ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಗು ತೋಟವ ಮಾಡಿ..!

Last Updated 3 ಫೆಬ್ರುವರಿ 2023, 20:00 IST
ಅಕ್ಷರ ಗಾತ್ರ

‘ಜಾಗ ಕಿರಿದು, ಆದರೂ ಕೈತೋಟ ಮಾಡುವ ಕನಸು ಹಿರಿದು. ಹಾಗಾದರೆ ಈಗ ಏನ್ಮಾಡೋದು?’ - ಚಿಕ್ಕ ಮನೆಗಳು, ಅಪಾರ್ಟ್‌ಮೆಂಟ್/ ಫ್ಲ್ಯಾಟ್‌ ನಿವಾಸಿಗಳ ಪ್ರಶ್ನೆ ಇದು. ಇದಕ್ಕೆ ಚಿಂತಿಸುವುದು ಬೇಡ, ಕಿರಿದಾದ ಜಾಗದಲ್ಲೂ ಮನಸ್ಸಿಗೆ ಮುದ ನೀಡುವಂತಹ, ಮನೆಯಂಗಳದಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸುವಂತಹ ತೂಗು ತೋಟವನ್ನು ಮಾಡಲು ಸಾಧ್ಯವಿದೆ!

ಮನೆಯ ಅಂಗಳದಲ್ಲಿ ಎಲ್ಲೆಲ್ಲಿ ತುಸು ಬೆಳಕು ಬೀಳುವ ಜಾಗವಿರುತ್ತದೋ, ಅಲ್ಲಿರುವ ಗೋಡೆಗಳಿಗೆ, ಸೂರಿಗೆ ಹಗುರವಾದ ಕುಂಡಗಳನ್ನು ತೂಗುಬಿಟ್ಟು, ಅದರಲ್ಲಿ ಗಿಡಗಳನ್ನು ಬೆಳೆಸಬಹುದು. ಇದೇ ತೂಗು ತೋಟ ಅಥವಾ ಹ್ಯಾಂಗಿಂಗ್‌ ಗಾರ್ಡನ್‌.

ಈ ತೂಗು ತೋಟಕ್ಕೆ ಕುಂಡಗಳೇ ಆಗಬೇಕಿಲ್ಲ. ಮನೆಯಲ್ಲಿರುವ ವ್ಯರ್ಥವಾಗಿ ಬಿಸಾಡುವ ಬಕೆಟ್‌, ಟೇಬಲ್‌ಗಳ ಖಾನಿಗಳು, ಪೇಂಟ್ ಡಬ್ಬಗಳು, ಅಷ್ಟೇ ಏಕೆ, ನೀರು ಕುಡಿದು ಬಿಸಾಡುವ ಬಾಟಲಿಗಳಲ್ಲೂ ಗಿಡಗಳನ್ನು ಬೆಳೆಸಬಹುದು. ಇಂಥವುಗಳಲ್ಲಿ ಕ್ಯಾಕ್ಟಸ್‌ ಹಾಗೂ ಬಳ್ಳಿಯಾಗಿ ಹಬ್ಬುವ ಗಿಡಗಳನ್ನು ಬೆಳೆಸಬಹುದು.

ಹೇಗೆ ಮಾಡಬಹುದು? : ವ್ಯರ್ಥವಾಗಿರುವ ಪಿವಿಸಿ ಪೈಪ್‌ಗಳನ್ನು ಅಡ್ಡವಾಗಿ ಕತ್ತರಿಸಿ. ಅದರಲ್ಲಿ ಮಣ್ಣು–ಗೊಬ್ಬರ–ಮರಳು ಸಮಪ್ರಮಾಣ ದಲ್ಲಿ ಬೆರೆಸಿರುವ ಮಿಶ್ರಣವನ್ನು ತುಂಬಿ(ಕೊಕೊಪಿತ್‌ ಕೂಡ ಬಳಸಬಹುದು). ನಿಮಗೆ ಇಷ್ಟವಾದ ಬಳ್ಳಿಗಳಲ್ಲಿ ಅರಳುವ ಹೂವಿನ ಬೀಜಗಳನ್ನು ಹಾಕಿ. ಪೈಪ್‌ಗೆ ದಾರ ಕಟ್ಟಿ, ಸೂರಿಗೆ ತೂಗು ಹಾಕಿ. ವಾರ ಕಳೆಯುವುದರೊಳಗೆ ಬೀಜ ಚಿಗುರಿ, ಬಳ್ಳಿ ಬೆಳೆಯಲಾರಂಭಿಸುತ್ತದೆ. ಬೆಳೆಯುವ ಬಳ್ಳಿಗೆ ಆಸರೆ ನೀಡಿ. ಮನೆ ತುಂಬಾ ಹಸಿರಿನ ವಾತಾವರಣ ನಿರ್ಮಾಣವಾಗುತ್ತದೆ. ಆದರೆ, ನಿರ್ವಹಣೆಗೆ ಸಮಯ ಕೊಡಬೇಕು.

ಪೈಪ್‌ನಲ್ಲಿ ದೊಡ್ಡ ಗಿಡಗಳನ್ನು ಬೆಳೆಸುವುದಕ್ಕಿಂತ ಚಿಕ್ಕ ಗಿಡಗಳನ್ನು ಬೆಳೆಯುವುದು ಒಳ್ಳೆಯದು. ಸೂರ್ಯನ ಕಿರಣಗಳು ನೇರವಾಗಿ ಬೀಳುವ ಸ್ಥಳವನ್ನು ಆಯ್ಕೆ ಮಾಡಲು ಮರೆಯದಿರಿ.

ಬಳ್ಳಿಗಳನ್ನು ಹಬ್ಬಿಸಿ: ಕಿಟಕಿಗಳ ಕಂಬಿ, ಗೋಡೆಗಳಲ್ಲಿ ಮನಿ ಪ್ಲಾಂಟ್‌, ಅಲ್ಲಾಮಂಡ್‌ ಕ್ರೀಪರ್‌ (ಕೋಟೆ ಹೂವು), ಅಮೃತಬಳ್ಳಿ ಸೇರಿದಂತೆ ವಿವಿಧ ಗಿಡಗಳನ್ನು ಹಬ್ಬಿಸಬಹುದು. ಕಿಟಕಿಯ ಮೇಲೆ ಒಂದು ಕಂಬಿಯನ್ನು ಕಟ್ಟಿ ಅಲ್ಲಿ ಅವುಗಳನ್ನು ಜೋತುಬೀಳುವಂತೆ ಇಡಬೇಕು. ಕಿಟಕಿಯಿಂದ ಬರುವ ಗಾಳಿ ಬೆಳಕು ಬಳ್ಳಿಗಳ ನಡುವೆ ಹಾದು ಮನೆಯ ಪಡಸಾಲೆ ಪ್ರವೇಶಿಸುತ್ತದೆ. ಮನೆಯ ಆವರಣ ಅಹ್ಲಾದಕರವಾಗಿರುತ್ತದೆ.

‘ತೂಗು ತೋಟ‘ದಲ್ಲಿ ದೊಡ್ಡಪತ್ರೆ, ತುಳಸಿ, ಅಮೃತಬಳ್ಳಿಯಂತಹ ಔಷಧೀಯ ಗಿಡಗಳನ್ನು ಮತ್ತು ಕೆಲವು ಬಳ್ಳಿಗಳನ್ನು ಬೆಳೆಸಬಹುದು. ಇವುಗಳನ್ನು ಮನೆಯ ದ್ವಾರದ ಎದುರು ನೇತುಹಾಕಬಹುದು. ಈ ಗಿಡಗಳನ್ನು ಸವರಿಕೊಂಡು ಬರುವ ಗಾಳಿಯನ್ನು ಸೇವಿಸಿದರೆ, ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಆಸಕ್ತಿ ಇದ್ದರೆ, ಲೆಟ್ಯೂಸ್, ಪುದೀನ, ಕೊತ್ತಂಬರಿಯಂತಹ ತರಕಾರಿಯನ್ನೂ ಬೆಳೆಸಬಹುದು. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಿರುವವರಿಗೆ ಇದೊಂದು ಉತ್ತಮ ಆಯ್ಕೆ.

‘ಕೊಕೊಪಿತ್‌‘ ಬೆಸ್ಟ್‌: ತೂಗು ತೋಟಗಳಲ್ಲಿ ಗಿಡಗಳನ್ನು ಬೆಳೆಸಲು ಮಣ್ಣು–ಗೊಬ್ಬರ–ಮರಳು ಮಿಶ್ರಣಕ್ಕಿಂತ ಕೊಕೊಪಿತ್‌ ಉತ್ತಮ ಮಾಧ್ಯಮ. ಕೊಕೊಪಿತ್ ಹಗುರವಾಗಿರುವುದರಿಂದ ಕುಂಡಗಳು/ಪೈಪ್‌ ಮೇಲೆ ಭಾರ ಬೀಳುವುದಿಲ್ಲ. ಸುಲಭವಾಗಿ ತೂಗು ಹಾಕಬಹುದು. ಕೊಕೊಪಿತ್‌ನಲ್ಲಿ ದೀರ್ಘಕಾಲ ನೀರು ಹಿಡಿದಿಟ್ಟುಕೊಳ್ಳುವ ಗುಣವಿದೆ. ಮಾತ್ರವಲ್ಲ, ರೋಗ–ರುಜಿನಗಳೂ ತೀರಾ ವಿರಳ. ಹೀಗಾಗಿ ನಿರ್ವಹಣೆಯೂ ಸುಲಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT