಿ ಹಸ್ತಪ್ರತಿಗಳಲ್ಲಿ ಲಲಿತ ಕಲೆಗಳು’ ಎಂಬ ವಿಷಯದ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ನಡೆದಿತ್ತು. ಕಾರ್ಯಕ್ರಮದ ಭಾಗವಾಗಿ ಇತಿಹಾಸ ಸಂಶೋಧಕ ಡಾ. ಕೆಳದಿ ವೆಂಕಟೇಶ ಜೋಯಿಸ್ ಹಾಗೂ ನೃತ್ಯಗಾತಿ ಕರುಣಾ ವಿಜಯೇಂದ್ರ ಅವರೊಂದಿಗೆ ದೇವಸ್ಥಾನವನ್ನು ಪರಿಚಯ ಮಾಡಿಕೊಳ್ಳುತ್ತಿದ್ದಾಗ, ನವರಂಗದ ಕೆಳಭಾಗದ ಕಲ್ಲಿನ ಮೇಲಿದ್ದ ಸಂಕೇತಾಕ್ಷರಗಳು ನಾಗೇಂದ್ರ ಅವರನ್ನು ಸೆಳೆದವು. ತಾಳಪ್ರಸ್ತಾರದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದ ಶಾಸ್ತ್ರಿಯವರಿಗೆ, ಕಲ್ಲಿನ ಮೇಲಿದ್ದ ಅಂಕಿಗಳು ಖಚಿತವಾಗಿ ಇದು ಸಂಗೀತಕ್ಕೆ ಸಂಬಂಧಪಟ್ಟ ವಿಷಯ ಎಂದು ಖಚಿತಪಡಿಸಿಕೊಂಡರು.

ಈ ಶಾಸನದಲ್ಲಿರುವ ಸಂಕೇತಗಳನ್ನು ಪರ್ಮುಟೇಷನ್, ಕಾಂಬಿನೇಷನ್ ಮಾಡಿ ನೋಡಿ, ಇದು ತಾಳಗಳಿಗೆ ಸಂಬಂಧಿಸಿದ್ದು ಎಂದು ತನ್ನ ಜತೆಗಿದ್ದವರಿಗೆ ವಿವರಿಸಿದರು. ಇದನ್ನು ಆಧರಿಸಿ ಮತ್ತಷ್ಟು ಅಧ್ಯಯನ ಮಾಡಿದರೆ, ತಾಳಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳು ಲಭ್ಯವಾಗಬಹುದು ಎಂದು ಅಭಿಪ್ರಾಯಪಟ್ಟರು.

‘ತಾಳಪ್ರಸ್ತಾರ ಗೊತ್ತಿರುವವರು ಮಾತ್ರ ಇದನ್ನು ಓದಬಹುದು. ಈ ವಿಷಯದಲ್ಲಿ ನಾನು ತಾಳಪ್ರಸ್ತಾರ ತಜ್ಞ ಹೈದರಾಬಾದ್‌ನ ಅಕೆಳ್ಳಾ ಮಲ್ಲಿಕಾರ್ಜುನ ಶರ್ಮ ಅವರ ಬಳಿ 10 ವರ್ಷ ಅಭ್ಯಾಸ ಮಾಡಿದ್ದೇನೆ. ಹಾಗಾಗಿಯೇ ಈ ಸಂಕೇತಗಳನ್ನು ಡೀಕೋಡ್ ಮಾಡಿ ಅರ್ಥೈಸಿಕೊಳ್ಳಲು ಸಾಧ್ಯವಾಯಿತು’ ಎನ್ನುತ್ತಾರೆ ನಾಗೇಂದ್ರಶಾಸ್ತ್ರಿ.

‘ದೇಶದಲ್ಲಿ ಇಲ್ಲಿವರೆಗೂ ಎಲ್ಲೂ ತಾಳಗಳಿಗೆ ಸಂಬಂಧಿಸಿದ ಶಾಸನ ಇರಲಿಲ್ಲ. ಇಂಥದ್ದೊಂದು ಸಂಗೀತಶಾಸನ ಸಿಕ್ಕಿರುವುದು ಇದೇ ಮೊದಲು. ಇದರಿಂದ ತಾಳದ ಇತಿಹಾಸ ತಿಳಿಯಲು ಅನುಕೂಲ. ಸಂಗೀತ ಮಾತ್ರವಲ್ಲದೇ, ನೃತ್ಯ, ವಾದ್ಯಗಳ ಬಗ್ಗೆ ತಿಳಿಯಲು ಅನುಕೂಲವಾಗಲಿದೆ’ ಎಂದು ಅವರು ವಿವರಣೆ ನೀಡುತ್ತಾರೆ.

ಕೆಳದಿ ರಾಜರ ಸಂಗೀತ ಪ್ರೀತಿ
ಕರ್ನಾಟಕದ ಇತಿಹಾಸದಲ್ಲಿ ಮೈಸೂರು ಅರಸರ ಸಮಕಾಲೀನರಾಗಿರುವ ಕೆಳದಿ ಅರಸರ ಆಡಳಿತದಲ್ಲಿ ಸಂಗೀತ ಕ್ಷೇತ್ರಕ್ಕೆ ವಿಶೇಷ ಸ್ಥಾನ ನೀಡಲಾಗಿತ್ತು ಎನ್ನುವುದಕ್ಕೆ ಕೆಳದಿ ದೇವಾಲಯದಲ್ಲಿ ಪತ್ತೆಯಾಗಿರುವ ನೂತನ ಶಾಸನ ಸಾಕ್ಷಿಯಾಗುತ್ತದೆ.

‘ಕ್ರಿ.ಶ.1600ರಲ್ಲಿ ಗಂಗಪ್ಪ ಎಂಬ ವಿದ್ವಾಂಸರು ಈ ಶಾಸನದಲ್ಲಿ ತಾಳಪ್ರಸ್ತಾರವನ್ನು ಪಡಮೂಡಿಸಿದ್ದಾರೆ. ಅವರ ಹೆಸರನ್ನು ಶಾಸನದ ಮೇಲೆ ಕೆತ್ತಲಾಗಿದೆ. ಇಷ್ಟೊಂದು ಅಪ್ಪಟ ಶಾಸ್ತ್ರೀಯ ಸಂಗೀತದ ತಾಳದ ವಿವರಣೆ ಇರುವ ಶಾಸನ ತಮಿಳುನಾಡಿನ ಕುಡುಮಿಯಾಮಲೈ, ಆಂಧ್ರದ ತಿರುಪತಿಯ ಅನ್ನಮ್ಮಯ್ಯನ ಸುಳಾದಿ ಶಾಸನದಲ್ಲಿ ಮಾತ್ರ ಕಂಡುಬರುತ್ತದೆ’ ಎನ್ನುತ್ತಾರೆ ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ.

‘‌ಸಂಗೀತ ವಿದ್ವಾಂಸರಾಗಿದ್ದ ಗಂಗಪ್ಪ ಅವರಿಗೆ ಕೆಳದಿ ಅರಸರು ತೀರ್ಥಹಳ್ಳಿ ಸಮೀಪದ ಆರಗ ಗ್ರಾಮದ ಬಳಿ ಜಮೀನನ್ನು ಉಂಬಳಿ (ದಾನ) ನೀಡಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ’ ಎನ್ನುತ್ತಾರೆ ಇತಿಹಾಸ ಸಂಶೋಧಕ ಡಾ.ಕೆಳದಿ ವೆಂಕಟೇಶ ಜೋಯಿಸ್.
‘ಈ ಶಾಸನದಲ್ಲಿ ಚತುರಂಗ ಪ್ರಸ್ತಾರದ ವಿವರಗಳಿವೆ. ತಾಳಗಳ ಆರು ಅಂಗಗಳ ಪೈಕಿ ನಾಲ್ಕು ಅಂಗಗಳು ಬೆಳವಣಿಗೆಯಾಗುತ್ತಿದ್ದ ಕಾಲಕ್ಕೆ ಈ ಶಾಸನ ರಚನೆಯಾಗಿದೆ. ಇದೇ ಸಂಗೀತ ಶಾಸ್ತ್ರಕ್ಕೆ ಒಂದು ಚಾರಿತ್ರಿಕ ದಾಖಲೆ ದೊರಕಿದಂತಾಗಿದೆ’ ಎಂಬುದು ಶಾಸ್ತ್ರಿಯವರ ಅಭಿಪ್ರಾಯವಾಗಿದೆ.

ಈಗ ಪತ್ತೆಯಾಗಿರುವ ಸಂಗೀತ ಶಾಸನದ ಸಂಕೇತಗಳ ಅಧ್ಯಯನವಾದರೆ ನೃತ್ಯ, ವಾದ್ಯ, ಸಂಗೀತದ ತಾಳಗಳ ವೈವಿದ್ಯಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಹೊಸ ಹೊಳಹುಗಳು ದೊರಕುವ ನಿರೀಕ್ಷೆ ಇದೆ.
 


ಸಂಗೀತ ಶಾಸನ ಓದುತ್ತಿರುವ ಡಾ.ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ. 

ಸಂಗೀತ, ನೃತ್ಯ, ವಾದ್ಯಗಾರರ ಶಿಲ್ಪಗಳು...
ಕ್ರಿ.ಶ.1500ರಿಂದ 1763ರವರೆಗೆ ಹಿರಿಯ ವೆಂಕಟಪ್ಪ ನಾಯಕ, ದೊಡ್ಡ ಸಂಕಣ್ಣ ನಾಯಕ, ಶಿವಪ್ಪನಾಯಕ, ರಾಣಿ ಚೆನ್ನಮ್ಮಾಜಿ ಸೇರಿದಂತೆ ಹಲವು ಅರಸರು ಕೆಳದಿ ಸಾಮ್ರಾಜ್ಯವನ್ನು ಆಳಿದ್ದಾರೆ. ರಾಣಿ ಚೆನ್ನಮ್ಮಾಜಿ ಓರ್ವ ಮಹಿಳೆಯಾಗಿ 25 ವರ್ಷಗಳ ಕಾಲ ಆಳಿದ ಶ್ರೇಯಸ್ಸು ಕೆಳದಿ ಸಾಮ್ರಾಜ್ಯದ್ದು. ಶಿವಪ್ಪನಾಯಕ ಜಾರಿಗೆ ತಂದ ಹೊಸ ಕಂದಾಯ ಪದ್ದತಿ ‘ಸಿಸ್ತು’ ಇಂದಿಗೂ ಕಂದಾಯ ಇಲಾಖೆಗೆ ಮಾರ್ಗದರ್ಶಿಯಾಗಿದೆ.

ಕೆಳದಿ ದೇವಾಲಯವು ದ್ರಾವಿಡ, ಹೊಯ್ಸಳ ಶೈಲಿಯಲ್ಲಿ ಹಸಿರು ಬಣ್ಣದ ಕಲ್ಲಿನಿಂದ ನಿರ್ಮಾಣವಾಗಿದೆ. ಚಿಕ್ಕ ಗರ್ಭಗೃಹ, ಪ್ರದಕ್ಷಿಣಾ ಪಥ, ನವರಂಗ, ಮುಖಮಂಟಪಗಳಿವೆ.

ಜಗಲಿಯ ಹೊರ ಭಾಗದ ಒಂದು ದಿಂಡಿನಲ್ಲಿ ವಾದ್ಯಗಾರರು, ನರ್ತಕರ ಶಿಲ್ಪವಿದೆ. ಎರಡು ಎತ್ತರದ ಶಿವಲಿಂಗವಿರುವ ಗರ್ಭಗೃಹದ ಭಿತ್ತಿಯಲ್ಲಿ ಚಚ್ಚೌಕದ ಅರ್ಧ ಕಂಬಗಳ ಅಲಂಕಾರವಿದೆ. ನಡುವೆ ಕಣ್ಣಪ್ಪ, ಗರುಡ, ಹನುಮ, ಒಂಟೆ, ಆನೆ, ಮಿಥುನ ಶಿಲ್ಪಗಳು, ಆನೆಯ ಜೊತೆ ಹೋರಾಟ ಮಾಡಿದ ಯೋಧ, ಸೋಮಗ್ರಹಣ, ಮದ್ದಳೆಗಾರ, ಯೋಗನಿರತ ರಾಮೇಶ್ವರ ಮೊದಲಾದ ಶಿಲ್ಪಗಳು ಇವೆ.

ಸಂಗೀತ ಕ್ಷೇತ್ರಕ್ಕೆ ಕೆಳದಿ ಅರಸರ ಕಾಲದಲ್ಲಿ ವಿಶೇಷ ಸ್ಥಾನವನ್ನು ಕೊಡಲಾಗಿತ್ತು ಎನ್ನುವುದಕ್ಕೆ ರಾಮೇಶ್ವರ ದೇವಾಲಯದ ನವರಂಗದಲ್ಲಿ ಒಂಬತ್ತು ಕಂಬಗಳ ಮಧ್ಯೆ ರಂಗಭೋಗದ ನೆಲದಲ್ಲಿ ಈಗ ಬೆಳಕಿಗೆ ಬಂದಿರುವ ನೂತನ ಶಾಸನವೇ ಸಾಕ್ಷಿಯಾಗಿದೆ.

ಶಾಸನದ ಕುರಿತ ಹೆಚ್ಚಿನ ಮಾಹಿತಿಗೆ: ಡಾ. ಶ್ರೀಕಾಂತಂ ಅವರ ಸಂಪರ್ಕ ಸಂಖ್ಯೆ: 9845415592

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !